ದೊಡ್ಡಪ್ಪ ಅಂಗಡಿಗೆ ಹೋಗಿ ಎಲೆ, ಅಡಿಕೆ ತಾರೋ ಅಂದರು. ಆಗ ನನ್ನ ಜಂಘಾಬಲವೇ ಉಡುಗಿ ಹೋಯಿತು. ಏಕೆಂದರೆ, ಆಗಲೇ ರಾತ್ರಿಯಾಗಿತ್ತು. ಇದನ್ನು ತೋರಗೊಡದೇ ಹೇಗೋ ಹೋದೆ. ಅರ್ಧ ದಾರಿಯಲ್ಲಿ ಅಜ್ಜಿ ಹೇಳಿದ್ದ ಆ ಭಯಾನಕ ಭೂತದ್ದೇ ಚಿಂತೆ. ಹೃದಯ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಹೇಗೋ ದೇವರ ಮಂತ್ರ ಹೇಳಿಕೊಂಡು ಹಾಗೂ ಹೀಗೂ ವಿದ್ಯುತ್ ಕಂಬಗಳ ಬೆಳಕಿನಿಂದ ಅರ್ಧ ದಾರಿ ಮುಟ್ಟಿದೆ. ನನ್ನ ಗ್ರಹಚಾರ ಸರಿ ಇರಲಿಲ್ಲ ಅನಿಸುತ್ತದೆ. ಇದ್ದಕ್ಕಿದ್ದಂತೆ ಕರೆಂಟ್ ಹೋಗಿಬಿಟ್ಟಿತು.
ಹಿಂದೆ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ. ನಮಗೆ ಬೆಸ್ಟ್ ನ್ಯೂಸ್ ಆ್ಯಂಕರ್, ಧಾರವಾಹಿಗಳು, ರಿಯಾಲಿಟಿ ಶೋಗಳು ಇವು ಯಾವುವೂ ಗೊತ್ತೂ ಇರಲಿಲ್ಲ. ಆದರೆ, ಇವುಗಳನ್ನ ಮೀರಿಸೋ ಸ್ಕ್ರಿಪ್ಟ್, ಡೈಲಾಗ್‌ಗಳು ನಮ್ಮಜ್ಜಿ ಹೇಳುವ ಕಥೆಗಳಲ್ಲಿ ಇರುತ್ತಿದ್ದವು. ಅಜ್ಜಿಗೆ, ನಾವು 13 ಜನ ಮೊಮ್ಮಕ್ಕಳು. ಅವರು ಕಥೆ ಹೇಳುತ್ತಾರೆ ಅಂದರೆ, ಇಂದಿನ ಟಿವಿಗಳನ್ನ ನೋಡುವಹಾಗೇನೇ ಅವರ ಕಣ್ಣುಗಳು, ಮಾತುಗಳನ್ನ ಕೈಕಟ್ಟಿ, ಕಾಲು ಮಡಿಚಿ ಕೂತು ಕೇಳುತ್ತಿದ್ದೆವು.
ಕಥೆ ಕೇಳುವುದರಲ್ಲಿ ನನ್ನ ಅಣ್ಣ ಪುನೀತ್‌ಗೆ, ನನಗಿಂತಲೂ ಒಂದು ಪಟ್ಟು ಹೆಚ್ಚು ಆಸಕ್ತಿ. ಹೀಗೆ, ಅಜ್ಜಿ ಹೇಳುವ ಕಥೆಗಳು ನಮ್ಮ ತಲೆಯಲ್ಲೆ ಉಳಿದು ಬಿಡುತ್ತಿದ್ದವು. ಕೆಲವೊಂದು ಭಯಪಡಿಸದ ಸ್ಟೋರಿಗಳಾಗಿರುತ್ತಿದ್ದವು. ಇನ್ನೂ ಕೆಲವನ್ನು ಕೇಳುವುದೇ ಭಯಂಕರ. ಎಷ್ಟೋ ಸಲ ನಾನು, ನನ್ನ ತಮ್ಮಂದಿರು ಕಿವಿ ಮುಚ್ಚಿಕೊಳ್ಳುತ್ತಿದ್ದೆವು. ಅಷ್ಟು ಹೆದರಿಕೆ ಆ ವಯಸ್ಸಿನಲ್ಲಿ. ಕಥೆಯನ್ನಷ್ಟೆ ಅಲ್ಲ ಅಜ್ಜಿ ಹೇಳಿಕೊಡುತ್ತಿದ್ದ ಭಗವದ್ಗೀತೆ ಶ್ಲೋಕ, ಲಕ್ಷ್ಮೀ, ಗಣಪತಿಯ ಮಂತ್ರಗಳ ಪಠಣ ಮರೆಯೋಕೆ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಕಲಿಕೆ ಬಾಲ್ಯದಲ್ಲಿಯೇ ಆಯಿತು. ಶ್ಲೋಕಗಳು ತಪ್ಪಿದಾಗಲೋ, ಉಚ್ಚಾರಣೆ ಆಯತಪ್ಪಿದಾಗಲೋ ಕೈಗೆ ಸಣ್ಣ ಕಜ್ಜಾಯಗಳನ್ನ ಕೊಟ್ಟು ತಪ್ಪಾಗಿ ಹೇಳಿದ್ರೆ ಕಣ್ಣುಗಳು ಹೋಗುತ್ತೆ ಅಂತ ಭಯ ಪಡಿಸುತ್ತಿದ್ದಳು ಅಜ್ಜಿ. ಹೀಗಾಗಿ ಮಂತ್ರ, ಶ್ಲೋಕಗಳ ಕಲಿಕೆಯನ್ನ ಮಿಸ್ ಮಾಡುತ್ತಿರಲಿಲ್ಲ.
