ವಿಜಯಪುರ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಇದ್ದರೂ ಪುರುಷ ಪ್ರಧಾನ ಸಮಾಜ ಮಹಿಳೆಯ ಧ್ವನಿಯನ್ನೇ ಹಕ್ಕುತ್ತಿರುವ ಯತ್ನಕ್ಕೆ ಮುಂದಾಗಿರುವುದು ಆತಂಕದ ಸಂಗತಿ ಎಂದು ಹಿರಿಯ ಪತ್ರಕರ್ತ ಡಿ.ವಿ. ರಾಜಶೇಖರ ಕಳವಳ ವ್ಯಕ್ತಪಡಿಸಿದರು.
ರವಿವಾರ ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಷಯಗಳು ಮತ್ತು ಮಾಧ್ಯಮ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಆರ್ಥಿಕ ಕ್ಷೇತ್ರದಲ್ಲಿ ಶೇ. 40ರಷ್ಟು ಮಹಿಳೆಯರು ದುಡಿಯುತ್ತಿದ್ದು ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ದೊಡ್ಡದಿದೆ. ಆದರೆ ಆರ್ಥಿಕ ವಿಷಯಗಳು ಮತ್ತು ಇನ್ನಿತರ ಗಂಭೀರ ವಿಷಯಗಳ ಕುರಿತು ಬರೆಯುವ ಮಹಿಳಾ ಪತ್ರಕರ್ತೆಯರನ್ನು ಮಾಧ್ಯಮಗಳಲ್ಲಿ ನಾವು ಕಾಣುತ್ತಿಲ್ಲ ಎಂದು ಬೇಸರಿಸಿದ ಅವರು, ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರದಂಥ ಪ್ರಕರಣದ ಸಂಗತಿಗಳನ್ನು ಜವಾಬ್ದಾರಿ ಮೀರಿ ಮನರಂಜನೆ ಎಂಬಂತೆ ಬಿತ್ತರ ಮಾಡುತ್ತಿರುವುದು ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಮರೆತಿರುವುದಕ್ಕೆ ಪ್ರತೀಕ ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಆರ್ಥಿಕ ಅಧಿಕಾರಿ ಆರ್.ಸುನಂದಮ್ಮ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆ ಕಾನೂನಿನ ಅಡಿಯಲ್ಲಿ ನ್ಯಾಯ ಕೇಳಿದರೂ ಸರಿಯಾದ ರೀತಿಯಲ್ಲಿ ನ್ಯಾಯ ಸಿಗುತ್ತಿಲ್ಲ. ಸಮಾಜದಲ್ಲಿ ನ್ಯಾಯ ದೊರಕದೆ ಸಾಯುತ್ತಿವೆ.
ದೇಶದಲ್ಲಿ ಶೇ. 80ರಷ್ಟು ಅತ್ಯಾಚಾರಗಳು ಮನೆಯಲ್ಲಿಯೇ ನಡೆಯುತ್ತಿವೆ. ಹೀಗಾದರೆ ಮಹಿಳೆಗೆ ಸುರಕ್ಷತೆಯ ಸ್ಥಳ
ಯಾವುದು ಎಂಬ ಪರಿಸ್ಥಿತಿ ಇದೆ. ಇಂದು ಮಹಿಳೆಗೆ ಈ ದುಸ್ಥಿತಿ ಒದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ರುದ್ರಣ್ಣ ಹರ್ತಿಕೋಟಿ, ಹಿರಿಯ ಪತ್ರಕರ್ತರಾದ ಬಂಡು ಕುಲಕರ್ಣಿ, ರಶ್ಮಿ ಎಸ್., ವಾಸುದೇವ ಹೆರಕಲ್, ಕೆ.ಎನ್.ರಮೇಶ ಕೆ., ಕೀರ್ತಿ ಇದ್ದರು.
ಹವ್ಯಾಸಿ ಪತ್ರಕರ್ತೆ ಡಾ| ಮಮತಾ ಕೆ.ಎನ್. ಅವರನ್ನು ಸನ್ಮಾನಿಸಲಾಯಿತು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಪ್ರಾಸ್ತಾವಿಕ ಮತನಾಡಿದರು. ಗೀತಮ್ಮ ಅಂಗಡಿ ಸ್ವಾಗತಿಸಿದರು. ಅಭಿಲಾಷಾ ಆರ್., ಸುವರ್ಣ ಕಂಬಿ ಪರಿಚಯಿಸಿದರು. ಜ್ಞಾನಜ್ಯೋತಿ ಚಾಂದಕವಠೆ ನಿರೂಪಿಸಿದರು. ಡಾ| ತಹಮೀನಾ ಕೋಲಾರ ವಂದಿಸಿದರು.