ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಬರೋಬ್ಬರಿ 20 ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆಗೆ ದಿನ ಸಮೀಪಿಸುತ್ತಿರುವಂತೆಯೇ ಪಕ್ಷದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಏತನ್ಮಧ್ಯೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಹೆಚ್ಚಿನ ಮಹತ್ವ ಪಡೆದುಕೊಳ್ಳತೊಡಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ದೇಶಾದ್ಯಂತ ಪಿಎಫ್ ಐ ಕಚೇರಿಗಳ ಮೇಲೆ ಎನ್ ಐಎ ದಾಳಿ: ರಾಹುಲ್ ಹೇಳಿದ್ದೇನು?
“ಒಬ್ಬ ವ್ಯಕ್ತಿ ಒಂದು ಹುದ್ದೆ” ಎಂಬ ನಿಯಮಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದು ರಾಹುಲ್ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿರುವ ಅಶೋಕ್ ಗೆಹ್ಲೋಟ್ ಎರಡು ಹುದ್ದೆ ದೊರೆಯುವುದಿಲ್ಲ ಎಂಬ ಪರೋಕ್ಷ ಸಂದೇಶ ರವಾನಿಸಿದಂತಾಗಿದೆ.
ಉದಯ್ ಪುರ್ ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ನಾವು ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷದ ನಿಯಮವನ್ನು ಎಲ್ಲರೂ ಪಾಲಿಸುತ್ತಾರೆ ಎಂಬುದು ನನ್ನ ನಿರೀಕ್ಷೆಯಾಗಿದೆ ಎಂದು ಕೇರಳದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ (71ವರ್ಷ) ಗಾಂಧಿ ಕುಟುಂಬದ ಆಯ್ಕೆಯಾಗಿದೆ ಎಂಬುದಾಗಿ ಊಹಿಸಲಾಗಿದೆ. ಆದರೆ ಗೆಹ್ಲೋಟ್ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಒಂದು ವೇಳೆ ತಾನು ಸಿಎಂ ಹುದ್ದೆ ಬಿಟ್ಟುಕೊಟ್ಟರೆ ತನ್ನ ವಿರುದ್ಧ ಬಂಡಾಯ ಸಾರಿದ್ದ ಸಚಿನ್ ಪೈಲಟ್ ಗೆ ಸಿಎಂ ಸ್ಥಾನ ಸಿಗಬಹುದು ಎಂಬ ಭಯ ಗೆಹ್ಲೋಟ್ ಅವರದ್ದಾಗಿದೆ ಎಂದು ವರದಿ ತಿಳಿಸಿದೆ.