ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಜಲಸಂಬಂಧಿ ದುರಂತದಲ್ಲಿ ಎಂಟು ಮಂದಿ ನೀರು ಪಾಲಾಗಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಮೂವರು, ಚಿತ್ರದುರ್ಗ ಜಿಲ್ಲೆ ಹೊಸ ದುರ್ಗ ತಾಲೂಕಿನ ಹೆಗ್ಗರೆಯಲ್ಲಿ ಮೂವರು ಬಾಲ ಕರು ಹಾಗೂ ರಾಮದುರ್ಗಾದ ಬನ್ನೂರು ತಾಂಡಾ ದಲ್ಲಿ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ.
ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗೊಂದಿಹಳ್ಳಿ ಬಳಿ ಶುಕ್ರವಾರ ಹೇಮಾವತಿ ನದಿಯಲ್ಲಿ ಹಸು ತೊಳೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿಗೆ ಬಿದ್ದ ಗೊಂದಿಹಳ್ಳಿಯ ರೈತ ಕುಮಾರ್(42) ಹಾಗೂ ಅವರ ಮಗ ತೇಜಸ್(4) ಮೃತಪಟ್ಟಿದ್ದಾರೆ. ತಮ್ಮ ಜಮೀನಿನ ಬಳಿ ಹರಿಯುವ ಹೇಮಾವತಿ ನದಿಯಲ್ಲಿ ಶುಕ್ರವಾರ ದೀಪಾವಳಿ ಹಬ್ಬದ ಪ್ರಯುಕ್ತ ಹಸುವನ್ನು ತೊಳೆಯಲು ಕುಮಾರ್ ನಾಲ್ಕು ವರ್ಷದ ಮಗ ತೇಜಸ್‌ನೊಂದಿಗೆ ಹೋಗಿದ್ದರು. ಮಗ ದಡದಲ್ಲಿ ನಿಂತು ಹಸುವಿಗೆ ಕಟ್ಟಿದ್ದ ಹಗ್ಗವನ್ನು ಹಿಡಿದುಕೊಂಡಿ ದ್ದನು. ಕುಮಾರ್ ನದಿ ಯಲ್ಲಿ ಇಳಿದು ಹಸು ತೊಳೆ ಯುವ ವೇಳೆ ಹಸು ಬೆದರಿ ಹಗ್ಗವನ್ನು ಎಳೆದಾಡಿದೆ. ಈ ವೇಳೆ ತೇಜಸ್ ನೀರಿಗೆ ಬಿದ್ದು ಕೊಚ್ಚಿ ಕೊಂಡು ಹೋಗಿದ್ದಾನೆ. ರಕ್ಷಿಸಲು ಹೋದ ತಂದೆಯೂ ಮಗನೊಂದಿಗೆ ನೀರುಪಾಲಾಗಿದ್ದಾರೆ. ಪೊಲೀಸರು ಶವಗಳ ಶೋಧ ಕಾರ್ಯ ನಡೆಸಿದ್ದಾರೆ.
ಕಲ್ಯಾಣಿಯಲ್ಲಿ ಜಲಸಮಾಧಿ: ದೀಪಾವಳಿ ಪ್ರಯುಕ್ತ ಓಕುಳಿ ಸ್ನಾನ ಮಾಡುತ್ತಿದ್ದ ಕೆ.ಆರ್.ಪೇಟೆ ತಾಲೂಕು ಸಾಸಲುಕೊಪ್ಪಲು ಗ್ರಾಮದ ಅಣ್ಣಯ್ಯಪ್ಪ(45) ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಸಾಸಲು ಗ್ರಾಮದ ಶ್ರೀ ಶಂಭುಲಿಂಗೇಶ್ವರ ಶ್ರೀ ಕ್ಷೇತ್ರದಲ್ಲಿ ನಡೆದಿದೆ. ದೀಪಾವಳಿ ಅಂಗವಾಗಿ ಶುಕ್ರವಾರ ಸಗಣಿ ಓಕುಳಿಯಾಟ ನಡೆಯುತ್ತಿತ್ತು. ಮುಗಿದ ಬಳಿಕ ಸ್ನಾನ ಮಾಡಲು ಅಣ್ಣಯ್ಯಪ್ಪ ಸೇರಿ ನೂರಾರು ಭಕ್ತರು ಕಲ್ಯಾಣಿಗೆ ಇಳಿದರು. ಆದರೆ ಅಣ್ಣಯ್ಯಪ್ಪ ಮೇಲೆ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದರು. ಸಿಬ್ಬಂದಿ ಶವಕ್ಕಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಸ್ನಾನ ಮಾಡಲು ಕೆರೆಗೆ ಹೋದ ಬಾಲಕರಿಬ್ಬರು ಮುಳುಗಿ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದಲ್ಲಿ ಶುಕ್ರವಾರ ನಡೆದಿದೆ. ಬನ್ನೂರ ತಾಂಡಾದ ಸುದೀಪ್ ಕೃಷ್ಣಾ ಚವ್ಹಾಣ (13), ಶಿವಾನಂದ ಮಹಾಂತೇಶ ಚವ್ಹಾಣ (10) ಮೃತರು. ಈ ಬಾಲಕರು ಸ್ನಾನ ಮಾಡಲೆಂದು ಬೆಳಗ್ಗೆ ಕೆರೆಗೆ ಹೋಗಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತುಂಬಿದ ಕೆರೆಯಲ್ಲಿ ಕಾಲು ಜಾರಿ ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮೂವರ ದುರ್ಮರಣ: ಈಜಲು ಹೋಗಿದ್ದ ಮೂವರು ಬಾಲಕರು ಕೆರೆಗುಂಡಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಬಾಲಕರ ಬಟ್ಟೆ ಮಾತ್ರ ಕೆರೆ ಬಳಿ ಕಂಡಿದ್ದು ಈವರೆಗೂ ಶವ ಪತ್ತೆಯಾಗಿಲ್ಲ. ಹೀಗಾಗಿ ಬಾಲಕರು ನೀರಿನಲ್ಲಿ ಮುಳುಗಿದ್ದಾರೋ ಅಥವಾ ನಾಪತ್ತೆಯಾಗಿದ್ದಾರೊ ಎಂಬ ಶಂಕೆ ವ್ಯಕ್ತವಾಗಿದೆ. ಶ್ರೀ ಲಕ್ಷ್ಮೀರಂಗನಾಥ ಗ್ರಾಮಾಂತರ ಪ್ರೌಢಶಾಲೆ ಯಲ್ಲಿ 9 ನೇ ತರಗತಿ ಓದುತ್ತಿರುವ ಮಹಾಂತೇಶ್ ಕುಮಾರ್, ಕಾಂತರಾಜ್, ಕೆಂಪರಾಜ್ ಮೃತಪಟ್ಟ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಕೆರೆಗುಂಡಿಯ ಬಳಿ ಮಕ್ಕಳ ಬಟ್ಟೆ ಇರುವುದನ್ನು ಗಮನಿಸಿ ಸುತ್ತಮುತ್ತ ಪರಿಶೀಲಿಸಿದ್ದಾನೆ. ಯಾರೂ ಕಾಣದಿದ್ದಾಗ ಗ್ರಾಮಸ್ಥರಿಗೆ ವಿಷಯ ತಲುಪಿಸಿದ್ದಾನೆ. ಕೆರೆ ಬಳಿ ಇರುವ ಬಟ್ಟೆ ನೋಡಿದ ಪೋಷಕರು ಇವು ತಮ್ಮ ಮಕ್ಕಳದ್ದು ಎಂದು ತಿಳಿಸಿದ್ದಾರೆ. ಆಗ ಮಕ್ಕಳು ಈಜಲು ಹೋಗಿ ಗುಂಡಿಯಲ್ಲಿ ಮುಳುಗಿರುವುದು ಬೆಳಕಿಗೆ ಬಂದಿದೆ. ಕೆರೆಯ ಹೂಳು ಎತ್ತಲಾಗಿದ್ದು, ಅಲ್ಲಲ್ಲಿ ದೊಡ್ಡ ಗುಂಡಿಗಳಾಗಿದ್ದವು. ಅಲ್ಲದೆ, ಈಚೆಗೆ ಸುರಿದ ಮಳೆಯಿಂದ ಕೆರೆಯಲ್ಲಿನ ಗುಂಡಿಗಳು ತುಂಬಿದ್ದು, ಇವುಗಳ ಆಳ ತಿಳಿಯದಾಗಿದೆ. ಈ ಗುಂಡಿಯಲ್ಲಿ ಮುಳುಗಿ ಹೂಳಿನಲ್ಲಿ ಸಿಲುಕಿ ಬಾಲಕರು ಮೃತಪಟ್ಟಿರಬಹುದು
ಎಂದು ಶಂಕಿಸಲಾಗಿದೆ. ಈಜುಪಟುಗಳು ಕೆರೆಗುಂಡಿಯಲ್ಲಿ ಹುಡುಕಾಡಿದರೂ ಶವ ಸಿಕ್ಕಿಲ್ಲ.