Advertisement

16 ದಿನದಲ್ಲಿ ಕ್ಷೇತ್ರ ಸುತ್ತಿ ಮತಯಾಚಿಸುವೆ

10:08 AM Mar 25, 2019 | Team Udayavani |

ಮೈಸೂರು: ಚಾಮರಾಜ ನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮಾ.26ರಂದು ನಾಮಪತ್ರ ಸಲ್ಲಿಸುವುದಾಗಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ತಿಳಿಸಿದರು.

Advertisement

ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಸಿದ ನಂತರ ನಮಗೆ ಪ್ರಚಾರಕ್ಕೆ 16 ದಿನ ಕಾಲಾವಕಾಶ ಸಿಗುತ್ತದೆ. ಇದು ದೊಡ್ಡ ಸಮರ ಆಗಿರುವುದರಿಂದ ಈ ಚುನಾವಣೆಯನ್ನು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಈ ಅವಧಿಯಲ್ಲಿ ಕ್ಷೇತ್ರದಾದ್ಯಂತ ಪ್ರವಾಸ ಮಾಡಿ ಮತಯಾಚನೆ ಮಾಡುವುದಾಗಿ ಹೇಳಿದರು.

ಈ ಬಾರಿಯೂ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲೂ ಬಿಜೆಪಿ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಮಟ್ಟದಂತೆ ರಾಜ್ಯದಲ್ಲೂ ದುರ್ಬಲವಾಗಿರುವ ಕಾಂಗ್ರೆಸ್‌ ಪಕ್ಷ ಎಂಟು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಅಸಮಾಧಾನವಿದ್ದರೆ, ಎರಡೂ ಪಕ್ಷಗಳ ಮೈತ್ರಿಯಲ್ಲಿ ಅಪಸ್ವರ ಎದ್ದಿದೆ ಎಂದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಕೇಂದ್ರ ನಾಯಕರಿಗೆ ಕಪ್ಪ ಕಾಣಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ಡೈರಿ ಬಿಡುಗಡೆ ಮಾಡಿರುವುದು ರಾಜಕೀಯ ಪ್ರೇರಿತ ಆರೋಪ ಅಷ್ಟೆ, ಇದರಿಂದ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

Advertisement

ಚುನಾವಣೆ ಸಂದರ್ಭದಲ್ಲಿ ಇಂಥವೆಲ್ಲಾ ಸಹಜ, ಯಾರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದ ಅವರು, ನಾವು ಇಂತಹ ಸಾಕಷ್ಟು ಆರೋಪಗಳನ್ನು ಮಾಡಬಹುದು, ಆದರೆ ನಮಗೆ ಇಂಥದ್ದರಲ್ಲಿ ನಂಬಿಕೆ ಇಲ್ಲ ಎಂದರು.

ಗುರು-ಶಿಷ್ಯ ಸಂಬಂಧ ಈಗ ಉಳಿದಿಲ್ಲ. ಅದೇನಿದ್ದರೂ ರಾಮಾಯಣ-ಮಹಾಭಾರತ ಕಾಲಕ್ಕೇ ಮುಗಿಯಿತು. ಈಗ ಅವರು ಕಾಂಗ್ರೆಸ್‌-ನಾನು ಬಿಜೆಪಿ ಅಭ್ಯರ್ಥಿ ಅಷ್ಟೇ ಎನ್ನುವ ಮೂಲಕ ನಾನು ಶ್ರೀನಿವಾಸಪ್ರಸಾದ್‌ ಅವರ ಶಿಷ್ಯನಲ್ಲ ಎಂಬ ಆರ್‌.ಧ್ರುವನಾರಾಯಣ್‌ ಹೇಳಿಕೆಗೆ ತಿರುಗೇಟು ನೀಡಿದರು.

ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಈಗ ಅವರು ಬೇರೆ ಪಕ್ಷ-ನಾನು ಬೇರೆ ಪಕ್ಷ, ಇಲ್ಲಿ ಗುರು-ಶಿಷ್ಯ ಎಂಬುದೆಲ್ಲಾ ಲೆಕ್ಕಕ್ಕೆ ಬರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಇದಕ್ಕೆಲ್ಲಾ ಉತ್ತರ ಕೊಡುತ್ತಾರೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ ವಿಚಾರ ನಮ್ಮ ಕೈಲಿಲ್ಲ, ಅದು ಪ್ರಧಾನಿ ನರೇಂದ್ರಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಬಿಟ್ಟ ವಿಚಾರ, ಇಲ್ಲಿನ ಬೆಳವಣಿಗೆಗಳು ಅವರ ಗಮನದಲ್ಲಿದೆ. ಸುಮಲತಾ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವುದರಿಂದ ಮಂಡ್ಯ ಕ್ಷೇತ್ರದಲ್ಲಿ ಪರಿಸ್ಥಿತಿ ಬೇರೆಯೇ ಇದೆ.

ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ಕೆಟ್ಟದಾಗಿದೆ, ಕಾರ್ಯಕರ್ತರನ್ನು ಅಮಾನತು ಮಾಡುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿ ಪಕ್ಷದ ವರಿಷ್ಠರು ಸುಮಲತಾ ಅವರಿಗೆ ಬೆಂಬಲ ಕೊಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next