ಮೈಸೂರು: ಅಭಿರುಚಿ ಪ್ರಕಾಶನ ಮತ್ತು ಗುರುತು ತಂಡದಿಂದ ಲೇಖಕ ವರದಳ್ಳಿ ಆನಂದ ಅವರ “ಬಂಗಾರಿ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಕರಿಕಲ್, ಬಂಗಾರಿ ಕಾದಂಬರಿ ಓದುವಾಗ ದೇವನೂರು ಮಹದೇವ ಅವರ ಕಥೆಯನ್ನು ಮತ್ತೆ ಓದುತ್ತಿರುವ ಭಾವನೆ ಮೂಡಲಿದೆ. ಈ ಕೃತಿ ಮಹದೇವ ಅವರ ಭಾಷೆ ಮುಂದುವರಿಕೆಯಾಗಿ ಗೋಚರಿಸುತ್ತಿದ್ದು, ಕೃತಿಯ ಹಲವು ಪಾತ್ರ ಮತ್ತು ಸನ್ನಿವೇಶಗಳು ಚೋಮನ ದುಡಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳನ್ನು ನೆನಪಿಸುತ್ತವೆ.
ಅಂತಹ ಬರವಣಿಗೆ ಸ್ವರೂಪ ಈ ಕೃತಿಯಲ್ಲಿ ಅಡಗಿದ್ದು, ಕಾದಂಬರಿಯಲ್ಲಿ ಹುಟ್ಟು-ಸಾವಿನ ಚರ್ಚೆ, ಜಾತಿ-ಧರ್ಮ-ಅಸ್ಪಶ್ಯತೆ ಲೇಖಕರನ್ನು ಬಹಳವಾಗಿ ಕಾಡಿವೆ ಎನಿಸುತ್ತದೆ. ಜಾತಿ, ಧರ್ಮ ಮೀರಿ ನಡೆಯುವ ಹಲವು ಸನ್ನಿವೇಶಗಳು, ತಳಸಮುದಾಯದ ಹೆಣ್ಣುಮಕ್ಕಳ ಗಟ್ಟಿತನವನ್ನು ಕೃತಿಕಾರ ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದು ಪ್ರಶಂಶಿಸಿದರು.
ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಬಂಗಾರಿ ಒಂದು ಓದಿಗೆ ಅರ್ಥ ಆಗಲ್ಲ, ಭಾಷೆಯ ತೂಕ ಭಾರವಾಗಿದೆ. ಕೃತಿಯ ಗ್ರಾಮ್ಯ ಭಾಷೆ ಸೊಗಡು ಚೆನ್ನಾಗಿದೆ. ಅದನ್ನು ಅರಗಿಸಿಕೊಳ್ಳಲು ಇಂಥ ಕಾದಂಬರಿಗಳನ್ನು ಹೆಚ್ಚು ಸಲ ಓದಬೇಕು. ಕೃತಿ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಮನುಷ್ಯತ್ವದ ಮೇಲೆ ಬೆಳಕು ಚೆಲ್ಲಿದ ಮಾನವೀಯ ಕಥೆ ಬಂಗಾರಿ ಎಂದರು.
ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ದೇವನೂರು ಮಹದೇವ ಅವರ ಕುಸುಮಬಾಲೆ, ಮರಣ ಮಂಡಲ ಮಧ್ಯದೊಳಗೆ, ಊರು-ಕೇರಿ ಕೃತಿಗಳ ನಂತರದ ಕೃತಿಯಾಗಿ ಬಂಗಾರಿಯನ್ನು ಇಟ್ಟು ನೋಡಬಹುದು. ಅಷ್ಟು ಮೌಲ್ಯಯುತ ಕಾದಂಬರಿಯಾಗಿದೆ. ಇದೇ ವೇಳೆ ಲೇಖಕ ವರಹಳ್ಳಿ ಆನಂದ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶಕ ಅಭಿರುಚಿ ಗಣೇಶ್, ಡಾ.ಹೊಂಬಯ್ಯ, ಯುವ ಲೇಖಕ ಎನ್.ಪುನೀತ್ ಹಾಜರಿದ್ದರು.