Advertisement

ಎಣಿಕೆ ಕೇಂದ್ರದಲ್ಲಿ ಸಿಬಂದಿ ಮೊಬೈಲ್‌ ಬಳಸಿದರೆ ವಜಾ

12:39 AM May 18, 2019 | Sriram |

ಉಡುಪಿ: ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನು ಕಡ್ಡಾಯ ವಾಗಿ ನಿಷೇಧಿಸಲಾಗಿದ್ದು, ನಿಷೇಧ ಉಲ್ಲಂ ಸುವ ಸಿಬಂದಿಯನ್ನು ಸೇವೆಯಿಂದ ವಜಾ ಮಾಡ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಸಿದ್ದಾರೆ.

Advertisement

ಉಡುಪಿಯ ಸೈಂಟ್‌ ಸಿಸಿಲಿ ಶಾಲೆಯಲ್ಲಿ ಮೇ 23ರಂದು ನಡೆಯುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬಂದಿಗಳು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಒತ್ತಡ ಅಥವಾ ಗೊಂದಲಕ್ಕೆ ಒಳಗಾಗದಂತೆ ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅವರು ಶುಕ್ರವಾರ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮತ ಎಣಿಕೆ ಕಾರ್ಯಗಳಿಗೆ ನಿಯೋಜನೆಗೊಂಡ ಸಿಬಂದಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಪ್ಪಾಗದಂತೆ ಎಚ್ಚರ ವಹಿಸಿ
ಮತ ಎಣಿಕೆ ಕಾರ್ಯಕ್ಕೆ‌ ನಿಯೋಜಿಸಿರುವ ಸಿಬಂದಿ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಮತ ಎಣಿಕೆಯ ಯಾವುದೇ ಹಂತದಲ್ಲೂ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. ಮತ ಎಣಿಕೆ ಕೊಠಡಿಯಲ್ಲಿ ಮತದಾನದ ಗೌಪ್ಯತೆ ಕಾಪಾಡಬೇಕು. ಯಾವುದೇ ಕಾರಣಕ್ಕೂ ಮತ ಎಣಿಕೆಯ ವಿವರಗಳನ್ನು ತಮ್ಮ ಮೇಲಿನ ಅಧಿಕಾರಿಗಳಿಗೆ ಹೊರತುಪಡಿಸಿ ಬೇರೆಯವರಿಗೆ ನೀಡಬಾರದು. ಮತ ಎಣಿಕೆ ಕೊಠಡಿಯಲ್ಲಿ ಅನಗತ್ಯವಾಗಿ ಓಡಾಡದೆ ತಮಗೆ ನಿಯೋಜಿಸಿರುವ ಕೊಠಡಿಯಲ್ಲಿಯೇ ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇರಬೇಕು. ಮತ ಎಣಿಕೆ ಕೇಂದ್ರದಲ್ಲಿ ಸಿಬಂದಿಗಳಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಬೆಳಗ್ಗೆ 6 ಗಂಟೆಯೊಳಗೆ ಹಾಜರಿ
ಮತ ಎಣಿಕೆ ಸಿಬಂದಿಗೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಬಣ್ಣದ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು ಮತ ಎಣಿಕೆ ದಿನ ಬೆಳಗ್ಗೆ 6 ಗಂಟೆ ಒಳಗೆ ಕೇಂದ್ರದಲ್ಲಿ ಹಾಜರಿದ್ದು, ತಮಗೆ ನಿಗದಿಪಡಿಸಿದ ಕೊಠಡಿಗೆ ತೆರಳಬೇಕು. ಅಂಚೆಮತ ಪತ್ರಗಳ ಎಣಿಕೆ ಅನಂತರ ಇವಿಎಂ ಮತ ಎಣಿಕೆ ಪ್ರಾರಂಭವಾಗಲಿದೆ. ಅಂಚೆ ಮತ ಪತ್ರ ಎಣಿಕೆ ಸಿಬಂದಿ ಅತ್ಯಂತ ಎಚ್ಚರಿಕೆಯಿಂದ ಎಣಿಕೆ ಮಾಡಬೇಕು. ಒಟ್ಟು 16ರಿಂದ 19 ಸುತ್ತಿನವರೆಗೆ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

