Advertisement
ಸಮ್ಮಿಶ್ರ ಸರ್ಕಾರದಲ್ಲಿ ಹೈ-ಕ ಭಾಗಕ್ಕೆ ನಾಲ್ಕು ಸಚಿವ ಸ್ಥಾನ ಲಭಿಸಿದ್ದು, ಅದರಲ್ಲಿ ಎರಡು ಬೀದರ್ ಜಿಲ್ಲೆ ಪಾಲಾಗಿವೆ. ಉಳಿದಂತೆ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗೆ ಒಂದೊಂದು ಸಚಿವ ಸ್ಥಾನ ಸಿಕ್ಕಿದೆ. ಆದರೆ, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿಲ್ಲ. ಕಳೆದ ಬಾರಿ ಸಚಿವ ವಂಚಿತ ರಾಯಚೂರಿಗೆ ಈ ಬಾರಿ ನ್ಯಾಯ ಸಿಕ್ಕಿರುವುದು ಸಮಾಧಾನಕರ. ಆದರೆ, ಯಾದಗಿರಿಗೆ ಮತ್ತೂಮ್ಮೆ ಅನ್ಯಾಯವಾಗಿದೆ.
Related Articles
Advertisement
ಬೀದರ್‌ಗೆ ಬಂಪರ್: ಆರು ಕ್ಷೇತ್ರ ಹೊಂದಿದ ಬೀದರ್ ಜಿಲ್ಲೆಗೆ ಉತ್ತಮ ಪ್ರಾತಿನಿಧ್ಯ ಸಿಕ್ಕಿದೆ. ನಾಲ್ಕು ಬಾರಿ ಗೆದ್ದ ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ ಸಚಿವರಾದರೆ, ಸಿಎಂ ಎಚ್.ಡಿ. ಕುಮಾರಸ್ವಾಮಿ ಪರಮಾಪ್ತ ಬಂಡೆಪ್ಪ ಕಾಶೆಂಪುರ ಕೂಡ ಸಚಿವರಾಗಿದ್ದಾರೆ. ಇಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಕೂಡ ರೇಸ್‌ನಲ್ಲಿದ್ದರು. ಅವರಿಗೆ ಸಚಿವ ಸ್ಥಾನ ತಪ್ಪಿದೆ. ಇನ್ನು ಹೈಕ ಭಾಗದಲ್ಲಿ ಗೆದ್ದ ಅಲ್ಪಸಂಖ್ಯಾತರು ಇಬ್ಬರೇ. ಅದರಲ್ಲಿ ಮಾಜಿ ಸಚಿವ ಖಮರುಲ್ ಇಸ್ಲಾಂ ಪತ್ನಿ ಖನೀಜ್ ಫಾತೀಮಾ ಹಾಗೂ ಬೀದರ್ ನಗರ ಕ್ಷೇತ್ರದ ರಹೀಂ ಖಾನ್. ಮೂರು ಬಾರಿ ಗೆದ್ದ ರಹೀಂಖಾನ್ ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದರು. ಅವರಿಗೂ ಸಿಕ್ಕಿಲ್ಲ.
ಕೊಪ್ಪಳಕ್ಕೂ ಸಿಕ್ಕಿಲ್ಲ ಆದ್ಯತೆ: ಕೊಪ್ಪಳ ಜಿಲ್ಲೆಗೂ ಈ ಬಾರಿ ಸಚಿವ ಸ್ಥಾನ ಕೈ ತಪ್ಪಿದೆ. ಕುಷ್ಟಗಿ ಶಾಸಕ ಕಾಂಗ್ರೆಸ್‌ನ ಅಮರೇಗೌಡ ಬಯ್ನಾಪುರಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಒಟ್ಟಾರೆ ಹೈ-ಕ ಭಾಗದ 40 ಕ್ಷೇತ್ರಗಳಲ್ಲಿ 25ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಜಿಲ್ಲೆಗೊಂದರಂತೆ ಆದ್ಯತೆ ನೀಡಿದ್ದರೂ ಕನಿಷ್ಠ ಆರು ಸಚಿವ ಸ್ಥಾನವಾದರೂ ದಕ್ಕಬೇಕಿತ್ತು. ಸರ್ಕಾರದಲ್ಲಿ ಇನ್ನೂ ಹಲವು ಸ್ಥಾನ ಹಂಚಿಕೆಯಾಗದೆ ಬಾಕಿ ಇದ್ದು, ಮುಂಬರುವ ದಿನಗಳಲ್ಲಾದರೂ ಹಂಚಿಕೆ ಆಗಬೇಕು ಎಂಬ ಒತ್ತಾಯ ಈ ಭಾಗದ ಜನರದು
ಸರ್ಕಾರಗಳು ಈ ಭಾಗವನ್ನು ಕಡೆಗಣಿಸುವ ಸಂಪ್ರದಾಯ ಮುರಿಯಲಿ. ಹಿಂದಿನ ಸರ್ಕಾರ ಕೂಡ ಹೈ-ಕ ಭಾಗದ ಕೆಲ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಈ ಸರ್ಕಾರವೂ ಮೂರು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಿಲ್ಲ. ನಂಜುಂಡಪ್ಪ ವರದಿಯನ್ವಯ ಕನಿಷ್ಠ ಎಂಟು ಸಚಿವ ಸ್ಥಾನ ಹೈ-ಕ ಭಾಗಕ್ಕೆ ನೀಡಬೇಕು. ಅದರಲ್ಲಿ ಕನಿಷ್ಠ ಜಿಲ್ಲೆಗೊಂದರಂತೆ ಆರು ಸ್ಥಾನಗಳನ್ನಾದರೂ ಕೊಡಲಿ. ಅದರ ಜತೆಗೆ ಆ ಜಿಲ್ಲೆಯ ಸಚಿವರಿಗೆ ಅದೇ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಬೇಕು. ಅಂದಾಗ ಮಾತ್ರ ಪ್ರಗತಿ ಸಾಧ್ಯ. ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ ಪರಿಷತ್ ಮುಖಂಡ ಸಿದ್ಧಯ್ಯಸ್ವಾಮಿ ಕುಕನೂರು