Advertisement

ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಮಲ ಪಡೆಯ ಸಾಮ್ರಾಜ್ಯಕ್ಕೆ ಗೆಲುವು

12:19 PM May 24, 2019 | Team Udayavani |

ಬೆಳಗಾವಿ: ಗೆಲುವಿನ ಸರ್ದಾರ ಎಂಬ ಖ್ಯಾತಿ ಗಳಿಸಿರುವ ಸುರೇಶ ಅಂಗಡಿಗೆ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಭಾರೀ ಮುನ್ನಡೆ ನೀಡಿದ್ದು, 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಕಮಲ ಪಡೆ ಎಲ್ಲ ಕ್ಷೇತ್ರಗಳಲ್ಲೂ ಭದ್ರವಾಗಿದೆ ಎಂದು ತೋರಿಸಿಕೊಟ್ಟಿದೆ.

Advertisement

ಸುರೇಶ ಅಂಗಡಿ ಅವರ ಈ ನಾಲ್ಕನೇ ಗೆಲುವು ಬಿಜೆಪಿ ಪಾಳೆಯಕ್ಕೆ ಹೊಸ ಶಕ್ತಿ ತಂದು ಕೊಟ್ಟಿದ್ದು, ಎಲ್ಲ ಕಡೆಯೂ ಕಮಲ ಅರಳಿದೆ. ಎಲ್ಲ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿದ್ದು, ಒಂದೇ ಒಂದೂ ಕ್ಷೇತ್ರ ಬಿಡದೇ ಎಲ್ಲ ಕಡೆಗಳಲ್ಲೂ ಅಂಗಡಿ ಮುನ್ನಡೆ ಕಾಯ್ದುಕೊಂಡು ಜಯಭೇರಿ ಬಾರಿಸಿದ್ದಾರೆ. ಇದು ಕೈ ಕಾರ್ಯಕರ್ತರಲ್ಲಿ ನಿರಾಸೆಯನ್ನುಂಟು ಮಾಡಿದೆ. ನಿರೀಕ್ಷೆಗೂ ಮೀರಿ ಅಂಗಡಿ ಮತಗಳನ್ನು ಗಳಿಸಿ ಮುನ್ನಡೆ ಪಡೆದಿದ್ದು ಬಿಜೆಪಿ ಮುಖಂಡರ ಅಚ್ಚರಿಗೆ ಕಾರಣವಾಗಿದೆ.

ರೆಬೆಲ್ ನಡೆಯಿಂದ ಬಿಜೆಪಿ ಖುಷ್‌: ಒಂದೆಡೆ ಕಾಂಗ್ರೆಸ್‌ನ ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಅವರ ವೈಮನಸ್ಸು ಹಾಗೂ ಇನ್ನೊಂದೆಡೆ ಕಾಂಗ್ರೆಸ್‌ ಅಭ್ಯರ್ಥಿಯ ಹೊಸ ಮುಖದಿಂದ ಕಂಗೆಟ್ಟ ಕಾಂಗ್ರೆಸ್‌ ಬುಡದಿಂದ ಮೇಲೇಳಲು ಆಗಲೇ ಇಲ್ಲ. ಆಂತರಿಕವಾಗಿ ರಮೇಶ ಅವರು ತಮ್ಮ ಸ್ವಪಕ್ಷದ ವಿರುದ್ಧ ಕೆಂಡ ಕಾರುವ ಮೂಲಕ ಹಾಗೂ ಬಹಿರಂಗವಾಗಿ ಕಾಂಗ್ರೆಸ್‌ ಪರ ಪ್ರಚಾರ ಮಾಡದಿರುವುದು ಕಾಂಗ್ರೆಸ್‌ನ ಭಾರೀ ಹಿನ್ನಡೆಗೆ ಕಾರಣವಾಯಿತು. ಭಿನ್ನಮತ ಸ್ಫೋಟಗೊಂಡಾಗ ಕಾಂಗ್ರೆಸ್‌ ವರಿಷ್ಠರು ಇದಕ್ಕೆ ತೇಪೆ ಹಚ್ಚಲು ಮುಂದಾಗಿದ್ದರೂ ರಮೇಶ ಜಾರಕಿಹೊಳಿ ಮಾತ್ರ ಸೊಪ್ಪು ಹಾಕಿರಲಿಲ್ಲ.

