ಬೆಂಗಳೂರು: ವರ್ತೂರು ಕೋಡಿ ರಸ್ತೆಯಲ್ಲಿ ಜ.12 ರಂದು ನಡೆದಿದ್ದ ಗಿರಿಧರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಭಾನುವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಎಚ್‌ಎಎಲ್ ಠಾಣೆ ರೌಡಿ ಶೀಟರ್ ರೋಹಿತ್, ಆತನ ಸಹಚರಾದ ಗಿರೀಶ್, ಭರತ್, ವಿಕ್ಕಿ, ಶಿವ ಅಲಿಯಾಸ್ ಪಟೇಲ, ಮಧು ಸೇರಿ 14 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆಯಲಾಗಿರುವ ಆರೋಪಿಗಳೇ ಗಿರಿಧರ್ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ. ಇನ್ನು ವಿಚಾರಣೆ ಮುಂದುವರೆಸಲಾಗಿದೆ. ಪೊಲೀಸರ ವಶದಲ್ಲಿರುವ ರೌಡಿಶೀಟರ್ ರೋಹಿತ್ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಆದರೆ, ಗಿರಿಧರ್ ಆರೋಪಿಗಳು ಟಾರ್ಗೆಟ್ ಆಗಿರಲಿಲ್ಲ. ಆತನ ಜತೆಗಿದ್ದ ಸ್ನೇಹಿತ ಸಿಗದಕಾರಣ ಗಿರಿಧರ್‌ನನ್ನು ಹಂತಕರು ಹತ್ಯೆ ಮಾಡಿದ್ದರು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಣ್ಣನ ಕೊಲೆಗೆ ಪ್ರತೀಕಾರ?: ಸೋಮ ಎಂಬಾತ ಎಚ್‌ಎಎಲ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು, 2008ರಲ್ಲಿ ತನ್ನ ಸಹಚರರೊಂದಿಗೆ ಸೇರಿ ದಿನೇಶ್ ಎಂಬುವರನ್ನು ಕದಿರೇನಹಳ್ಳಿ ಬಳಿ ಹತ್ಯೆಗೈದಿದ್ದ. ದಿನೇಶ್ ಈಗ ಪೊಲೀಸರ ವಶದಲ್ಲಿರುವ ರೋಹಿತನ ಅಣ್ಣ. ಅಣ್ಣನ ಕೊಲೆಗೆ ಪ್ರತೀಕಾರವಾಗಿ ರೋಹಿತ್, ಸೋಮನ ಕೊಲೆಗೆ ಸಂಚು ರೂಪಿಸಿದ್ದ. ಮೂರು ಬಾರಿ ಸೋಮನ ಕೊಲೆಗೆ ಸಂಚು ರೂಪಿಸಿ ರೋಹಿತ್ ವಿಫಲಗೊಂಡಿದ್ದ.
ಜ.12 ರಂದು ಸೋಮ ಮತ್ತು ಗಿರಿಧರ್ ಕಾರಿನಲ್ಲಿ ವರ್ತೂರು ಕೋಡಿ ರಸ್ತೆಯಲ್ಲಿ ಹೋಗಿದ್ದನ್ನು ನೋಡಿದ್ದ ಸೋಮನ ಸಹಚರನೊಬ್ಬ ಈ ಬಗ್ಗೆ ರೋಹಿತ್‌ಗೆ ವಿಷಯ ತಿಳಿಸಿದ್ದ. ಕೂಡಲೇ ರೋಹಿತ್ ತನ್ನ ಗ್ಯಾಂಗ್‌ನೊಂದಿಗೆ ಕಾರು-ಬೈಕ್‌ನಲ್ಲಿ ಸೋಮ ಇದ್ದ ಸ್ಥಳಕ್ಕೆ ತೆರಳಿದ್ದ. ವರ್ತೂರು ಕೋಡಿ ರಸ್ತೆಯಲ್ಲಿ ಸೋಮ ಇದ್ದ ಕಾರಿಗೆ ತಮ್ಮ ವಾಹನ ಗುದ್ದಿಸಿದ ಆರೋಪಿಗಳು, ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದರು.
ಈ ವೇಳೆ ಕಾರಿನ ಹಿಂಬದಿ ಕುಳಿತಿದ್ದ ಸೋಮ ಕಾರು ಇಳಿದು ಪರಾರಿಯಾಗಿದ್ದ. ದಾಳಿಯಿಂದ ಆತಂಕಗೊಂಡ ಗಿರಿಧರ್ ಕಾರನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ್ದು, ಮಳಿಗೆಯೊಂದಕ್ಕೆ ಗುದಿದ್ದ. ಈ ವೇಳೆ ಕೈಗೆ ಸಿಕ್ಕ ಗಿರಿಧರ್ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಹತ್ಯೆ ಮಾಡಿದ್ದರು. ಈ ದೃಶ್ಯಾವಳಿ ಸಿಸಿಟಿವಿಯೊಂದರಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ವೈಟ್‌ಫೀಲ್ಡ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.