Advertisement

ಕತ್ತಲೆಯಲ್ಲಿದೆ ಬೆಳಕು ನೀಡುವವರ ಬದುಕು

09:49 AM Aug 18, 2019 | Sriram |

ವಿಶೇಷ ವರದಿ- ಉಡುಪಿ: ಮಳೆಗಾಲದಲ್ಲಿ ವಿದ್ಯುತ್‌ ಕೈ ಕೊಟ್ಟರೆ ಮೆಸ್ಕಾಂಗೆ ಕರೆ ಮಾಡುವ ಪ್ರಮೇಯ. ಸ್ವಲ್ಪ ಹೊತ್ತಿನಲ್ಲಿ ಬರುತ್ತದೆ ಎಂಬ ಅವರ ಸಮಜಾಯಿಷಿ. ಬಾರದಿದ್ದರೆ ಮತ್ತೆ ಕರೆ ಮಾಡಿ ಬೈಗುಳ… ಆದರೆ ವಿದ್ಯುತ್‌ ತಂತಿ ದುರಸ್ತಿ ಮಾಡಿ ಬೆಳಕು ನೀಡುವ ಆ ಮಂದಿಯ ಹಿಂದಿನ ಶ್ರಮ ಮಾತ್ರ ಅಪಾರ.

Advertisement

ಉಡುಪಿ ಜಿಲ್ಲೆಯಲ್ಲಿ ಸುಮಾರು 300ರಷ್ಟು ಲೈನ್‌ಮನ್‌ಗಳು ಹಾಗೂ ಮಳೆಗಾಲದಲ್ಲಿ ಹೆಚ್ಚುವರಿಯಾಗಿ 200 ಮಂದಿ ಗ್ಯಾಂಗ್‌ ಮನ್‌ಗಳು ಕರ್ತವ್ಯ ನಿರ್ವಹಿಸುತ್ತಾರೆ. ನಿರ್ದಿಷ್ಟ ಸಮಯ ಎಂಬ ಪರಿವೆ ಇವರಿಗಿಲ್ಲ. 24 ಗಂಟೆಯೂ ಅಲರ್ಟ್‌ ಆಗಿರಬೇಕಾಗುತ್ತದೆ.

ಮೈಮರೆತರೆ ಅಪಾಯ
ಲೈನ್‌ಮನ್‌ಗಳ ಕರ್ತವ್ಯ ಎಂದರೆ ಅಪಾಯಕಾರಿ ಕೆಲಸ. ಒಂದು ಕ್ಷಣ ಮೈಮರೆತರೂ ಪ್ರಾಣಕ್ಕೆ ಸಂಚಕಾರ ಬರಬಹುದು. ಕಷ್ಟದ ಸ್ಥಿತಿಯಲ್ಲಿ ಗಾಳಿ, ಮಳೆ, ಚಳಿಗೆ ಮೈಯೊಡ್ಡಿ ಲೈನ್‌ಮನ್‌ಗಳು ಸಹಿತ ಮೆಸ್ಕಾಂ ಗ್ಯಾಂಗ್‌ಮೆನ್‌ಗಳು ಕೆಲಸ ಮಾಡುತ್ತಾರೆ. ವಿದ್ಯುತ್‌ ತಂತಿ ಹಾದು ಹೋಗುವ ಕಂಬ ಹಾಗೂ ಪಕ್ಕದ ಮರಗಳನ್ನು ಹತ್ತಿ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ.

ಗ್ಯಾಂಗ್‌ಮನ್‌ಗಳು
ಗುತ್ತಿಗೆ ಆಧಾರದಲ್ಲಿ ನೇಮಕ
ಗ್ರಾಮೀಣ ಮತ್ತು ನಗರದಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆಯಲ್ಲಿ ಲೈನ್‌ಮ್ಯಾನ್‌ಗಳಷ್ಟೇ ಗ್ಯಾಂಗ್‌ಮನ್‌ಗಳೂ ಕೆಲಸ ನಿರ್ವಹಿಸುತ್ತಾರೆ. ಮಳೆಗಾಲದ ಅವಧಿಯಲ್ಲಿ ತುರ್ತು ಸೇವೆಗೆಂದು ಮೆಸ್ಕಾಂ ಇಲಾಖೆ ಗ್ಯಾಂಗ್‌ಮನ್‌ಗಳನ್ನು ನೇಮಿಸಿಕೊಳ್ಳುತ್ತದೆ. ವಿದ್ಯುತ್‌ ಸರಬರಾಜು ಮಾರ್ಗದ ಬದಿ ತಂತಿಗೆ ತಾಗಿಕೊಂಡಿರುವ ಮರಗಳ ತೆರವು ಹಾಗೂ ವಿದ್ಯುತ್‌ ಮಾರ್ಗದಲ್ಲಿ ವ್ಯತ್ಯಯಗಳು ಕಾಣಿಸಿಕೊಂಡಾಗ ಅದರ ದುರಸ್ತಿ ಕಾರ್ಯ ನಡೆಸುತ್ತಾರೆ. ಮೆಸ್ಕಾಂನ ಖಾಯಂ ಸಿಬಂದಿಗೆ ಸರಿಸಮನಾಗಿ ಇವರು ಕೆಲಸ ನಿರ್ವಹಿಸುತ್ತಾರೆ. ಜೂನ್‌ ತಿಂಗಳಲ್ಲಿ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಅವಧಿಗೆ ಈ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತದೆ.

