Advertisement

ಪೆರ್ಲ-ಬೀಯಪಾದೆಯಲ್ಲಿ ರಸ್ತೆ ಸುರಕ್ಷತೆ ಮರೀಚಿಕೆ

04:42 AM Jan 05, 2019 | |

ಪುಂಜಾಲಕಟ್ಟೆ : ನೇತ್ರಾವತಿ ನದಿಗೆ ಶಂಭೂರಿನಲ್ಲಿ ