Advertisement

ಜೀವಪರ ಅಭಿವೃದ್ಧಿಯೇ ನೈಜ, ಸಮಗ್ರ ಅಭಿವೃದ್ಧಿ

12:41 PM Mar 06, 2017 | |

ದಾವಣಗೆರೆ: ಸಮಕಾಲೀನ ಸಂದರ್ಭದಲ್ಲಿ ಚರಿತ್ರೆಯಲ್ಲಿನ ವಿಕಾರ, ತಪ್ಪುಗಳನ್ನು ನೋಡುವ ಮೂಲಕ ಭವಿಷ್ಯವನ್ನು ವಿಕಾರಗೊಳಿಸುವ ಅಪಾಯಕಾರಿ ಕೆಲಸ ನಡೆಯುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ದಾದಾಪೀರ್‌ ನವಿಲೇಹಾಳ್‌ ಆತಂಕ ವ್ಯಕ್ತಪಡಿಸಿದ್ದಾರೆ. 

Advertisement

ಭಾನುವಾರ ಕನ್ನಡ ಕುವೆಂಪು ಭವನದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ ಎಸ್‌ ಸಂಘಟನೆಗಳ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 4ನೇ ದಾವಣಗೆರೆ ಸಾಂಸ್ಕೃತಿಕ ಜನೋತ್ಸವ ಸಮಾರೋಪದಲ್ಲಿ ಮಾತನಾಡಿದ ಅವರು, ಚರಿತ್ರೆಯಲ್ಲಿ ತಪ್ಪಾಗಿದೆ.

ಹಾಗಾಗಿ ಹೀಗೆಯೇ ನೋಡಬೇಕು ಎಂದು ಒತ್ತಾಯಿಸುವುದು ಬಹು ಸಂಸ್ಕೃತಿಯ ಭಾರತದಲ್ಲಿ ತೀರಾ ಅಪಾಯಕಾರಿ ಅಂಶ ಎಂದರು. ಇಂದಿನ ವಾತಾವರಣದಲ್ಲಿ ಅಭಿವೃದ್ಧಿಯ ಮೀಮಾಂಸೆಯೇ ಬದಲಾಗುತ್ತಿದೆ. ಅಭಿವೃದ್ಧಿ ಎಂದರೆ ಕಟ್ಟಡ, ರಸ್ತೆ, ಸೇತುವೆ ನಿರ್ಮಾಣ ಎನ್ನುವುದಕ್ಕೆ ಮಾತ್ರವೇ ಸೀಮಿತವಾಗಿದೆ. 

ಅಭಿವೃದ್ಧಿ ಎಂದರೆ ದೇಶದ ಜನರ ಸಮಗ್ರ ಅಭಿವೃದ್ಧಿ ಎಂಬುದನ್ನೇ ಜನಪ್ರತಿನಿಧಿಗಳು ಮರೆಯುತ್ತಿದ್ದಾರೆ. ನೆಲ ಪವಿತ್ರ ಆಗಬೇಕಾದರೆ ಜೀವಪರ ಅಭಿವೃದ್ಧಿ ಆಗಬೇಕು ಎಂದು ಪ್ರತಿಪಾದಿಸಿದರು. ಪ್ರಸ್ತುತ ವಾತಾವರಣದಲ್ಲಿ ಬಡತನ, ಅನಕ್ಷರರತೆ, ಸಾಮಾಜಿಕ ಅಸಮಾನತೆ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡುವರನ್ನು ತೀರಾ ಅನುಮಾನದಿಂದ ನೋಡಲಾಗುತ್ತಿದೆ. 

ಅಭಿವ್ಯಕ್ತಿ ಸ್ವಾತಂತ್ರ ಎಂಬುದು ಕೆಲವರ ಇಚ್ಛೆಯಂತೆ ಮಾತ್ರವೇ ಮಾತನಾಡುವುದು ಎನ್ನುವಂತಾಗಿದೆ. ದೇಶಪ್ರೇಮದ ವಿಚಾರವೇ ವಿವಾದಕ್ಕೆ ಒಳಗಾಗುತ್ತಿದೆ. ಸೈದ್ಧಾಂತಿಕ ರಾಜಕಾರಣದ ಬದಲಿಗೆ ಅವಕಾಶ ಅಥವಾ ಸಮಯಸಾಧಕತನ ರಾಜಕೀಯ, ಸಣ್ಣ ಮಾತನ್ನೇ ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಳ್ಳಲಾಗುತ್ತಿದೆ.

Advertisement

ಇದಕ್ಕೆಲ್ಲಾ ನಮ್ಮಲ್ಲಿನ ಭಾವನಾ ದಾರಿದ್ರವೇ ಕಾರಣ. ಎಲ್ಲರೂ ಒಗ್ಗೂಡಿ ಇಂಥಹ ವಿಚಾರ, ಕೃತ್ಯಕ್ಕೆ ಸಾಮೂಹಿಕ ಧಿಕ್ಕಾರತ ಹೇಳಬೇಕಿದೆ ಎಂದು ತಿಳಿಸಿದರು. ದೇಶ ಅಪಾಯಕಾರಿ ಸ್ಥಿತಿಯತ್ತ ಸಾಗುತ್ತಿರುವ ಬಗ್ಗೆ ಪ್ರಶ್ನಿಸಿ, ಧ್ವನಿ ಎತ್ತುವ ಮೂಲಕ ಸಾಮಾಜಿಕ ಜವಾಬ್ದಾರಿ ಹೊರಬೇಕಾದ ಯುವ ಸಮೂಹ ಮೊಬೈಲ್‌, ಕಂಪ್ಯೂಟರ್‌ ಮಾತ್ರವೇ ಸರ್ವಸ್ವ ಎನ್ನುವಂತೆ ವರ್ತಿಸುತ್ತಿದೆ.

ಒಳ್ಳೆಯದಕ್ಕಿಂತಲೂ ಕೆಟ್ಟ ವಿಚಾರಗಳತ್ತಲೇ ಹೆಚ್ಚು ಆಕರ್ಷಿತವಾಗುತ್ತಿದೆ. ಹೃದಯ ಬೆಸೆಯಬೇಕಾದ ಮಾತುಗಳು ಜನರ ನಡುವೆ ವೈಮನಸ್ಸಿನ ಗೋಡೆ ನಿರ್ಮಾಣ ಮಾಡುತ್ತಿವೆ. ಇಂಥದ್ದನ್ನೆಲ್ಲಾ ಪ್ರತಿಭಟಿಸುವ ನೈತಿಕ ಸ್ಥೈರ್ಯ ಕಳೆದುಹೋಗುತ್ತಿದೆ ಎಂದು ತಿಳಿಸಿದರು. ಬಹುಮುಖೀ ಸಾಂಸ್ಕೃತಿಕ ಭಾರತೀಯ ನೆಲದಲ್ಲಿ ಏಕಮುಖೀ ಸತ್ಯದ ಪ್ರಕಾರಕ್ಕೆ ಸಿಲುಕಿದ್ದೇವೆ.

ನಮ್ಮ ಜನನಾಯಕರು ಸುಳ್ಳನ್ನೇ ಸತ್ಯವನ್ನಾಗಿ ಹೇಳುತ್ತಿರುವುದನ್ನೇ ನಂಬುತ್ತಿದ್ದೇವೆ. ಸುಳ್ಳಿನ ಮಾತಿನ ನಂಬುವ ಭರದಲ್ಲಿ ನಿಜ ತನ್ನ ನೆಲೆಯನ್ನೇ ಕಳೆದುಕೊಳ್ಳುತ್ತಿದೆ. ಸಣ್ಣ ವಿಚಾರವನ್ನೇ ರಾಜಕೀಯಕ್ಕೆ ಬಳಸುತ್ತಿರುವ ಚತುರಗಾರಿಕೆಯಲ್ಲಿ ವಾಸ್ತವವಾಗಿ ಸುಳ್ಳಿನ ಮಾತು ಗೆಲ್ಲುತ್ತಿಲ್ಲ. ಅದೆಲ್ಲಾ ತೋರಿಕೆ ಮಾತ್ರ ಎಂದು ತಿಳಿಸಿದರು. ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ  ವೇದಿಕೆಯ ಬನಶ್ರೀ ಅಧ್ಯಕ್ಷತೆ ವಹಿಸಿದ್ದರು. ತಿಪ್ಪೇಸ್ವಾಮಿ, ಭಾರತಿ, ಸೌಮ್ಯ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next