Advertisement

ರೇಡಿಯೋ ಸಾರಂಗ್‌ನಲ್ಲಿ ನಿರೂಪಕಿಯಾದ ಮಂಗಳಮುಖಿ ಕಾಜಲ್‌ 

12:37 PM Nov 15, 2017 | |

ಮಹಾನಗರ: ಸಾಧಿಸುವ ಛಲವೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಬಹುದು ಎನ್ನುವುದಕ್ಕೆ ಇವರು ಉದಾಹರಣೆ. ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾಕರಿಗೆ ಅವಕಾಶ ಸಿಗುವುದೇ ಕಡಿಮೆ. ಅವಕಾಶವಿದ್ದರೂ, ಗುರುತಿಸಿಕೊಳ್ಳುವವರು ವಿರಳ. ಆದರೆ ಇಲ್ಲೊಬ್ಬರು ಸಾಧನೆಯ ಮೂಲಕವೇ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

Advertisement

ಉಡುಪಿಯಲ್ಲಿ ವಾಸವಾಗಿರುವ ಕಾಜಲ್‌ ಮೂಲತಃ ಮಂಡ್ಯ ಮೂಲದವರು. ಇವರಿಗೆ ಬಾಲ್ಯದಲ್ಲಿಯೇ ನಿರೂಪಕಿಯಾಗುವ ಆಸೆ ಇತ್ತು. ಇವರ ಆಸೆಗೆ ಕರಾವಳಿಯ ಪ್ರಸಿದ್ಧ ಸಮುದಾಯ ಬಾನುಲಿಯಾದ ‘ರೇಡಿಯೋ ಸಾರಂಗ್‌ 107.8’ ನೀರೆರೆದಿದೆ. ಮಂಗಳಮುಖಿಯೊಬ್ಬರು ನಿರೂಪಕಿಯಾಗಲು ಅವಕಾಶ ಕಲ್ಪಿಸಿದೆ.

ಕಾಜಲ್‌ ಅವರದ್ದು ಬಹುಮುಖ ವ್ಯಕ್ತಿತ್ವ. ನೃತ್ಯ, ಬ್ಯೂಟೀಷಿಯನ್‌, ರಂಗಭೂಮಿ ಕ್ಷೇತ್ರಗಳಲ್ಲಿ ಇವರಿಗೆ ಅತೀವ ಆಸಕ್ತಿ. ಪಿಯುಸಿವರೆಗೆ ಶಿಕ್ಷಣ ಪೂರೈಸಿರುವ ಕಾಜಲ್‌, ಈಗ ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಉಡುಪಿಯ ಸ್ಥಳೀಯ ವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಇವರು, ರಂಗಭೂಮಿ ಕ್ಷೇತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯಾಗುವ ಆಸೆಯನ್ನು ಕಾಜಲ್‌ ವ್ಯಕ್ತಪಡಿಸಿದ್ದರು. ರೇಡಿಯೋ ಸಾರಂಗ್‌ ಮುಖ್ಯಸ್ಥರು ಇವರಿಗೆ ಅವಕಾಶ ಒದಗಿಸಿದ್ದಾರೆ.

ಶುಭಮಂಗಳ ಕಾರ್ಯಕ್ರಮ
ಕಾಜಲ್‌ ಅವರಿಗೆ ನಿರೂಪಣೆಯ ತರಬೇತಿ ನೀಡಲಾಗಿದ್ದು, ನ. 21ರಿಂದ ಪ್ರತೀ ಮಂಗಳವಾರ ಸಂಜೆ 5ರಿಂದ 6ರ ನಡುವೆ ‘ಶುಭಮಂಗಳ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಕಾರ್ಯಕ್ರಮ ಲೈಂಗಿಕ ಅಲ್ಪಸಂಖ್ಯಾತರ ಜತೆ ಮಾತುಕತೆ, ಸಾಧಕರ ಪರಿಚಯ ಮುಂತಾದ ವಿಚಾರಗಳು ಒಳಗೊಳ್ಳಲಿವೆ.

ಪ್ರತಿಭೆಯನ್ನುಗುರುತಿಸಿದ್ದೇವೆ
ಮಂಗಳಮುಖಿಯರಿಗೂ ಸಮಾಜದಲ್ಲಿ ಗುರುತಿಸಿಕೊಳ್ಳುವ ಆಸೆ ಇರುತ್ತದೆ. ಇವರಲ್ಲಿಯೂ ಪ್ರತಿಭಾವಂತರಿದ್ದಾರೆ. ಆದರೆ ಸೂಕ್ತ ವೇದಿಕೆಯ ಕೊರತೆ ಇದೆ. ಕಾಜಲ್‌ ಅವರ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಿದ್ದೇವೆ.
ಡಾ| ಫಾ| ಮೆಲ್ವಿನ್‌
  ಪಿಂಟೋ, ಸಹಾಯಕ ನಿರ್ದೇಶಕರು, ರೇಡಿಯೋ ಸಾರಂಗ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next