Advertisement
ಜೇವರ್ಗಿ ತಾಲೂಕಿನ ಕಲ್ಲೂರು (ಬಿ) ಗ್ರಾಮದ ಮಲಕಣ್ಣ ತಳವಾರ ಕುಟುಂಬ 20 ಗುಂಟೆ ಭೂಮಿಯಲ್ಲಿ ಬದನೆಕಾಯಿ ಬೆಳೆದು ಗೆದ್ದಿದ್ದಾರೆ. ತಕ್ಕ ಮಟ್ಟಿಗೆ ಓದಿಕೊಂಡಿರುವ ಮಕ್ಕಳಾದರೂ ಸರಕಾರಿ ನೌಕರಿ, ಖಾಸಗಿ ನೌಕರಿ ಸಿಗಲಿಲ್ಲ ಎಂದು ಕೊರಗುವುದಕ್ಕಿಂತ ಇರುವ ಭೂಮಿಯಲ್ಲೇ ಅಪ್ಪನ ಹೆಗಲಿಗೆ ಹೆಗಲು ಕೊಟ್ಟು, ಅವ್ವನೊಂದಿಗೆ ಸೇರಿಕೊಂಡು ದುಡಿಯಲು ಮುಂದಾಗಿ, ಈಗ ತಿಂಗಳಿಗೆ 40 ಸಾವಿರ ರೂ.ಗೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ.
ಮಲಕಣ್ಣ ತಳವಾರ ಅವರು 20 ಗುಂಟೆಯಲ್ಲಿ ಮಾಂಜರಿ ಎನ್ನುವ ತಳಿಯ ಬದನೆ ಬೀಜಗಳನ್ನು ತಂದು, ಹೊಲದಲ್ಲಿಯೇ ಸಸಿಗಳನ್ನು ಮಾಡಿ, ನಾಟಿ ಮಾಡಿದ್ದಾರೆ. 20 ಸಾಲುಗಳಲ್ಲಿ ಒಟ್ಟು 2,500 ಗಿಡಗಳನ್ನು ಬೆಳೆದಿದ್ದಾರೆ. ಈಗ ಪ್ರತಿ ನಿತ್ಯ 1,000ದಿಂದ 1500 ರೂ. ಗಳಿಕೆ ಶುರುವಾಗಿದೆ. “ನೀರಿನ ಲಭ್ಯತೆ ನೋಡಿಕೊಂಡು ಕೇವಲ 20ಗುಂಟೆಯಲ್ಲಿ ಬದನೆ ಬೆಳೆಯುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ನನ್ನ ಪತ್ನಿ ಸಂಗಮ್ಮ, ಮಕ್ಕಳಾದ ಸಿದ್ದಣ್ಣ, ಶಿವರಾಜ್ ಬದನೆಕಾಯಿ ಕಿತ್ತು, ಟ್ರೇಗಳಿಗೆ ತುಂಬಿ ಇಡುತ್ತಾರೆ. ದೊಡ್ಡ ಮಗ ಸಿದ್ದಣ್ಣ ತಳವಾರ ಮಾರುಕಟ್ಟೆಗೆ ಕೊಂಡೋಯ್ದು ಮಾರಾಟ ಮಾಡುವ ಹೊಣೆ ಹೊತ್ತಿದ್ದಾನೆ ಎನ್ನುತ್ತಾರೆ. ನಮಗೆ ಮಾರಾಟದ ಸಮಸ್ಯೆ ಇಲ್ಲ. ವಾರದ ಎರಡು ದಿನ ಹೊರತು ಪಡಿಸಿದರೆ ಜೇವರ್ಗಿ, ಸಿಂದಗಿ, ನೆಲೋಗಿ, ಮಂದೇವಾಲಗಳಲ್ಲಿ ಸಂತೆ ಇರುತ್ತದೆ. ಅಲ್ಲದೆ, ಕಲಬುರಗಿ ಮಾರುಕಟ್ಟೆಗೂ ಬದನೆಕಾಯಿ ತಗೊಂಡು ಹೋಗ್ತೀವೆ ಎನ್ನುತ್ತಾರೆ ಮಲಕಣ್ಣ ತಳವಾರ.
Related Articles
ಕಳೆದ ವರ್ಷ ಬದನೆಕಾಯಿ ಇವರನ್ನು ಸಂಕಷ್ಟದಿಂದ ಪಾರು ಮಾಡಿದೆಯಂತೆ. ಹೊಲದಿಂದ ಅನತಿ ದೂರದಲ್ಲಿ ಭೀಮಾ ನದಿ ಇದೆ. ಅಲ್ಲದೆ ಹೊಲದಲ್ಲಿ ಬಾವಿ ತೋಡಿಕೊಂಡಿದ್ದೇವೆ. ಹಾಗಾಗಿ ನಮ್ಮ ಜಮೀನಿನಲ್ಲಿ ಸಾಕಷ್ಟು ನೀರಿದೆ. ಹಾಗಂತ ಹೆಚ್ಚು ನೀರು ಬಳಸುತ್ತಿಲ್ಲ.
Advertisement
ಕಳೆದ ವರ್ಷ 30 ಗುಂಟೆಯಲ್ಲಿ ಬದನೆ ಬೆಳೆದು 3ಲಕ್ಷ ರೂ.ಗಳನ್ನು ಗಳಿಕೆ ಮಾಡಿದ್ದೆವು. ಅದರಿಂದ ಈ ವರ್ಷವೂ ಬದನೆಯನ್ನು ಬೆಳೆಯುತ್ತಿದ್ದೇವೆ. ಬದನೆಯಿಂದ ನಮಗೆ ಪ್ರತಿ ತಿಂಗಳು 40 ಸಾವಿರ ರೂ.ಗಿಂತ ಹೆಚ್ಚಿನ ಆದಾಯ ಬರುತ್ತಿದೆ. ಇಡೀ ಕುಟುಂಬ ಟೊಂಕ ಕಟ್ಟಿನಿಂತು ದುಡಿಯುತ್ತಿದ್ದೇವೆ. ಕೃಷಿ ನಂಬಿದವರನ್ನು ಯಾವತ್ತೂ ಕೈ ಬಿಟ್ಟಿಲ್ಲ. ಬಿಡೋದಿಲ್ಲ.. ಆದರೆ, ತುಂಬಾ ಜತನದಿಂದ ದುಡಿಯಬೇಕು ಎನ್ನುತ್ತಾರೆ ಮಕಲಣ್ಣ ತಳವಾರ.
– ಸೂರ್ಯಕಾಂತ ಎಂ.ಜಮಾದಾರ