Advertisement

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ಒಗ್ಗಟ್ಟು ಅಗತ್ಯ

02:28 AM Feb 23, 2021 | Team Udayavani |

ಕಾವೇರಿ ನದಿ ನೀರಿನ ಬಳಕೆ ಕುರಿತು ತಮಿಳುನಾಡು ಸದ್ದಿಲ್ಲದೇ ಕ್ಯಾತೆ ತೆಗೆದಿದೆ. ಹೆಚ್ಚುವರಿಯಾಗಿ ಹರಿದುಹೋಗುವ ನೀರನ್ನು ಬಳಸಿಕೊಳ್ಳುವ ಸಲುವಾಗಿ ಕಾಲುವೆ ನಿರ್ಮಿಸಲು ಮುಂದಾಗಿದ್ದು ಮತ್ತೆ ಕಾವೇರಿ ವಿವಾದಕ್ಕೆ ನಾಂದಿ ಹಾಡಿದಂತಾಗಿದೆ.

Advertisement

ಶತಮಾನಗಳಿಂದಲೂ ನಡೆದು ಬರುತ್ತಿರುವ ಕಾವೇರಿ ವಿವಾದವನ್ನು 2018ರಲ್ಲಿ ಇತ್ಯರ್ಥ ಮಾಡಿ, ಎಲ್ಲ ರಾಜ್ಯಗಳು ನೀರಿನ ಹಂಚಿಕೆಯನ್ನು ಸರಿಯಾಗಿ ಬಳಕೆ ಮಾಡಲು ಕಾವೇರಿ ನೀರು ನಿರ್ವಹಣ ಮಂಡಳಿ ರಚನೆ ಮಾಡಿದೆ. ಹೀಗಾಗಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರೀತಿಯ ತಕರಾರು ಮಾಡಲು ತಮಿಳುನಾಡಿಗೆ ಆಸ್ಪದ ಇಲ್ಲದಂತಾಗಿದ್ದು, ಈಗ ಹೊಸ ರೀತಿಯ ಪ್ರಯತ್ನದ ಮೂಲಕ ಮತ್ತೆ ಕಾವೇರಿ ವಿವಾದ ಜೀವಂತವಾಗಿ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿರುವಂತಿದೆ.

ಈ ವಿಚಾರದಲ್ಲಿ ರಾಜ್ಯ ಸರಕಾರ ಬೇಗ ಎಚ್ಚೆತ್ತುಕೊಂಡಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಕಾನೂನು ತಜ್ಞರ ಸಭೆ ನಡೆಸಿ ತಮಿಳುನಾಡಿನ ಹುನ್ನಾರಕ್ಕೆ ಕಾನೂನು ರೀತಿಯಲ್ಲಿಯೇ ಪ್ರತ್ಯುತ್ತರ ನೀಡುವ ಪ್ರಯತ್ನಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ತಮಿಳುನಾಡು ಸರಕಾರಕ್ಕೆ ಈ ಕಾಲುವೆಗಳ ನಿರ್ಮಾಣದ ಯೋಜನೆಯ ಹಿಂದೆ ಸ್ಥಳೀಯವಾಗಿ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರ ಇದ್ದಂತೆ ಕಾಣಿಸುತ್ತದೆ. ಶೀಘ್ರದಲ್ಲಿಯೇ ತಮಿಳುನಾಡು ವಿಧಾನಸಭೆಗೆ ಚುನಾವಣೆ ಎದುರಾಗುವುದರಿಂದ ಆಳುವ ಪಕ್ಷ ಎಐಎಡಿಎಂಕೆ ಇದನ್ನು ಚುನಾವಣ ಅಸ್ತ್ರವಾಗಿ ಬಳಸಲು ಮುಂದಾಗಿರುವಂತಿದೆ.

ಆದರೆ ರಾಜ್ಯ ಸರಕಾರ ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ರಾಜ್ಯ ಸರಕಾರ ತಮಿಳುನಾಡಿನ ಯೋಜನೆಗೆ ಸೂಕ್ತ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸದೇ ಹೋದರೆ ಅದು ಭವಿಷ್ಯದಲ್ಲಿ ರಾಜ್ಯಕ್ಕೆ ಮಾರಕವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ ಅದೇಶದಂತೆಯೇ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ ಮೇಕೆದಾಟು ಬಳಿ ಸಮಾನಾಂತರ ಅಣೆಕಟ್ಟು ಕಟ್ಟಲು ಮುಂದಾಗಿರುವುದು, ರಾಜ್ಯದ ಜತೆಗೆ ತಮಿಳುನಾಡಿಗೂ ಅನುಕೂಲವಾಗಲಿದೆ.
ಕೆಆರ್‌ಎಸ್‌ ಹಾಗೂ ಕಬಿನಿಯಿಂದ ಬಿಳಿಗುಂಡ್ಲುವರೆಗೂ ಸುಮಾರು 200 ಕಿ.ಮೀ. ನೀರು ನದಿಯಲ್ಲಿ ಹರಿದು ಹೋಗುವುದರಿಂದ ಆವಿಯಾಗಿ ಹೋಗುವ ಪ್ರಮಾಣ ಹೆಚ್ಚಿರುತ್ತದೆ. ಅದರ ಬದಲು ರಾಜ್ಯ ಸರಕಾರ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸಿದರೆ, 25 ಕಿ.ಮೀ. ಅಂತರದಲ್ಲಿಯೇ ನೀರು ತಮಿಳುನಾಡು ತಲುಪುವುದರಿಂದ ಹೆಚ್ಚಿನ ನೀರು ವ್ಯರ್ಥವಾಗುವುದೂ ತಪ್ಪಲಿದೆ.

Advertisement

ತಮಿಳುನಾಡು ಸರಕಾರ ಸದ್ಯಕ್ಕೆ ಯಾವುದೇ ಉದ್ದೇಶಕ್ಕೆ ಕಾಲುವೆ ನಿರ್ಮಿಸುವ ಯೋಜನೆ ರೂಪಿಸಿದ್ದರೂ ಅದನ್ನು ಬಲವಾಗಿ ವಿರೋಧಿಸಲು ಎಲ್ಲ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ರಾಜ್ಯದ ಪರ ನ್ಯಾಯ ದೊರಕಿಸಿಕೊಳ್ಳಲು ಪ್ರಯತ್ನಿಸುವ ಅಗತ್ಯವಿದೆ.

ಪ್ರಸಕ್ತ ಸಂದರ್ಭದಲ್ಲಿ ಕೇಂದ್ರದಲ್ಲಿಯೂ ಬಿಜೆಪಿ ಸರಕಾರವಿದ್ದು, ತಮಿಳುನಾಡಿನಲ್ಲಿ ಬಿಜೆಪಿ ಆಡಳಿತ ಪಕ್ಷದ ಜತೆ ಚುನಾವಣ ಒಪ್ಪಂದ ಮಾಡಿಕೊಂಡಿರುವುದು ರಾಜ್ಯ ಸರಕಾರಕ್ಕೆ ಕಠಿನ ಸವಾಲು ಎದುರಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಕೇಂದ್ರ ಸರಕಾರ ತಮಿಳುನಾಡು ಪರ ವಾಲದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next