ಬೆಂಗಳೂರು: ಪ್ರತಿಷ್ಠಿತ ವಿಪ್ರೋ ಸಂಸ್ಥೆಯು 2016-17ನೇ ಹಣಕಾಸು ವರ್ಷದ ಮೂರನೇ ತ್ತೈಮಾಸಿಕ ವಹಿವಾಟಿನ ವಿವರ ಪ್ರಕಟಿಸಿದ್ದು, ಈ ಅವಧಿಯಲ್ಲಿ ಒಟ್ಟು 136.9 ಶತಕೋಟಿ ರೂ.ಆದಾಯ ಗಳಿಸಿದೆ.
ನಗರದ ಸರ್ಜಾಪುರದಲ್ಲಿರುವ ಸಂಸ್ಥೆಯಲ್ಲಿ ಬುಧವಾರ ತ್ತೈಮಾಸಿಕ ಅವಧಿಯ ವಿವರಗಳನ್ನು ಪ್ರಕಟಿಸಿದ ವಿಪ್ರೋ ಸಂಸ್ಥೆ ಸಿಇಒ ಅಬಿದಲಿ ಜಡ್. ನಿಮುಚ್‌ವಾಲಾ, “ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕ ಅವಧಿಯಲ್ಲಿ ಸಂಸ್ಥೆಯ ವಹಿವಾಟು ಶೇ.6.4ರಷ್ಟು ಹೆಚ್ಚಳವಾಗಿದೆ.
ಹಾಗೆಯೇ ನಿವ್ವಳ ಆದಾಯ 21.1 ಶತಕೋಟಿ ರೂ.ನಷ್ಟಿದ್ದು, ವಾರ್ಷಿಕ ಸರಾಸರಿಗೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.5.7ರಷ್ಟು ಕುಸಿತ ಕಂಡಿದೆ. 2017ರ ಮಾರ್ಚ್ ಅಂತ್ಯದ ವೇಳೆಗೆ ಐಟಿ ಸಂಬಂಧಿತ ಸೇವೆಗಳಿಂದ 1,922 ರಿಂದ 1941 ಮಿಲಿಯನ್ ಡಾಲರ್‌ನಷ್ಟು ಆದಾಯ ನಿರೀಕ್ಷಿಸಲಾಗಿದೆ’ ಎಂದರು.
ಐಟಿ ಸಂಬಂಧಿತ ಸೇವೆಗಳಿಂದ 1,902 ಮಿಲಿಯನ್ ಡಾಲರ್ ಆದಾಯ ಗಳಿಸಿದೆ. ಈ ಅವಧಿಯಲ್ಲಿ ಶೇ.0.7ರಷ್ಟು ಆದಾಯ ಕುಸಿದಿದ್ದರೂ ವಾರ್ಷಿಕ ಸರಾಸರಿ ಆದಾಯ ಶೇ.3.5ರಷ್ಟು ಏರಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ ಉತ್ತಮ ಗುರಿ ಸಾಧನೆಯಾಗಿರುವುದರಿಂದ ಸಂಸ್ಥೆ ಷೇರುಗಳಿಗೆ ಮಧ್ಯಂತರವಾಗಿ 2 ರೂ.ಡಿವಿಡೆಂಡ್ ಘೋಷಿಸಿದೆ. ಡಿಜಿಟಲ್ ಸೇರಿದಂತೆ ಆಯ್ದ ಕ್ಷೇತ್ರಗಳಲ್ಲಿ ಸಂಸ್ಥೆಯು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ್ದು, ನಿರೀಕ್ಷಿತ ಫಲಿತಾಂಶವನ್ನು ಕಾಣುತ್ತಿದ್ದೇವೆ ಎಂದರು.
ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್ ಮಾತನಾಡಿ, ಸಾಮಾನ್ಯವಾಗಿ 3ನೇ ತ್ತೈಮಾಸಿಕ ಅವಧಿಯಲ್ಲಿ ವಹಿವಾಟು ಉತ್ತೇಜನಕಾರಿಯಾಗಿ ರದಿದ್ದರೂ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹಣಕಾಸಿನ ನಿರ್ವಹಣೆಯಲ್ಲಿ ಶಿಸ್ತುಬದ್ಧತೆ ಕಾಯ್ದುಕೊಳ್ಳಲಾಗಿದೆ ಎಂದು ಹೇಳಿದರು.