Advertisement

ಸಂಜೆ ಏಳು ಗಂಟೆ ರೈಲು ತಪ್ಪಿದರೆ ಮಧ್ಯರಾತ್ರಿವರೆಗೂ ನಿಲ್ದಾಣದಲ್ಲೇ

04:19 PM Dec 16, 2017 | Team Udayavani |

ಬೆಂಗಳೂರು: ಪ್ರಯಾಣಿಕರ ಗಮನಕ್ಕೆ. ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಸಂಜೆ 7 ಗಂಟೆಗೆ ನಿಲ್ದಾಣದಿಂದ ಹೊರಡಲಿರುವುದೇ ಕಡೆಯ ರೈಲು. ಇದು ತಪ್ಪಿದರೆ, ಮಧ್ಯರಾತ್ರಿ 12ರವರೆಗೆ ಮೆಜೆಸ್ಟಿಕ್‌ನಲ್ಲೇ ಕಾಲ ಕಳೆಯಬೇಕು! ನಿತ್ಯ ಬೆಂಗಳೂರು-ಮೈಸೂರು ನಡುವೆ ಸಂಚರಿಸುವವರಿಗೆ ಈ ರೀತಿಯ ಸೂಚನೆ ನೀಡುವ ಮೂಲಕ ನೈರುತ್ಯ ರೈಲ್ವೆ ಶಾಕ್‌ ನೀಡಿದೆ.

Advertisement

ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬೆಂಗಳೂರು-ಮಂಗಳೂರು-ಕಾರವಾರ ರೈಲು 2018ರ ಫೆಬ್ರವರಿ 10ರಿಂದ ಪ್ರತಿ ಭಾನುವಾರದಿಂದ ಬುಧವಾರದವರೆಗೆ ಕುಣಿಗಲ್‌ ಮಾರ್ಗವಾಗಿ ಕಾರ್ಯಾಚರಣೆ ಮಾಡಲಿದೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದರಿಂದ ವಾರದ ಈ ನಾಲ್ಕು ದಿನಗಳು ಈ ರೈಲು ಅಲಭ್ಯವಾಗಲಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನಾನುಕೂಲ ಆಗಲಿದೆ.

ಪ್ರತಿದಿನ ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಹೊರಡುವ ಈ ರೈಲು ಫೆಬ್ರವರಿಯಿಂದ 7.15ಕ್ಕೆ ಬೆಂಗಳೂರಿನಿಂದ ಕುಣಿಗಲ್‌ ಮಾರ್ಗವಾಗಿ ಮಂಗಳೂರಿಗೆ ತೆರಳಲಿದೆ. ಹಾಗಾಗಿ, ಮೈಸೂರು ಮಾರ್ಗದ ಪ್ರಯಾಣಿಕರಿಗೆ 7 ಗಂಟೆಗೆ ಇಲ್ಲಿಂದ ನಿರ್ಗಮಿಸುವ ಪುಷ್‌ಪುಲ್‌ ರೈಲು ಮಾತ್ರ ಲಭ್ಯವಾಗಲಿದೆ. ಇದು ತಪ್ಪಿದರೆ, ರಾತ್ರಿ 12ಕ್ಕೆ ಹೊರಡುವ ಪ್ಯಾಸೆಂಜರ್‌ ರೈಲು ಬರುವವರೆಗೆ ಕಾಯಬೇಕು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

ಬೆಂಗಳೂರು-ರಾಮನಗರ ನಡುವೆ ಉಪನಗರ ರೈಲು ಸೇವೆ ಇದೆ. ಇದನ್ನು ಮುಂದಿನ ದಿನಗಳಲ್ಲಿ ಮೈಸೂರಿನವರೆಗೆ ವಿಸ್ತರಿಸುವ ಚಿಂತನೆ ಇದೆ. ಇದರಿಂದ ಮೈಸೂರಿಗೆ ತೆರಳುವ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದಂತಾಗಲಿದೆ. ಇನ್ನೂ ಈ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿದ್ದು, ಅಂತಿಮಗೊಂಡ ನಂತರ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ ಇ. ವಿಜಯಾ ತಿಳಿಸಿದ್ದಾರೆ.

ಪರ್ಯಾಯ ಸೇವೆಗೆ ಆಗ್ರಹ: ಇಡೀ ರಾಜ್ಯದಲ್ಲಿ ಬೆಂಗಳೂರು-ಮೈಸೂರು ನಡುವೆ ಅತಿ ಹೆಚ್ಚು 20 ವಿವಿಧ ಪ್ರಕಾರದ ರೈಲುಗಳು ಸಂಚರಿಸುತ್ತವೆ.  ಪ್ರತಿದಿನ ಕನಿಷ್ಠ ಸುಮಾರು 20 ಸಾವಿರ ಜನ ಸಂಚರಿಸುತ್ತಾರೆ. ಅದರಲ್ಲೂ ರಾಮನಗರ, ಚನ್ನಪಟ್ಟಣ ಸೇರಿದಂತೆ ಸುತ್ತಮುತ್ತಲಿನಿಂದ 5-6 ಸಾವಿರ ಜನ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಾರೆ. ಅವರಲ್ಲಿ ಬಹುತೇಕರು 8.30ರ ರೈಲು ಅವಲಂಬಿಸಿದ್ದಾರೆ.

Advertisement

ಜತೆಗೆ ಪ್ರವಾಸಿ ತಾಣವಾಗಿರುವ ಮೈಸೂರಿಗೂ ಹೆಚ್ಚು ಜನ ತೆರಳುತ್ತಾರೆ. ಈಗ ಏಕಾಏಕಿ ಮಾರ್ಗ ಬದಲಾವಣೆಯಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಆದ್ದರಿಂದ ಕೂಡಲೇ ಇದಕ್ಕೆ ಪರ್ಯಾಯ ಸೇವೆ ಕಲ್ಪಿಸಬೇಕು ಎಂದು ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ ಟಿ.ಪಿ. ಲೋಕೇಶ್‌ ಆಗ್ರಹಿಸುತ್ತಾರೆ.  ಬೆಂಗಳೂರಿನಿಂದ ಕುಣಿಗಲ್‌ ಮಾರ್ಗವಾಗಿ ಮಂಗಳೂರಿಗೆ ಹೋಗುವುದರಿಂದ ಸುಮಾರು 80 ಕಿ.ಮೀ. ಕಡಿಮೆ ಆಗುವುದರ ಜತೆಗೆ 2 ತಾಸು ಉಳಿತಾಯ ಕೂಡ ಆಗಲಿದೆ.

ಪ್ರಯಾಣಿಕರ ಹಿತದೃಷ್ಟಿಯಿಂದ ಇದು ಒಳ್ಳೆಯದು. ಇದನ್ನು ನಾಲ್ಕು ದಿನಕ್ಕೆ ಸೀಮಿತಗೊಳಿಸದೆ, ವಾರವಿಡೀ ವಿಸ್ತರಿಸಲಿ. ಆದರೆ, ಇದಕ್ಕೆ ಪರ್ಯಾಯವಾಗಿ ಮೈಸೂರಿಗೆ ರಾತ್ರಿ 8ರಿಂದ 8.30ರ ಅವಧಿಯಲ್ಲಿ ಮೆಮು ರೈಲು ಸೇವೆ ಆರಂಭಿಸಬೇಕು. ಇದರಿಂದ ಸಾವಿರಾರು ಜನರಿಗೆ ಅನುಕೂಲ ಆಗಲಿದೆ ಎಂದು ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next