ಹೆಬ್ಟಾಳಕರ ಕೋಟೆಯಲ್ಲಿ ಕೈಛಿದ್ರ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ಶಾಸಕರಾಗಿದ್ದ ಲಕ್ಷ್ಮೀ ಹೆಬ್ಟಾಳಕರ ಕೂಡ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಅತಿ ಹೆಚ್ಚು ಮತಗಳ ಅಂತರ ಬಿಜೆಪಿಗೆ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಗ್ರಾಮೀಣ ಕ್ಷೇತ್ರದಲ್ಲಿ ಇಷ್ಟೊಂದು ಹೆಚ್ಚಿನ ಮತಗಳ ಅಂತರ ಸಿಕ್ಕಿದೆ. 70 ಸಾವಿರಕ್ಕೂ ಹೆಚ್ಚು ಮತಗಳ ಅಂತರವನ್ನು ಬಿಜೆಪಿ ಮುಖಂಡರೂ ನಿರೀಕ್ಷಿಸಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹೆಬ್ಟಾಳಕರ ವಿರುದ್ಧ ಬಿಜೆಪಿಯ ಸಂಜಯ ಪಾಟೀಲ 50 ಸಾವಿರ ಅಂತರದಿಂದ ಸೋತಿದ್ದರು. ಒಟ್ಟು 1 ಲಕ್ಷಕ್ಕೂ ಹೆಚ್ಚು ಮತಗಳು ಕಾಂಗ್ರೆಸ್‌ಗೆ ಸಿಕ್ಕಿದ್ದವು.

ಅರಭಾವಿಯಿಂದಲೂ ಮತಗಳ ಸುರಿಮಳೆ: ಅರಭಾವಿ ಕ್ಷೇತ್ರದಲ್ಲಿಯೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಸಿಕ್ಕ ಅಂತರಕ್ಕಿಂತಲೂ ಹೆಚ್ಚು ಈ ಬಾರಿ ಸಿಕ್ಕಿದೆ. ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ಶ್ರಮಿಸಿದ್ದಾರೆ. 45 ಸಾವಿರಕ್ಕಿಂತಲೂ ಹೆಚ್ಚಿನ ಅಂತರ ಇಲ್ಲಿ ಅಂಗಡಿಗೆ ಸಿಕ್ಕಿದ್ದು, ಇದರಿಂದ ಕಾಂಗ್ರೆಸ್‌ ಮುಖಂಡರಿಗೆ ಭಾರೀ ಮುಖಭಂಗವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಯ ಸಾಧುನವರ ಅವರ ಸ್ವ ಕ್ಷೇತ್ರ ಬೈಲಹೊಂಗಲದಲ್ಲಿಯೂ ಕಾಂಗ್ರೆಸ್‌ಗೆ ಮತದಾರರು ಕೈಕೊಟ್ಟಿದ್ದಾರೆ. ಕಾಂಗ್ರೆಸ್‌ ಶಾಸಕ ಶಿವಾನಂದ ಕೌಜಲಗಿ ಇಲ್ಲಿದ್ದರೂ ಕೈ ಪಾಳೆಯಕ್ಕೆ ಮತ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಹೆಚ್ಚಿನ ಅಂತರ ಇಲ್ಲಿ ಸಿಗಬಹುದೆಂಬ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. ಎಲ್ಲ ಕಡೆಯೂ ಮೋದಿ ಅಲೆಯಿಂದಾಗಿ ಸಾಧುನವರ ಕಡಿಮೆ ಮತಗಳು ಪಡೆಯುವಂತಾಗಿದೆ.