ಅಜ್ಜಿ, ಪ್ರತಿದಿನ ಕಾಡು ಪ್ರಾಣಿಗಳು, ರಾಜಮಹಾರಾಜರ ಕಥೆ ಹೇಳುತ್ತಿದ್ದವಳು ಅಂದು ಭೂತದ ಕಥೆಯೊಂದನ್ನು ಹೇಳಿದಳು. ಅದನ್ನ ಹೇಳ್ಳೋಕೂ ಒಂದು ಕಾರಣ ಇತ್ತು. ನಮ್ಮ ಸಹೋದರರ ಟೀಮ್ ಸಖತ್ ಕಿಲಾಡಿಗಳು. ಯಾರ ಮಾತೂ ಕೇಳುತ್ತಿರಲಿಲ್ಲ. ನಮ್ಮನ್ನು ಕಟ್ಟಿಹಾಕಲು ಅಜ್ಜಿ ಕತೆಯನ್ನೇ ಅಸ್ತ್ರವಾಗಿಸಿಕೊಂಡಿದ್ದಳು. ನಮ್ಮ ವೀಕ್‌ನೆಸ್, ಕತ್ತಲೆಂದರೆ ಭಯ ಅನ್ನೋದು. ಆವತ್ತು ಅಜ್ಜಿ ಗುಹೆ ಕಥೆ ಹೇಳುತ್ತಲೇ ಅದನ್ನು ಭೂತದ ಕಥೆಯಾಗಿ ತಿರುಗಿಸಿದಳು. ಕಿವಿ ಮುಚ್ಚಿಕೊಳ್ಳದೆ ಶ್ರದ್ಧೆಯಿಂದ ಏನೋ ಕೇಳಿದೆವು. ಆನಂತರ ಮನೆಗೆ ಹೋಗಬೇಕಾದರೆ ಕತ್ತಲಲ್ಲಿ ನಡಿಯಬೇಕಾಗಿ ಬಂದಾಗೆಲ್ಲ ಈ ಭೂತದ್ದೇ ನೆನಪು ಕಾಡೋದು. ಒಟ್ಟಿನಲ್ಲಿ ನಮಗೆ ಭಯ ಹಿಡಿಸುವ ಅಜ್ಜಿಯ ಪ್ಲಾನ್ ವರ್ಕ್‌ಔಟ್ ಆಯಿತು.
ಇಂಥ ಪರಿಸ್ಥಿತಿಯಲ್ಲೇ ದೊಡ್ಡಪ್ಪ ಅಂಗಡಿಗೆ ಹೋಗಿ ಎಲೆ, ಅಡಿಕೆ ತಾರೋ ಅಂದರು. ಆಗ ನನ್ನ ಜಂಘಾಬಲವೇ ಉಡುಗಿಹೋಯಿತು. ಏಕೆಂದರೆ, ಆಗಲೇ ರಾತ್ರಿಯಾಗಿತ್ತು. ಇದನ್ನು ತೋರಗೊಡದೇ ಹೇಗೋ ಹೋದೆ. ಅರ್ಧ ದಾರಿಯಲ್ಲಿ ಅಜ್ಜಿ ಹೇಳಿದ್ದ ಆ ಭಯಾನಕ ಭೂತದ್ದೇ ಚಿಂತೆ. ಹೃದಯ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಹೇಗೋ ದೇವರ ಮಂತ್ರ ಹೇಳಿಕೊಂಡು, ವಿದ್ಯುತ್ ಕಂಬಗಳ ಬೆಳಕಿನಿಂದ ಅರ್ಧ ದಾರಿ ಮುಟ್ಟಿದೆ. ನನ್ನ ಗ್ರಹಚಾರ ಸರಿ ಇರಲಿಲ್ಲ ಅನಿಸುತ್ತದೆ. ಏಕೆಂದರೆ, ಇದ್ದಕ್ಕಿದ್ದಂತೆ ಕರೆಂಟ್ ಹೋಗಿಬಿಟ್ಟಿತು. ನಾ ಹೋಗುವ ದಾರಿ ಕತ್ತಲೆಯ ಗುಹೆಯಂತೆ ಕಂಡಿದ್ದೇ ತಡ, ಅಲ್ಲಿಂದ ಕಾಲ್ಕಿತ್ತು ಮನೆಯತ್ತ ಓಡಿದೆ. ಈ ಎಲ್ಲ ಗಡಿಬಿಡಿಯಲ್ಲಿ ದೊಡ್ಡಪ್ಪ ಕೇಳಿದ್ದ ಪಾನ್ ಮಸಾಲ ಮರತೇ ಹೋಯ್ತು. ಆಮೇಲೆ ಅಂಗಡಿ ಬಂದ್ ಆಗಿತ್ತು ಅಂತ ದೊಡ್ಡಪ್ಪಾಜಿಗೆ ಸುಳ್ಳು ಹೇಳಿದೆ. ಇವತ್ತೂ ಕೂಡ ಭೂತದ ಸಿನಿಮಾಗಳನ್ನೊ, ವಾಲ್‌ಪೊಸ್ಟರ್‌ಗಳನ್ನೋ ಕಂಡಾಗ ಅಜ್ಜಿಯ ಆ ಗುಹೆ, ಭೂತದ ಕಥೇನೇ ನೆನಪಾಗುತ್ತದೆ. ಭಯ ಇಲ್ಲದೆ.
ಈ. ಪ್ರಶಾಂತ್ ಕುಮಾರ್, ಉರಗನಹಳ್ಳಿ