Advertisement

ಬೆಂಗಳೂರಿನ ಯುವತಿ ಪೋಷಕರ ಮಡಿಲಿಗೆ

06:00 AM Jun 17, 2018 | Team Udayavani |

ಮಂಗಳೂರು: ಬೆಂಗಳೂರು ಮೂಲದ ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ  ಮೊಬೈಲ್‌ ವಿಚಾರಕ್ಕೆ ಬೈದರೆಂಬ ಕಾರಣಕ್ಕೆ ಮನೆ ತೊರೆದು ನಗರಕ್ಕೆ ತಲುಪಿ, ಬಳಿಕ ಅಟೋರಿಕ್ಷಾ ಚಾಲಕರ ಮುಂದಾಲೋಚನೆಯಿಂದ ಮರಳಿ ಪೋಷಕರ ಮಡಿಲು ಸೇರಿದ ಘಟನೆ ಶನಿವಾರ ನಡೆದಿದೆ. 

Advertisement

ವಿದ್ಯಾರ್ಥಿನಿ ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿಯಾಗಿದ್ದು, ಈಕೆಯ ಪ್ರೀತಿ-ಪ್ರೇಮದ ವಿಚಾರ ಅಮ್ಮನಿಗೆ ತಿಳಿದು ಜೂನ್‌ 11ರಂದು ಮನೆಯಲ್ಲಿ ರಂಪಾಟವಾಗಿದೆ. ಮಗಳಲ್ಲಿ  ಹೊಸ ಮೊಬೈಲ್‌ ಫೋನ್‌ ಬಂದದ್ದನ್ನು ಗಮನಿಸಿ, ಆಕೆಯ ತಾಯಿ “ಯಾರು ನಿನಗೆ ಮೊಬೈಲ್‌ ಕೊಟ್ಟದ್ದು’  ಎಂದು ಗದರಿದ್ದಾರೆ. “ನನ್ನ ಗೆಳತಿ ಕೊಟ್ಟ ಮೊಬೈಲ್‌’ ಎಂದು ಮಗಳು ತಾಯಿಗೆ ಉತ್ತರ ನೀಡಿದ್ದಾಳೆ. ಈ ವಿಚಾರವಾಗಿಯೇ ತಾಯಿ ಮಗಳ ನಡುವೆ ಜಗಳವಾಗಿದೆ. ಇದರಿಂದ ಬೇಸತ್ತ ಈಕೆ ಮನೆಯವರೊಂದಿಗೆ ಹೇಳದೆ ಮನೆಯಿಂದ ಹೊರಟು ನಿಂತಿದ್ದಾಳೆ. ಮುನಿಸಿಕೊಂಡ ಮಗಳು ರಾತ್ರಿಯಾದರೂ ಮನೆಗೆ ಬಾರದ ಕಾರಣ ಆತಂಕಿತರಾದ ಮನೆಯವರು ಅದೇ ದಿನ  ರಾಜಗೋಪಾಲನಗರ ಪೊಲೀಸ್‌ ಠಾಣೆಗೆ ವಿಷಯ  ತಿಳಿಸಿದ್ದು, ಈ ಸಂಬಂಧ ಅಪಹರಣ ದೂರು ದಾಖಲಾಗಿದೆ. 