Advertisement

ಉತ್ತರ-ದಕ್ಷಿಣದಲ್ಲಿ ಮತ್ತಷ್ಟು ಭದ್ರ: ನಿರೀಕ್ಷೆಯಂತೆ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಅಂತರ ಸಿಕ್ಕಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 70 ಸಾವಿರಕ್ಕಿಂತ ಹೆಚ್ಚಿನ ಮತಗಳ ಅಂತರ ಪಡೆದಿದ್ದ ಬಿಜೆಪಿಗೆ ಈ ಸಲವೂ ಯಾವುದೇ ನಿರಾಸೆ ಆಗಿಲ್ಲ. ಶಾಸಕ ಅಭಯ ಪಾಟೀಲ ಅವರ ಪ್ರಯತ್ನದಿಂದಾಗಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಂಡಿದ್ದು, ಹೆಚ್ಚಿನ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಕಳೆದ 2018ರ ಚುನಾವಣೆಯಲ್ಲಿ ಸೋತು ಸುಣ್ಣಗಾಗಿದ್ದ ಫಿರೋಜ ಸೇಠ ಈ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಮತ ದೊರಕಿಸುವಲ್ಲಿ ಸೋತಿದ್ದಾರೆ.

ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅನಿಲ ಮಾಮನಿ ಇದ್ದರೂ ಹೆಚ್ಚಿನ ಮತಗಳ ಅಂತರ ಇಲ್ಲಿ ಬಿಜೆಪಿಗೆ ಸಿಕ್ಕಿಲ್ಲ. 13ನೇ ಸುತ್ತಿನ ಮತ ಎಣಿಕೆ ವೇಳೆ ಕೇವಲ 8 ಸಾವಿರ ಮತಗಳ ಅಂತರ ಪಡೆದಿದ್ದ ಬಿಜೆಪಿ ನಂತರದಲ್ಲಿಯಯೂ ಇದೇ ಅಂತರವನ್ನು ಕಾಯ್ದುಕೊಳ್ಳುವತ್ತ ಮುನ್ನಡೆದಿತ್ತು.

ಮೂರು ಚುನಾವಣೆಗಿಂತಲೂ ದುಪ್ಪಟ್ಟು ಅಂತರ ಕಳೆದ ಮೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸುರೇಶ ಅಂಗಡಿ ಪಡೆದಿದ್ದ ಮತಗಳನ್ನು ಒಟ್ಟುಗೂಡಿಸಿದರೂ ಅದಕ್ಕಿಂತ ದುಪ್ಪಟ್ಟು ಮತಗಳ ಅಂತರ 2019ರಲ್ಲಿ ಸಿಕ್ಕಂತಾಗಿದೆ. 3 ಲಕ್ಷದ ಗಡಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮೂರು ಬಾರಿ ಆಯ್ಕೆಯಾಗಿದ್ದರೂ ಆಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಜನರ ಬೇಸರಕ್ಕೆ ಕಾರಣವಾಗಿದ್ದರೂ 2019ರಲ್ಲಿ ಅತಿ ಹೆಚ್ಚು ಮತಗಳ ಅಂತರ ಸಿಕ್ಕಿದ್ದೇ ದೊಡ್ಡ ಇತಿಹಾಸವಾಗಿದೆ.

ಸಾಹುಕಾರರ ನಾಡಲ್ಲಿ ಕಮಲ ಕಿಲಕಿಲ

ಗೋಕಾಕದಲ್ಲಿ ರಮೇಶ ಜಾರಕಿಹೊಳಿಯನ್ನು ಮಣ್ಣು ಮುಕ್ಕಿಸಲು ಸಹೋದರ ಸತೀಶ ಜಾರಕಿಹೊಳಿ ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಸತೀಶ ಹಾಗೂ ಲಖನ ಜಾರಕಿಹೊಳಿ ಇಬ್ಬರೂ ಜೋಡಿಯಾಗಿ ಕ್ಷೇತ್ರದಲ್ಲಿ ತಿರುಗಾಡಿ ಮತ ಗಳಿಸಲು ಹಲವು ಪ್ರಯತ್ನ ಮಾಡಿದರೂ ಕಾಂಗ್ರೆಸ್‌ಗೆ ಲಾಭವಾಗಲಿಲ್ಲ. ರಮೇಶ ಜಾರಕಿಹೊಳಿ ಈ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವ ಮೂಲಕ ಕೈವರಿಷ್ಠರಿಗೆ ತಮ್ಮ ತಾಕತ್ತು ತೋರಿಸಿಕೊಟ್ಟರು. ಸಾಹುಕಾರರ ಸಾಮ್ರಾಜ್ಯಕ್ಕೆ ಮೊದಲ ಬಾರಿಗೆ ಬಿಜೆಪಿ ಪ್ರವೇಶ ಪಡೆದಂತಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next