Advertisement

ಇವಿಎಂ ಮತ ಎಣಿಕೆ ಅನಂತರ ಪ್ರತಿ ವಿಧಾನಸಭಾವಾರು ಲಾಟರಿ ಮೂಲಕ ಆಯ್ಕೆ ಮಾಡುವ 5 ಮತಗಟ್ಟೆಗಳ ವಿವಿ ಪ್ಯಾಟ್‌ ಸ್ಲಿಪ್‌ಗ್ಳ ಎಣಿಕೆ ಕಾರ್ಯ ನಡೆಯಲಿದೆ. ಒಂದು ವಿವಿ ಪ್ಯಾಟ್‌ನಲ್ಲಿನ ಸ್ಲಿಪ್‌ಗ್ಳ ಎಣಿಕೆಗೆ ಒಂದು ಗಂಟೆ ತಗುಲಲಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಜಿಲ್ಲೆಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ಟರ್‌ ಟ್ರೆçನರ್‌ ಅಶೋಕ್‌ ಕಾಮತ್‌, ಮತ ಎಣಿಕೆ ಪ್ರಕ್ರಿಯೆ ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ತರಬೇತಿ ನೀಡಿದರು.

ಕ್ಷೇತ್ರವಾರು ಮತಗಟ್ಟೆ- ಮತ ಎಣಿಕೆ ಸುತ್ತು
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 222 ಮತಗಟ್ಟೆಗಳಿದ್ದು 16 ಸುತ್ತಿನ ಮತ ಎಣಿಕೆ, ಉಡುಪಿಯ 226 ಮತಗಟ್ಟೆಗಳಲ್ಲಿ 17 ಸುತ್ತಿನ ಮತ ಎಣಿಕೆ, ಕಾಪು 208 ಮತಗಟ್ಟೆಗಳಲ್ಲಿ 15 ಸುತ್ತಿನ ಮತ ಎಣಿಕೆ, ಕಾರ್ಕಳದ 209 ಮತಗಟ್ಟೆಗಳಲ್ಲಿ 15 ಸುತ್ತಿನ ಮತ ಎಣಿಕೆ, ಶೃಂಗೇರಿಯ 256 ಮತಗಟ್ಟೆಗಳಲ್ಲಿ 19 ಸುತ್ತಿನ ಮತ ಎಣಿಕೆ, ಮೂಡಿಗೆರೆಯ 231 ಮತಗಟ್ಟೆಗಳಲ್ಲಿ 17 ಸುತ್ತಿನ ಮತ ಎಣಿಕೆ, ಚಿಕ್ಕಮಗಳೂರಿನ 257 ಮತಗಟ್ಟೆಗಳಲ್ಲಿ 19 ಸುತ್ತಿನ ಮತ ಎಣಿಕೆ, ತರಿಕೆರೆಯ 228 ಮತಗಟ್ಟೆಗಳಲ್ಲಿ 17 ಸುತ್ತಿನ ಮತ ಎಣಿಕೆ ನಡೆಯಲಿದೆ ಹಾಗೂ ಪ್ರತಿ ವಿಧಾನಸಭಾವಾರು ಪ್ರತ್ಯೇಕವಾಗಿ ವಿವಿ ಪ್ಯಾಟ್‌ ಸ್ಲಿಪ್‌ಗ್ಳ ಎಣಿಕೆ ನಡೆಯಲಿದೆ.
– ಹೆಪ್ಸಿಬಾ ರಾಣಿ ಕೊರ್ಲಪಾಟಿ

Advertisement

Udayavani is now on Telegram. Click here to join our channel and stay updated with the latest news.

Next