Advertisement

ಸಾಂಸ್ಕೃತಿಕ ವಲಯದ ಜುಟ್ಟು ರಾಜಕಾರಣಿಗಳ ಕೈಯಲ್ಲೇ!

07:35 AM Aug 09, 2017 | Team Udayavani |

ಬೆಂಗಳೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿವಿಗೆ ರಾಜ್ಯ ಸರ್ಕಾರ “ಸಾಂಸ್ಕೃತಿಕ ನೀತಿ’ ಜಾರಿಗೊಳಿಸಲು ಮುಂದಾಗಿದೆಯಾದರೂ, ಸಾಂಸ್ಕೃತಿಕ ವಲಯವನ್ನು ಸರ್ಕಾರ ಹಾಗೂ ರಾಜಕೀಯ ಹಿಡಿತದಿಂದ ಮುಕ್ತಿಗೊಳಿಸಲು “ದೊಡ್ಡ ಮನಸ್ಸು’ ಮಾಡಿಲ್ಲ.

Advertisement

ಸರ್ಕಾರಿ ಕಾರ್ಯಕ್ರಮಗಳಲ್ಲಿ ಆಯಾ ಕ್ಷೇತ್ರ ವ್ಯಾಪ್ತಿಯ ರಾಜಕಾರಣಿಗಳನ್ನು ಆಹ್ವಾನಿಸುವ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸುವ “ಶಿಷ್ಟಾಚಾರ’ದಿಂದ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿನಾಯಿತಿ ಬೇಕು ಎಂಬ ಶಿಫಾರಸನ್ನು ಸರ್ಕಾರ ಒಪ್ಪಿಲ್ಲ. ಪ್ರಾಧಿಕಾರ-ಅಕಾಡೆಮಿಗಳ ಅಧ್ಯಕ್ಷ,
ಸದಸ್ಯರ ನೇಮಕಾತಿಗೆ ವಿಶ್ವವಿದ್ಯಾಲಯ ಉಪಕುಲಪತಿ ನೇಮಕಕ್ಕೆ ಮುನ್ನ ರಚಿಸುವ ಶೋಧನಾ ಸಮಿತಿ ಮಾದರಿಯಲ್ಲಿ ಆಯಾ ಕ್ಷೇತ್ರದ ತಜ್ಞರ ಸಮಿತಿ ರಚಿಸಿ, ನೇಮಕ ಮಾಡಬೇಕು. ಇಲಾಖೆ ಸಚಿವರ ವಿವೇಚನೆಗೆ ಬಿಡಬಾರದು ಎಂಬುದಕ್ಕೂ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ, ಸಾಂಸ್ಕೃತಿಕ ನೀತಿ ಜಾರಿಯಾ ದರೂ “ಸಾಂಸ್ಕೃತಿಕ ವಲಯ’ದ ಹಿಡಿತ ಸರ್ಕಾರದ ಕೈಯಲ್ಲೇ ಇರುವಂತಾಗಿದೆ. ಅಭಿವೃದ್ಧಿ ಕಾರ್ಯಕ್ರಮ  ಗಳಿಗಷ್ಟೇ ಅಲ್ಲ ಸಾಂಸ್ಕೃತಿಕ ಸೇರಿ ಯಾವುದೇ ಕಾರ್ಯ ಕ್ರಮ ಇದ್ದರೂ ಜನಪ್ರತಿನಿಧಿಗಳು ರಾಜಕಾರಣಿಗಳಿಗೆ ಅವಕಾಶ ಇರಲೇಬೇಕು. ಪ್ರಾಧಿಕಾರ-ಅಕಾಡೆಮಿಗಳಿಗೆ ನೇಮಕಾತಿಯಲ್ಲೂ ಸರ್ಕಾರದ ಕೈಯಲ್ಲೇ ಇರಬೇಕು ಎಂಬಂತಾಗಿದೆ. ಇದಕ್ಕೆ ಸಾಂಸ್ಕೃತಿಕ ವಲಯವು ಅಸಮಾಧಾನ ವ್ಯಕ್ತಪಡಿಸಿದೆ.

ಹಾಲಿ ಇರುವ ಮೂರು ರಂಗಾಯಣ, ಹೊಸದಾಗಿ ಸ್ಥಾಪನೆಯಾಗಲಿರುವ ಎರಡು ರಂಗಾಯಣ ಸೇರಿ ಐದಕ್ಕೆ ಒಂದು ಪ್ರಾಧಿಕಾರ ರಚನೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಈ ಎರಡಕ್ಕೂ ಸಂಪುಟ ಒಪ್ಪಿಗೆ ದೊರೆತಿಲ್ಲ ಎಂದು ಹೇಳಲಾಗಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಹಿನ್ನೆಲೆಯಲ್ಲಿ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಸ್ಥಾಪನೆ ವಿಚಾರದಲ್ಲಿ ಸಂಘರ್ಷ ಉಂಟಾಗಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕಾ? ಮೈಸೂರಿನಲ್ಲಾ? ಇಲ್ಲವೇ ಹಂಪಿಯಲ್ಲಾ? ಎಂಬ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಲಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ವಿಶ್ವಾಸಾರ್ಹತೆ ಬರ್ತಿತ್ತು
ಜನಪ್ರತಿನಿಧಿಗಳು, ರಾಜಕಾರಣಿಗಳಿಗೆ ಆಹ್ವಾನಿಸುವುದು ಮತ್ತು ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಬೇಕೆನ್ನುವ “ಶಿಷ್ಟಾಚಾರ’ದಿಂದ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿನಾಯಿತಿ ನೀಡಲು ಹಾಗೂ ಅಕಾಡೆಮಿಗಳ ಅಧ್ಯಕ್ಷ-ಸದಸ್ಯರುಗಳ ನೇಮಕ ಸಂಬಂಧ ಶೋಧನಾ ಸಮಿತಿ ಮಾದರಿಯಲ್ಲಿ ತಜ್ಞರ ಸಮಿತಿ ರಚನೆ ಮಾಡುವ ಶಿಫಾರಸು ಒಪ್ಪಿದ್ದರೆ ಚೆನ್ನಾಗಿರುತ್ತಿತ್ತು. ಇದರಿಂದ ಸರ್ಕಾರದ ಮೇಲೆ ಮತ್ತಷ್ಟು ವಿಶ್ವಾಸಾರ್ಹತೆ ಬರುತ್ತಿತ್ತು. ಆದರೆ, ಯಾವ ಕಾರಣಕ್ಕೆ ಒಪ್ಪಿಲ್ಲವೋ ಗೊತ್ತಿಲ್ಲ ಎಂದು ಸಾಹಿತಿ, ಸಾಂಸ್ಕೃತಿಕ ನೀತಿ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

Advertisement

ಎಸ್‌ ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next