ಐದು ನಗರ ತಿರುಗಾಡಿದ ಬಳಿಕ ಮಂಗಳೂರಿಗೆ 
ಮನೆಯಿಂದ ಹೊರಟ ವಿದ್ಯಾರ್ಥಿನಿ ಬಸ್ಸೇರಿ ಮೈಸೂರಿಗೆ ಬಂದಿಳಿದಿದ್ದಾಳೆ.  ಬಳಿಕ ಅದೇ ದಿನ ರಾತ್ರಿ ಹಾಸನಕ್ಕೆ ಬಂದು ಅನಂತರ ಚಿಕ್ಕಮಗಳೂರಿಗೆ ತೆರಳಿದ್ದಾಳೆ. ಹೀಗೆ ಒಟ್ಟು ಐದು ನಗರಗಳನ್ನು ತಿರುಗಾಡಿದ ಈಕೆ ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ತಲುಪಿದ್ದಾಳೆ. ಅನು ಮಾನಾಸ್ಪದವಾಗಿ ಗೊತ್ತುಗುರಿ ಇಲ್ಲದೆ ನಿಲ್ದಾಣದ ಸುತ್ತುಮುತ್ತ ಅಲೆದಾಡುವುದನ್ನು ಗಮ ನಿ ಸಿದ ರಿಕ್ಷಾ ಚಾಲಕರು ಎಲ್ಲಿಗೆ ಹೋಗಬೇಕಿತ್ತೆಂದು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿನಿ ತನಗೆ ಬೆಂಗಳೂರಿಗೆ ಹೋಗಬೇಕೆಂದು ತಿಳಿಸಿದರೂ, ರಿಕ್ಷಾ ಚಾಲಕರು  ಅನುಮಾನಗೊಂಡು ಆಕೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ಬಳಿಕ ಬಸ್‌ ನಿಲ್ದಾಣದ ಬಳಿ ಕ್ಯಾಬ್‌ ಡ್ರೈವರ್‌ ಜತೆ ಮಾತನಾಡುವುದನ್ನು ಅರಿತ ರಿಕ್ಷಾ ಚಾಲಕರು ಇಬ್ಬರನ್ನೂ ಗಮನಿಸಿದ್ದಾರೆ. ಕ್ಯಾಬ್‌ ಚಾಲಕ ಸ್ವಲ್ಪ ಹೊತ್ತಿನ ಬಳಿಕ ಮತ್ತೋರ್ವನ ಜತೆ ವಿದ್ಯಾರ್ಥಿನಿ ಇದ್ದ ಸ್ಥಳಕ್ಕೆ ಬಂದು ಮಾತುಕತೆಗೆ ತೊಡಗಿದ್ದನ್ನು ನೋಡಿದ ರಿಕ್ಷಾ ಚಾಲಕರು, ಕ್ಯಾಬ್‌ ಚಾಲಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಕ್ಯಾಬ್‌ ಚಾಲಕ ಆಕೆಯನ್ನು ರೈಲು ನಿಲ್ದಾಣಕ್ಕೆ ಬಿಡುವುದಾಗಿ ಹೇಳಿದರೂ, ರಾತ್ರಿ ಬೆಂಗಳೂರಿಗೆ ರೈಲು ಇಲ್ಲವಲ್ಲ ಎಂದು ರಿಕ್ಷಾ ಚಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ.  ಈ ವೇಳೆ ಕ್ಯಾಬ್‌ ಚಾಲಕ ಟ್ರೈನ್‌ ಇಲ್ಲದಿದ್ದರೆ, ತನ್ನ ಮನೆಗೆ ಕರೆದುಕೊಂಡು ಹೋಗುವೆ ಎಂದು ಉದ್ದಟತನದಿಂದ ಮಾತನಾಡಿದ್ದಾನೆ ಎನ್ನಲಾಗಿದೆ. ಇದರಿಂದ ಮತ್ತಷ್ಟು ಅನುಮಾನಗೊಂಡ ರಿಕ್ಷಾ ಚಾಲಕರು ಬರ್ಕೆ ಠಾಣೆಗೆ ವಿಷಯ ತಿಳಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರು,  ಆಕೆಯ ಮೂಲಕವೇ ಹೆತ್ತವರನ್ನು ಸಂಪರ್ಕಿಸಿ ನಗರಕ್ಕೆ ಕರೆಸಿ  ಶನಿವಾರ ಸಂಜೆ ಆಕೆಯನ್ನು  ಅವರ ಜತೆ  ಕಳು ಹಿಸಿ ಕೊಟ್ಟಿದ್ದಾರೆ.   

ಕ್ಯಾಬ್‌ ಚಾಲಕರ ಮನಸ್ಸಿನಲ್ಲಿ ದುರುದ್ದೇಶ ಇರಲಿಲ್ಲ 
ಈ ನಡುವೆ ಕ್ಯಾಬ್‌ ಚಾಲಕನನ್ನು ಸರಿಯಾಗಿ ವಿಚಾರಿಸಬೇಕೆಂದು ರಿಕ್ಷಾ ಚಾಲಕರು ಪೊಲೀಸರೊಂದಿಗೆ ಒತ್ತಡ ಹೇರಿದರೂ, ಕ್ಯಾಬ್‌ ಚಾಲ ಕರ ಮನಸ್ಸಿನಲ್ಲಿ ದುರುದ್ದೇಶ ಇರಲಿಲ್ಲ ಎನ್ನಲಾಗಿದೆ. ಕ್ಯಾಬ್‌ ಚಾಲಕರು ಕೂಡ ರಿಕ್ಷಾ ಚಾಲಕರಂತೆ ಅನುಮಾನದಿಂದ ಆಕೆಯನ್ನು ಪ್ರಶ್ನಿಸುತ್ತಿದ್ದರಷ್ಟೆ.. ಕ್ಯಾಬ್‌ ಚಾಲಕರ ಮನಸ್ಸಿನಲ್ಲಿ ದುರುದ್ದೇಶ ಇರಲಿಲ್ಲ ಎಂದು ಬರ್ಕೆ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next