ಗ್ರಾಮೀಣ ಭಾಗವೇ ಕಠಿನ
ನಗರ ಪ್ರದೇಶಗಳಲ್ಲಿ ಹೇಗಾದರೂ ಹೊಂದಿಕೊಂಡು ಹೋಗಬಹುದು. ಓಡಾಟ ಅಷ್ಟೊಂದು ಸಮಸ್ಯೆಯಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಮಳೆಗಾಲದಲ್ಲಿ ಸೇವೆ ನೀಡುವುದೇ ಸವಾಲಿನ ಸಂಗತಿ. ಒಂದೆಡೆ ಗಾಳಿ-ಮಳೆಗೆ ಜಾರುವ ಕಂಬಗಳು. ಇನ್ನೊಂದೆಡೆ ಮೈನ್‌ ಲೈನ್‌ ಸಮಸ್ಯೆ ಇದನ್ನೆಲ್ಲ ನಿಭಾಯಿಸಬೇಕಾದ ಸ್ಥಿತಿಯಿದೆ. ಹಿರಿಯ ಅಧಿಕಾರಿಗಳು ಯೋಜನೆ ಹಾಕಿ ಮಾರ್ಗದರ್ಶನ ನೀಡಿದರೂ ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ಲೈನ್‌ಮನ್‌ಗಳದ್ದಾಗಿರುತ್ತದೆ.

Advertisement

ಭದ್ರತೆ,ಸವಲತ್ತು ಇಲ್ಲ
ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುವ ಲೈನ್‌ಮನ್‌ಗಳು, ಗ್ಯಾಂಗ್‌ಮನ್‌ಗಳಿಗೆ ಯಾವುದೇ ಹೆಚ್ಚುವರಿ ಸವಲತ್ತು ಸಿಗುತ್ತಿಲ್ಲ. ವೇತನ ಮಾತ್ರ ಅವರಿಗೆ ಲಭಿಸುತ್ತದೆ. ಆದರೆ ಕೆಲಸದ ಅವಧಿ ಮಾತ್ರ ಹೆಚ್ಚು. ಸಾಧನ, ಸಲಕರಣೆ, ಜಾಕೆಟ್‌ಗಳನ್ನು ಅವರಿಗೆ ನೀಡಲಾಗುತ್ತಿದೆ. ಲೈನ್‌ಮನ್‌ಗಳಿಗೆ ಅವಘಡದಿಂದ ಅನಾಹುತಗಳಾದರೆ ಸವಲತ್ತು ಸಿಗುತ್ತದೆ. ಆದರೆ ಗ್ಯಾಂಗ್‌ಮನ್‌ಗಳಿಗೆ ಇಲ್ಲ. ಸಾಮಾನ್ಯ ಭದ್ರತೆಯನ್ನಾದರೂ ಒದಗಿಸಿದರೆ ಇವರಿಗೆ ಅನುಕೂಲವಾದಿತು.

ಗಮನಕ್ಕೆ ತರಲಾಗುವುದು
ಲೈನ್‌ಮನ್‌ಗಳ ಹೆಚ್ಚುವರಿ ಕೆಲಸದ ವೇತನದ ಬಗ್ಗೆ ಗಮನಹರಿಸಲಾಗುವುದು. ಈ ಬಗ್ಗೆ ಯಾವುದಾದರೂ ಪ್ರಸ್ತಾವನೆಗಳಿದ್ದರೆ ಇಲಾಖೆಗೆ ತಿಳಿಸಿ ಹೆಚ್ಚುವರಿ ಸವಲತ್ತು ನೀಡುವ ಬಗ್ಗೆ ಗಮನಹರಿಸಲಾಗುವುದು. ಗ್ಯಾಂಗ್‌ಮನ್‌ಗಳ ನಿರ್ವಹಣೆಯನ್ನು ಗುತ್ತಿಗೆ ಸಂಸ್ಥೆಗಳು ನಿರ್ವಹಿಸುತ್ತಿದ್ದು, ಈ ಬಗ್ಗೆ ಅವರಿಗೂ ಮನವರಿಕೆ ಮಾಡಲಾಗುವುದು.
-ನರಸಿಂಹ ಪಂಡಿತ್‌,
ಮೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next