Advertisement

ಜಿಲ್ಲೆಯಲ್ಲಿ 23, 24ಕ್ಕೆ ನಿಷೇಧಾಜ್ಞೆ ಜಾರಿ

06:43 AM May 19, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಏ.18 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಫ‌ಲಿತಾಂಶ ಪ್ರಕಟಣೆಗೆ ಕೇವಲ 4 ದಿನ ಮಾತ್ರ ಬಾಕಿದ್ದು, ಫ‌ಲಿತಾಂಶ ಪ್ರಕಟವಾಗುವ ಮೇ 23 ಹಾಗೂ 24 ರಂದು ಎರಡು ದಿನ ಜಿಲ್ಲಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್‌ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದ್ದಾರೆ.

Advertisement

24 ರ ಮಧ್ಯರಾತ್ರಿಯವರೆಗೆ ಜಾರಿ: 23 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ -7ರ ಸಮೀಪ ಇರುವ ನಾಗಾರ್ಜುನ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆ ಸಂಬಂಧವಾಗಿ ಅಂದು ಬೆಳಗ್ಗೆ 6ರಿಂದ 24 ರ ಮಧ್ಯರಾತ್ರಿಯವರೆಗೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಚುನಾವಣೆಯ ಫ‌ಲಿತಾಂಶದ ಬಳಿಕ ಸಮಾಜಘಾತುಕ ಶಕ್ತಿಗಳು ಶಾಂತಿ ಭಂಗ ಉಂಟು ಮಾಡುವ ಸಾಧ್ಯತೆಗಳಿದ್ದು, ಅಹಿತಕರ ಘಟನೆಗಳು ಉಂಟಾಗುವ ಸಂಭವ ಇರುವುದರಿಂದ ತಡೆಯುವ ಸಲುವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅವಶ್ಯವಾಗಿರುವ ಹಿನ್ನೆಲೆಯಲ್ಲಿ ದಂಡ ಪ್ರಕ್ರಿಯಾ ಸಂತೆ 1973 ರ ಕಲಂ 144 ರನ್ವಯ ನಿಷೇದಾಜ್ಞೆಯನ್ನು ಹೊರಡಿಸುವ ಮೂಲಕ ನಿರ್ಬಂದಿಸುವುದು ಅವಶ್ಯಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದ್ದಾರೆ.

ಶುಭಾ ಸಮರಂಭಕ್ಕೆ ಅನ್ವಯಿಸಲ್ಲ: ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ ಅವಧಿಯಲ್ಲಿ ಸಾರ್ವಜನಿಕರು ಸಕಾರಣಲ್ಲದೇ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮುಂತಾದವುಗಳಲ್ಲಿ ಗುಂಪು ಸೇರುವುದನ್ನು ನಿಷೇಧಿಸಿದೆ. ಯಾವುದೇ ಸಂತೆ, ಜಾತ್ರೆ ಮತ್ತು ಇತರೆ ಜನಸಮೂಹ ಸೇರುವುದನ್ನು ನಿಷೇಧಿಸಿದೆ.

ಈ ನಿಷೇಧಾಜ್ಞೆಯು ಮದುವೆ, ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶವ ಸಂಸ್ಕಾರಕ್ಕೆ ಹಾಗೂ ಚುನಾವಣಾ ಸಂಬಂಧ ಏರ್ಪಡಿಸಲಾಗಿರುವ ಮತ ಕೇಂದ್ರಕ್ಕೆ ಅನ್ವಯಿಸುವುದಿಲ್ಲ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಮೆರವಣಿಗೆ ಹಾಗೂ ಪಟಾಕಿ ಅಥವಾ ಬಾಣ ಹಾಗೂ ಬಿರುಸುಗಳನ್ನು ಹಚ್ಚುವುದು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳು, ಗೆಲುವಿನ ಸಂಭ್ರಮಗಳನ್ನು ನಡೆಸಬಾರದು.

Advertisement

ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಅಥವಾ ಪದ ಹಾಡುವುದು, ಚೇಷ್ಠೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಅಥವಾ ಪ್ರಸಾರ ಮಾಡುವುದು, ಪ್ರಕಟಣಾ ಪತ್ರಿಕೆಗಳ ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ, ಭಿತ್ತಿ ಪತ್ರಗಳನ್ನು ಅಂಟಿಸುವುದರಿಂದ, ಸಭ್ಯತನ, ಸದಾಚಾರ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವಂತೆ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ.

ಬಂದ್‌, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ, ಪ್ರದರ್ಶನ, ಪೂರಕ ಚಟುವಟಿಕೆಗಳು, ಯಾವುದೇ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸುವ ಹಾಗೂ ವಿರೂಪಗೊಳಿಸುವ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿಯ ಜಾತಿ-ಧರ್ಮ, ಕೋಮು ಪಂಥಗಳಿಗೆ ಅಥವಾ ಸಾರ್ವಜನಿಕ ನೈತಿಕತೆಗೆ ಬಾಧಕ ಉಂಟು ಮಾಡಬಹುದಾದಂತಹ ಚಟುವಟಿಕೆಗಳನ್ನು ನಿಷೇಧಿಸಿ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆಯ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ನಿಷೇಧಾಜ್ಞೆ ವಿಧಿಸುವುದು ಅವಶ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೇ 23ರ ಬೆಳಗ್ಗೆ 6 ರಿಂದ ಮೇ 24 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ವಿಧಿಸಿ ಆದೇಶಿಸಿಲಾಗಿದೆ.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next