Advertisement

ಇಷ್ಟಾರ್ಥ ನೆರವೇರಿಸುವ ಬಯಲು ಬಸವ

11:42 AM Nov 10, 2021 | Team Udayavani |

ವಿಜಯಪುರ: ಪಟ್ಟಣದ ಪುರಾತನ ದೇವಾಲಯ ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇಗುಲ. ಈ ಸ್ಥಳದಲ್ಲಿ ಜನ ವಾಸ ಮಾಡಲು ಆರಂಭಿಸಿದಾಗಿಂದ ಇಲ್ಲಿನ ಬಯಲೊಂದರಲ್ಲಿ ಕಾಣಿಸಿಕೊಂಡ ಬಸವನ ವಿಗ್ರಹವಿದು. ಜನ ಇದಕ್ಕೆ ಪೂಜಿಸುತ್ತಾ, ಕೈಮುಗಿಯುತ್ತಾ ಬಸವಣ್ಣನ ಕಿವಿಯಲ್ಲಿ ಗುಟ್ಟಾಗಿ ಕೇಳಿದ ಕೋರಿಕೆ ಸದ್ದಿಲ್ಲದೇ ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು.

Advertisement

ಬಸವಣ್ಣನಿಗೆ ಆಶ್ರಯ: ಮುಂದಿನ ದಿನಗಳಲ್ಲಿ ಜನ ನಮ್ಮನ್ನು ಕಾಯುವ ದೇವರು ಬಯಲಲ್ಲಿ ಇದ್ದಾನೆ ಎಂದು ಒಂದು ಸೂರು ಕಟ್ಟಿದರು. ಅದಾದ ನಂತರ ಗುಡಿ ಭದ್ರವಾಗಿರಲೆಂದು ಬಾಗಿಲು ಇಡಲಾಯಿತು. ಆದರೆ ಮರುದಿನ ಬೆಳಗ್ಗೆ ನೋಡುವಷ್ಟರಲ್ಲಿ ಇರಿಸಿದ ಬಾಗಿಲು ಪಕ್ಕದಲ್ಲಿ ಇದ್ದ ಕಲ್ಯಾಣಿಯ ನೀರಿನಲ್ಲಿ ಬಿದ್ದಿರುತ್ತಿತ್ತು.

ಇದನ್ನೂ ಓದಿ:- ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಮಹಿಳೆ :ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ರಾತ್ರೋ ರಾತ್ರಿ ಆಗುವ ಈ ವಿಚಿತ್ರ ಭಕ್ತರಿಗೆ ಯಕ್ಷಪ್ರಶ್ನೆಯಾಯಿತು. ಮತ್ತೆ ಮತ್ತೆ ಗರ್ಭಗುಡಿಗೆ ಬಾಗಿಲಿನ ವ್ಯವಸ್ಥೆ ಮಾಡಲಾಯಿತು. ಆದರೆ, ಪ್ರತಿಸಲವೂ ಬಾಗಿಲು ಕಳಚಿ ಬೀಳುತ್ತಿತ್ತು. ಕೊನೆಗೆ ಭಕ್ತಾದಿಗಳು, ಊರಿನ ಜನರು ಬಯಲು ಬಸವೇಶ್ವರನಿಗೆ ಬಾಗಿಲು ಹಾಕಿ ಬಂಧನ ಮಾಡಬಾರದೆಂಬ ತೀರ್ಮಾನಕ್ಕೆ ಬಂದು ಗರ್ಭಗುಡಿ ಮಾತ್ರವೇ ಇರುವಂತೆ ವ್ಯವಸ್ಥೆ ಮಾಡಲಾಯಿತು.

ಬಸವಣ್ಣನಿಂದ ಸಿಗುವ ಹೂ ಪ್ರಸಾದ: ತಮ್ಮ ಕಾರ್ಯಸಿದ್ಧಿ ಆಗುವ ಬಗ್ಗೆ ದೇವರ ಬಳಿ ಹೂ ಪ್ರಸಾದ ಕೇಳಬಹುದು. ದೇವರು ಬಲದಿಂದ ಹೂ ಬೀಳಿಸಿದರೆ ಕಾರ್ಯ ಶೀಘ್ರ ಫ‌ಲ ನೀಡುತ್ತದೆ ಎಂದು ಅರ್ಥ. ಎಡ ಭಾಗದಿಂದ ಪ್ರಸಾದ ನೀಡಿದರೆ ಕಾರ್ಯ ತಡವಾಗುತ್ತದೆ ಎಂದು ಅರ್ಥ.

