Advertisement
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ಇಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಬಂದರೆ ಸುತ್ತಮುತ್ತಲ ರೈತರಿಗೆಲ್ಲಾ ಖುಷಿಯೋ ಖುಷಿ. ಕಾರಣ ಇಷ್ಟೇ, ಸುಮಾರು ಒಂದು ತಿಂಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯುವ ಜಾತ್ರೆಗೆ ಬರುವ ಭಕ್ತಾದಿಗಳು ಪುರಲ್ದ ಪ್ರಸಾದ ಎಂದೇ ಕರೆಯಲ್ಪಡುವ, ತುಳು ಭಾಷೆಯ ಬಚ್ಚಂಗಾಯಿ ಅಥವಾ ಕಲ್ಲಂಗಡಿ ಹಣ್ಣನ್ನು ಖರೀದಿಸದೇ ಬರಿಗೈಯಲ್ಲಿ ವಾಪಸ್ ತೆರಳುವುದಿಲ್ಲ.
ಕಲ್ಲಂಗಡಿಯ ವಿಶೇಷತೆ
ಇಲ್ಲಿ ಸಿಗುವ ಕಲ್ಲಂಗಡಿಯನ್ನು ಸಾವಯವ ಗೊಬ್ಬರದಿಂದ ಬೆಳೆಸುವುದರಿಂದ ಸಂಪೂರ್ಣ ರಾಸಾಯನಿಕ ಮುಕ್ತವಾಗಿರುತ್ತದೆ. ಯಾವುದೇ ಕಾರಣಕ್ಕೂ ಪೊಳಲಿ ಜಾತ್ರಾ ಮಹೋತ್ಸವದಲ್ಲಿ ಹೊರಗಿನ ಊರುಗಳಿಂದ ಆಗಮಿಸುವ ವ್ಯಾಪಾರಿಗಳಿಗೆ ಕಲ್ಲಂಗಡಿ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಇಲ್ಲಿಗೆ ಅವಶ್ಯವಿರುವಷ್ಟು ಕಲ್ಲಂಗಡಿ ಹಣ್ಣು ಮಳಲಿ, ಪೊಳಲಿ ಆಸುಪಾಸಿನ ಪ್ರದೇಶಗಳಲ್ಲಿ ರೈತರೇ ಬೆಳೆದು ತರುತ್ತಾರೆ. ಮಳಲಿ ಗ್ರಾಮವೊಂದರಲ್ಲೇ ಸುಮಾರು ಹತ್ತಾರು ಎಕರೆಗಳಿಗಿಂತಲೂ ಹೆಚ್ಚಿನ ಜಮೀನಿನಲ್ಲಿ ಜಾತ್ರೋತ್ಸವಕ್ಕಾಗಿಯೇ ಕಲ್ಲಂಗಡಿ ಬೆಳೆ ಇಟ್ಟಿರುತ್ತಾರೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಭತ್ತ ಕಟಾವು ಮಾಡುತ್ತಾರೆ. ಈ ಅವಧಿಯಲ್ಲಿ ಭೂಮಿಯಲ್ಲಿ ಹೆಚ್ಚು ತೇವಾಂಶವಿರುವುದರಿಂದ ಕಲ್ಲಂಗಡಿ ಬೆಳೆಯಲು ಸೂಕ್ತ. ಹೀಗಾಗಿ, ಗದ್ದೆಯಲ್ಲೇ ಪಾತಿಗಳನ್ನು ಮಾಡುತ್ತಾರೆ. ಮಕರ ಸಂಕ್ರಮಣ ಕಳೆದು ಹತ್ತನೇ ದಿನದಂದು ಪೊಳಲಿ ದೇವರಿಗೆ ವಿಶೇಷವಾದ ಪ್ರಾರ್ಥನೆ ಸಲ್ಲಿಸಿ, ಹೈಬ್ರಿಡ್ ಕಲ್ಲಂಗಡಿ ಹಣ್ಣಿನ ಬೀಜವನ್ನು ಈ ಪಾತಿಯಲ್ಲಿ ಬೀಜದಿಂದ ಬೀಜಕ್ಕೆ ಒಂದು ಅಡಿ ಅಂತರದಲ್ಲಿ ಬಿತ್ತನೆ ಮಾಡುತ್ತಾರೆ. ಈ ಬೆಳೆಗೆ ಸುಡುಮಣ್ಣು, ಹಟ್ಟಿಗೊಬ್ಬರವನ್ನು ಹಾಕಿ ನಾಲ್ಕು ದಿನಗಳಿಗೊಮ್ಮೆ ನೀರುಣಿಸುತ್ತಾರೆ. ಬೀಜವನ್ನು ಬಿತ್ತಿದ ನಂತರ ಕಟಾವು ಆಗುವವರೆಗೂ ಆ ಜಮೀನಿಗೆ ಪಾವಿತ್ರ್ಯತೆಯ ದೃಷ್ಟಿಯಿಂದ ಪಾದರಕ್ಷೆಯನ್ನು ಹಾಕಿಕೊಂಡು ಹೋಗುವುದಿಲ್ಲ.
Related Articles
ಈ ಹಿಂದೆ, ಜಾತ್ರೆಗೆ ಆಗಮಿಸುತ್ತಿದ್ದ ಭಕ್ತಾದಿಗಳು ಕಲ್ಲಂಗಡಿ ತಿಂದು ಬಿಸಾಕಿದ ಬೀಜವನ್ನು, ಜಾತ್ರೆ ಮುಗಿದ ನಂತರ ಗುಡಿಸಿ ತೆಗೆದಿಡುತ್ತಿದ್ದರು. ಮರುವರ್ಷ ಅದೇ ಬೀಜವನ್ನು ಬಿತ್ತನೆಗೆ ಬಳಸುತ್ತಿದ್ದರಂತೆ. ಈಗ ಆಪದ್ಧತಿ ಇಲ್ಲ. ಹೀಗೆ ಬೆಳೆದ ಕಲ್ಲಂಗಡಿಯನ್ನು ಜಾತ್ರೆಯ ಒಂದನೇ ಚೆಂಡಿನ ದಿನ ಬೆಳಗ್ಗೆ, ಕಟಾವಿಗೂ ಮೊದಲು ಒಂದು ಕಲ್ಲಂಗಡಿ ಹಣ್ಣನ್ನು ದೇವಸ್ಥಾನಕ್ಕೆ ಸಮರ್ಪಿಸುತ್ತಾರೆ. ಆ ನಂತರ ಉಳಿದ ಕಲ್ಲಂಗಡಿ ಕಟಾವು ಮಾಡಿ ವಾಹನದಲ್ಲಿ ಪೊಳಲಿ ದೇವಸ್ಥಾನಕ್ಕೆ ತರುತ್ತಾರೆ. ಹೀಗೆ ಜಾತ್ರೆಗೆ ತರುವಲ್ಲಿಯವರೆಗೂ ಹಣ್ಣುಗಳನ್ನು ಮಣ್ಣಿನ ಮಡಕೆಯಷ್ಟೇ ಜಾಗರೂಕವಾಗಿ ನೋಡಿಕೊಳ್ಳುತ್ತಾರೆ.
Advertisement
ಪೊಳಲಿ ಜಾತ್ರೆಯಲ್ಲಿ ಮಾರಾಟವಾಗುವ ಸಾಮಾನ್ಯ ಗಾತ್ರದ ಕಲ್ಲಂಗಡಿ ಹಣ್ಣಿಗೆ 30 ರೂಪಾಯಿಯಿಂದ 50ರೂಪಾಯಿ ದರವಿದೆ. ದೊಡ್ಡ ಗಾತ್ರದ ಕಲ್ಲಂಗಡಿ ಹಣ್ಣಿಗೆ 200 ರೂಪಾಯಿಯಿಂದ 300 ರೂ. ಪೊಳಲಿ ಜಾತ್ರೊತ್ಸವದ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣು ವ್ಯಾಪಾರಿಗಳಿಗಾಗಿ ನಿರ್ದಿಷ್ಟವಾದ ಸ್ಥಳವನ್ನು ದೇವಸ್ಥಾನದ ಆಡಳಿತ ಮಂಡಳಿಯು ಗುರುತು ಹಾಕಿಕೊಡುತ್ತದೆ. ಅಲ್ಲಿ ತಂದು ಮಾರಾಟ ಮಾಡುತ್ತಾರೆ.
— ಸಂತೋಷ್ ರಾವ್ ಪೆರ್ಮುಡ