ಅಹ್ಮದಾಬಾದ್/ಹೊಸದಿಲ್ಲಿ: ದೇಶಾದ್ಯಂತ ಭಾರೀ ಕುತೂಹಲಕ್ಕೆಡೆ ಮಾಡಿದ್ದ ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಭರ್ಜರಿ ಸಿಹಿ ಸಿಗಲಿದೆ ಎಂದು ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿವೆ.
ಗುರುವಾರ ಗುಜರಾತ್‌ನಲ್ಲಿ ನಡೆದ ಕಡೇ ಹಂತದ ಮತ ದಾನದ ಬಳಿಕ ದೇಶದ ನಾನಾ ಆಂಗ್ಲ ವಾಹಿನಿಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ. ಹೆಚ್ಚು ಕಡಿಮೆ ಈ ಎಲ್ಲ ವಾಹಿನಿಗಳೂ ಬಿಜೆಪಿಗೆ ಗೆಲುವಿನ ಸಿಹಿ ಎಂದು ಸಾರಿವೆ.
ಕಡೇ ಹಂತದಲ್ಲಿ ಶೇ.68.7ರಷ್ಟು ಮತದಾನವಾಗಿದೆ. ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಶಾಂತ ರೀತಿಯಲ್ಲೇ ಮತದಾನ ನಡೆದಿದೆ.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣ ವಾಗಿತ್ತು. ಪಾಟೀದಾರ್ ಪ್ರತಿ ಭಟನೆ ಮೂಲಕ ಬಿಜೆಪಿಯ ಪ್ರಬಲ ವೋಟ್‌ಬ್ಯಾಂಕ್ ಎಂದೇ ಬಿಂಬಿತವಾಗಿದ್ದ ಪಟೇಲರು ಬಿಜೆಪಿಯಿಂದ ದೂರ ಸರಿದಿದ್ದರು ಎನ್ನಲಾಗಿತ್ತು. ಅಲ್ಲದೆ ಠಾಕೂರ್ ಸಮುದಾಯದ ಅಲ್ಪೇಶ್ ಠಾಕೂರ್, ದಲಿತ ಸಮುದಾಯದ ಜಿಗ್ನೇಶ್ ಮೆವಾನಿ ಅವರ ಸಂಘಟನೆ ಮತ್ತು ಹೋರಾಟದಿಂದಾಗಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈ ಯಾವ ವಿಚಾರಗಳೂ ಬಿಜೆಪಿ ಗೆಲುವಿಗೆ ಅಡ್ಡಿಯಾಗಿಲ್ಲ ಎಂದು ಈ ಸಮೀಕ್ಷೆ ಹೇಳಿವೆ. ಅಲ್ಲದೆ ಸರಕಾರ ರಚಿಸಲು ಬೇಕಾದ 92 ಸ್ಥಾನಗಳನ್ನು ಯಾವುದೇ ಅಡ್ಡಿ ಇಲ್ಲದೇ ಬಿಜೆಪಿ ಪಡೆದುಕೊಳ್ಳಲಿದೆ ಎಂದೂ ವಿಶ್ಲೇಷಿಸಿವೆ.
182 ಸ್ಥಾನಗಳ ಬಲವುಳ್ಳ ಗುಜರಾತ್‌ನಲ್ಲಿ ಬಿಜೆಪಿ 108ರಿಂದ 135 ಮತ್ತು ಕಾಂಗ್ರೆಸ್ 47ರಿಂದ 74 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿವೆ. ಕೆಲವು ದಿನಗಳ ಹಿಂದಷ್ಟೆ ಮತದಾನಪೂರ್ವ ಸಮೀಕ್ಷೆ ನಡೆಸಿದ್ದ ಸಿಎಸ್‌ಡಿಎಸ್, ಗುಜರಾತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆಯಲಿದೆ ಎಂದು ಹೇಳಿತ್ತು. ಆದರೆ ಈಗ ಇದೇ ವಾಹಿನಿ ಬಿಜೆಪಿಗೆ ನಿಚ್ಚಳ ಬಹುಮತ ದೊರೆಯಲಿದೆ ಎಂದು ಹೇಳಿದೆ.
ಹಿಮಾಚಲವೂ ಕಮಲದ ತೆಕ್ಕೆಗೆ
ಚುನಾವಣೆ ನಡೆದ ಮತ್ತೂಂದು ರಾಜ್ಯವಾದ ಹಿಮಾಚಲ ಪ್ರದೇಶ ದಲ್ಲೂ ಬಿಜೆಪಿಗೇ ಗೆಲುವು ಎಂದು ಈ ಸಮೀಕ್ಷೆ
ನುಡಿದಿದೆ. ಈ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಲಿದೆ ಎಂದು ಹೇಳಿದೆ. ಅಂದರೆ ಟುಡೇಸ್ ಚಾಣಕ್ಯ ಪ್ರಕಾರ 68 ಸ್ಥಾನಗಳ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 55ರಲ್ಲಿ ಮತ್ತು ಕಾಂಗ್ರೆಸ್ 13ರಲ್ಲಿ ಗೆಲ್ಲಲಿದೆ ಎಂದಿದೆ. ಇನ್ನು ಟೈಮ್ಸ್‌ನೌ ಪ್ರಕಾರ ಬಿಜೆಪಿ 51 ಮತ್ತು ಕಾಂಗ್ರೆಸ್ 17, ಇಂಡಿಯಾ ಟುಡೆ ಪ್ರಕಾರ ಬಿಜೆಪಿ 50, ಕಾಂಗ್ರೆಸ್ 18 ಸ್ಥಾನಗಳಲ್ಲಿ ಜಯ ಗಳಿಸಲಿದೆ.