Advertisement

ಕಿವಿಯಲ್ಲಿ ಹೇಳುವ ಕೋರಿಕೆ: ಯಾವ ಜಾತಿ ಮತ ಬೇಧವೂ ಇಲ್ಲದೇ ಯಾರೂ ಬೇಕಾದರೂ ಗರ್ಭಗುಡಿಯ ಬಸವಣ್ಣನಿಗೆ ತಮ್ಮ ಕೋರಿಕೆಯನ್ನು ಕಿವಿಯಲ್ಲಿ ಹೇಳಿಕೊಳ್ಳಬಹುದು. ಕೋರಿಕೆ ಈಡೇರಿದ ಮೇಲೆ ಭಕ್ತರು ಬಂದು ಹರಕೆ ತೀರಿಸುತ್ತಾರೆ. ಬಹಳಷ್ಟು ಭಕ್ತಾದಿಗಳಿಗೆ ಈ ಅನುಭವವಾಗಿದ್ದು, ಹೆಚ್ಚು ಪ್ರಚುರತೆ ಪಡೆಯುತ್ತಿದೆ.

ಅಭಿವೃದ್ಧಿ ಸಮಿತಿ ಕಾರ್ಯಕ್ಕೆ ಶ್ಲಾಘನೆ: ದೇಗುಲದಲ್ಲಿ ಪೂಜೆ ಪುರಸ್ಕಾರಗಳು ನಿರಂತರವಾಗಿ ನಡೆಯುವಂತೆ ಮತ್ತು ಅಭಿವೃದ್ಧಿ ಕೆಲಸದ ಹೊಣೆಹೊತ್ತ ಬಸವರಾಜ್‌ ಒಡೆಯರ್‌ ಅರ್ಚಕರ ಕುಟುಂಬ ದೇವಾಲಯದ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ದೂರದ ಊರಿ ನಿಂದ ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಿದೆ. ಸರಳ ಮದುವೆ, ನಾಮಕರಣ, ಹೂ ಮುಡಿಸುವ ಶಾಸ್ತ್ರ ಹೀಗೆ ಭಕ್ತಾದಿಗಳ ಅನುಕೂಲಕ್ಕೆ ಅಣಿಮಾಡಿಕೊಡಲಾಗುತ್ತದೆ.

 ಕಡಲೆಕಾಯಿ ಪರಿಷೆ

ಕಾರ್ತಿಕ ಮಾಸದ ಕಡೆಯ ಸೋಮವಾರ ದೇವಾಲಯದಲ್ಲಿ ಪ್ರತಿ ವರ್ಷ ಕಡಲೆ ಕಾಯಿ ಪರಿಷೆ ನಡೆಯುತ್ತದೆ. ಬಸವಣ್ಣನಿಗೆ ಪ್ರಿಯವಾದ ಕಡಲೆ ಕಾಯಿಯನ್ನು ಮೊದಲು ದೇವರಿಗೆ ನೈವೇದ್ಯ ಸಲ್ಲಿಸಿ ದೇವಾಲಯಕ್ಕೆ ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಭಕ್ತಾದಿಗಳು ತಮ್ಮ ಆರೋಗ್ಯ, ಅಭಿವೃದ್ಧಿ, ಯಶಸ್ಸು, ಐಶ್ವರ್ಯ, ಸುಖ, ಶಾಂತಿ ಬಯಸಿ ಬಯಲು ಬಸವೇಶ್ವರ ಸ್ವಾಮಿಯ ಮೊರೆ ಹೋಗುತ್ತಾರೆ, ಸಿದ್ಧಿ ಪಡೆಯುತ್ತಾರೆ.

ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ

ಶ್ರೀಬಯಲು ಬಸವೇಶ್ವರ ಅನೇಕರಿಗೆ ಮನೆ ದೇವರಾಗಿ¨ªಾನೆ. ಕಾರ್ತಿಕ ಮಾಸದ ಸೋಮವಾರಗಳಲ್ಲಿ ಸ್ವಾಮಿಯ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಬೆಣ್ಣೆ ಅಲಂಕಾರ, ಹೂವಿನ ಅಲಂಕಾರವಾಗುತ್ತದೆ. ಮೂಲವಿಗ್ರಹಕ್ಕೆ ಹೊಂದುವಂತಹ ಬೆಳ್ಳಿಯ ಕವಚ ಮಾಡಿಸಿದ್ದು, ವಿಶೇಷ ದಿನಗಳಂದು ದೇವರಿಗೆ ಬೆಳ್ಳಿಯ ಕವಚ ಧಾರಣೆ ಮಾಡುತ್ತಾರೆ.

ಗರ್ಭಗುಡಿಗೆ ಪ್ರವೇಶ

ವಿಶೇಷವಾಗಿ ಬೆಣ್ಣೆ ಮತ್ತು ಹೂವಿನ ಅಲಂಕಾರ ಮಾಡಿದ ದಿನಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯ ದಿನಗಳಲ್ಲಿ ಗರ್ಭಗುಡಿಯ ಬಸವಣ್ಣನ ಪಾದ ಸ್ಪರ್ಶ ಮಾಡಿ ಕೋರಿಕೆ ಈಡೇರಿಸುವಂತೆ ಕೇಳಿಕೊಳ್ಳುವ ಅವಕಾಶವಿದೆ.

ಮೊದಲ ಆಹ್ವಾನ ಬಸವಣ್ಣನಿಗೆ

ಕೋರಿಕೆ ಈಡೇರಿದವರು ಹರಕೆ ತೀರಿಸಲು ಬರುತ್ತಾರೆ. ಹಣ್ಣು ಕಾಯಿ ಮಾಡಿಸುತ್ತಾರೆ. ಮದುವೆಯ ಕರೆಯೋಲೆಯನ್ನು ಮೊದಲು ದೇವರಿಗೆ ನೀಡಿ ಆಹ್ವಾನಿಸಿ ಹರಸು ಎಂದು ಕೈ ಮುಗಿಯುತ್ತಾರೆ.

 “ವೈದ್ಯನಾದರೂ ಪ್ರತಿ ಕಾಯಕವನ್ನು ಸಮರ್ಪಣಾ ಭಾವದಿಂದ ಶ್ರೀ ಬಯಲು ಬಸವೇಶ್ವರಸ್ವಾಮಿಗೆ ಅರ್ಪಿಸುತ್ತೇನೆ. ಎಷ್ಟೋ ಸಮಸ್ಯೆಗಳು ಆಶ್ಚರ್ಯಕರ ರೀತಿಯಲ್ಲಿ ಪರಿಹಾರವಾಗಿದೆ. ನಮ್ಮ ತಂದೆ ಈ ದೇವಾಲಯದ ಅರ್ಚಕರಾಗಿ ವರ್ಷಾನುಗಟ್ಟಲೇ ಸೇವೆ ಸಲ್ಲಿಸಿದ್ದು, ನಾವು ದೇವಾಲಯದ ಅಭಿವೃದ್ಧಿಗೆ ತನು ಮನ ಧನ ಅರ್ಪಿಸಿ ಸೇವೆ ಸಲ್ಲಿಸುತ್ತಿದ್ದೇವೆ.” – ಡಾ.ಬಿ.ವಿಜಯಕುಮಾರ್‌ ಆರಾಧ್ಯ, ಅರ್ಚಕ ಬಸವರಾಜ್‌ ಒಡೆಯರ್‌ ಪುತ್ರ

 “ಮನೆ, ಮಕ್ಕಳು, ಜೀವನ ಸಮೃದ್ಧಿಯಿಂದ ಇರಲು ಶ್ರೀ ಬಯಲು ಬಸವೇಶ್ವರ ಸ್ವಾಮಿಯ ಅನುಗ್ರಹವೇ ಕಾರಣ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕಣ್ಣಿಗೆ ಕಾಣದ ಶಕ್ತಿಯು ನಮ್ಮನ್ನು ಸದಾಕಾಲ ರಕ್ಷಿಸುತ್ತಿದೆ ಎಂದರೆ ಅದು ಭಗವಂತನ ಅನುಗ್ರಹ.” – ಸುಜಾತ, ಅಧ್ಯಕ್ಷೆ, ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇಗುಲ ಅಭಿವೃದ್ಧಿ ಸಮಿತಿ

– ಅಕ್ಷಯ್‌ ವಿ.ವಿಜಯಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next