ಜೈಪುರ್: ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಉರುಳಿಸುವ ಸಂಚಿನ ಆರೋಪದಲ್ಲಿ ಇದೀಗ ದಾಖಲಾದ ಎಫ್ ಐಆರ್ ನಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಬಂಡಾಯ ಶಾಸಕ ಭನ್ವಾರ್ ಲಾಲ್ ಶರ್ಮಾ ಹೆಸರು ಇದ್ದಿರುವುದಾಗಿ ವರದಿ ತಿಳಿಸಿದೆ.
ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯ ಕಾಂಗ್ರೆಸ್ ಶಾಸಕರು ಬಿಜೆಪಿ ಜತೆ ಸೇರಿ ಸಂಚು ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಕೇಂದ್ರ ಸಚಿವರೊಬ್ಬರ ಪ್ರತಿನಿಧಿ ಮತ್ತು ಪೈಲಟ್ ಬಣದ ಶಾಸಕರೊಬ್ಬರ ನಡುವೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆಯನ್ನು ಗೆಹ್ಲೋಟ್ ಬಣ ಗುರುವಾರ ರಾತ್ರಿ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭನ್ವಾರ್ ಲಾಲ್ ಶರ್ಮಾ ಹಾಗೂ ಮತ್ತೊಬ್ಬ ಬಂಡಾಯ ಶಾಸಕ ವಿಶ್ವೇಂದ್ರ ಸಿಂಗ್ ಅವರನ್ನು ಅಮಾನತು ಮಾಡಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಆರೋಪದ ಪ್ರಕಾರ, ಈಗಾಗಲೇ ಹರಿದಾಡುತ್ತಿರುವ ಎರಡು ಆಡಿಯೋ ಕ್ಲಿಪ್ಲಿಂಗ್ಸ್ ಗಳಲ್ಲಿ ಭನ್ವಾರ್ ಲಾಲ್ ಶರ್ಮಾ ಬಿಜೆಪಿ ಮುಖಂಡರ ಜತೆ ಚರ್ಚೆ ನಡೆಸುತ್ತಿರುವುದು ಕೇಳಬಹುದು. ಇದರಲ್ಲಿ ಒಂದು ಧ್ವನಿ ಬಿಜೆಪಿ ಹಿರಿಯ ಮುಖಂಡ, ಕೇಂದ್ರ ಸಚಿವ ಶೇಖಾವತ್ ಅವರದ್ದು ಎಂದು ತಿಳಿಸಿದ್ದಾರೆ.
ಆಡಿಯೋ ಟೇಪ್ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆದರೆ ಕಾಂಗ್ರೆಸ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಡಿಯೋವನ್ನು ಪ್ಲೇ ಮಾಡಿಲ್ಲ. ಆಡಿಯೋದಲ್ಲಿರುವ ಸಂಭಾಷಣೆಯನ್ನು ಸುರ್ಜೇವಾಲಾ ಅವರು ವಿವರಿಸಿದ್ದರು ಎಂದು ವರದಿ ಹೇಳಿದೆ. ಆದರೆ ಆಡಿಯೋ ಟೇಪ್ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಾಗಿದೆ.