ಅಣು, ರೇಣು, ತೃಣ ಕಾಷ್ಠಗಳೆಲ್ಲ ಸೂಕ್ಷ್ಮವೇ ಸೂಕ್ಷ್ಮಕ್ಕೆ ಪರ್ಯಾಯ ಪದಗಳೇ. ಹಾಗಿರುವಾಗ ‘ತೇನ ವಿನಾ ತೃಣ ಮಪಿ ನ ಚಲತಿ’ ಎಂಬ ಶರಣಾಗತಿಗೆ ಸಂಬಂಧಿತ ವಾಕ್ಯವೂ ಇದಕ್ಕೆ ಅನ್ವರ್ಥವೇ…
ಏನಿದ್ದರೂ ಇಲ್ಲಿ ಸೂಕ್ಷ್ಮ ಎಂಬ ಪದವೇ ಪ್ರಧಾನ. ನಮ್ಮ ಪ್ರತಿಯೊಂದು ಕಾರ್ಯವೂ ಸೂಕ್ಷ್ಮತೆಯಿಂದ ಕೂಡಿರಬೇಕು. ಅರ್ಥಾತ್ ನಾವು ಇಡುವ ಹೆಜ್ಜೆ, ನುಡಿದ ಮಾತು, ನೋಡುವ ನೋಟ, ಮಾಡುವ ಕಾರ್ಯಗಳೆಲ್ಲದರಲ್ಲಿಯೂ ಸೂಕ್ಷ್ಮತೆ ಇದ್ದರೆ ಆದರೆ ಫಲಿತಾಂಶವೂ ಉತ್ತಮವಾಗಿರುತ್ತದೆ ಎಂಬುದು ನಂಬಿಕೆ. ವಾಸ್ತವ ಸತ್ಯ. ಇಲ್ಲವಾದರೆ ಅರ್ಥಹೀನ ಎನ್ನುವುದಕ್ಕಿಂತ ಅಪೂರ್ಣಗೊಳ್ಳುತ್ತದೆ ಎಂದರೆ ತಪ್ಪಾಗಲಾರದು.
ಇನ್ನೊಬ್ಬರು ನಮ್ಮೊಡನೆ ಮಾತನಾಡುವಾಗ ನಾವು ಅವರ ಮಾತನ್ನು ಕೇಳಿದ ಬಳಿಕವೇ ಉತ್ತರಿಸುವುದು. ಇಲ್ಲಿ ಕೇಳಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿ ಅತ್ಯಗತ್ಯ. ಅಂತೆಯೇ ತರಗತಿಗೆ ಬಂದ ವಿದ್ಯಾರ್ಥಿ ಕುರ್ಚಿ, ಡೆಸ್ಕ್ ಎಳೆಯುವುದು, ದೊಪ್ಪನೆ ಪುಸ್ತಕ, ಬ್ಯಾಗ್‌ಗಳನ್ನು ಎಸೆಯುವುದು, ಹೇಗೋ ಹೇಗೋ ಕುಳಿತುಕೊಳ್ಳುವುದು, ನಿತ್ಯೋಪಯೋಗಿ ಬಟ್ಟೆ ಬರೆ, ಪುಸ್ತಕ ಲೇಖನ ಸಾಮಗ್ರಿಗಳೊಂದಿಗೆ ಅತಿ ಮುಖ್ಯವಾದ ವಸ್ತುಗಳನ್ನೂ ಎಲ್ಲೆಂದರಲ್ಲಿ ಇಡುವುದು.
ಇದೆಲ್ಲ ಸರಿಯೇ? ಪ್ರತಿಯೊಂದು ವಸ್ತುವಿಗೂ ಪ್ರತಿಯೊಂದು ಕಾರ್ಯಕ್ಕೂ, ಪ್ರತಿಯೊಂದು ಸ್ಥಳಕ್ಕೂ ಅದರದ್ದೇ ಆದ ಮಹತ್ವವಿದೆ. ವಸ್ತುಗಳನ್ನು ಒಂದೆಡೆ ನಿರ್ದಿಷ್ಟ ಸ್ಥಳದಲ್ಲಿಡುವುದು, ತೆಗೆಯುವುದು, ಉಪಯೋಗಿಸಿದ ಬಳಿಕ ಮತ್ತೆ ಅಲ್ಲಿಯೇ ಜೋಪಾನವಾಗಿಡುವುದು ಒಂದು ಸೂಕ್ಷ್ಮತೆಯ ಕೆಲಸ.
ಎಷ್ಟೋ ಬಾರಿ ಒಂದು ವಸ್ತುವಿಗಾಗಿ ಹುಡುಕಿ, ನಮಗೆ ನಾವೇ ಹೇಳಿ ಕೊಳ್ಳುತ್ತೇವೆ. ಅಗತ್ಯವಿದ್ದಾಗ ಯಾವುದೂ ಸಿಗುವುದಿಲ್ಲ…ಇಂಥ ಸ್ಥಿತಿಗೆ ನಾವೇ ಕಾರಣರಾಗುತ್ತೇವೆ. ವಸ್ತು ಸಿಗದಿದ್ದಾಗ ನಮಗೆ ನಾವೇ ಗಲಿಬಿಲಿಯಾಗುತ್ತೇವೆ. ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಹುಡುಕಿ ಹುಡುಕಿ ಸುಸ್ತಾಗುತ್ತೇವೆ. ಕೆಲವೊಮ್ಮೆ ಹತ್ತಿರವಿರುವವರ ಮೇಲೆ ಹರಿಹಾಯುತ್ತೇವೆ. ಒಟ್ಟಾರೆ ಪರಿಸ್ಥಿತಿಯ ಕೈಗೊಂಬೆಯಾಗಿ ನಾವಿರಿಸಿಕೊಳ್ಳದ ಸೂಕ್ಷ್ಮ ಪ್ರಜ್ಞೆಯ ದೆಸೆಯಿಂದ ನಾವೇ ಕಂಗಾಲಾಗುತ್ತೇವೆ. ಇದರಿಂದ ನಮ್ಮ ಸುತ್ತಮುತ್ತಲಿನ ಜನರೊಡನೆ ಬಾಂಧವ್ಯವೂ ಹದಗೆಡುತ್ತದೆ. ಆದ್ದರಿಂದ ಸೂಕ್ಷ್ಮತೆ ಶಬ್ದ ಕೇವಲ ಶಬ್ದವಾಗಿರದೇ ನಾವು ನಿತ್ಯ ಮಾಡುವ ಕಾರ್ಯಗಳಲ್ಲಿ ರೂಢಿಸಿ ಕೊಳ್ಳಬೇಕಾದ ಅತ್ಯಂತ ಅಗತ್ಯದ ಅರ್ಥಗರ್ಭಿತ ಪದ ಕೂಡ ಹೌದು.
ಉಮೇಶ್ ಕಾರಂತ ಮಂಗಳೂರು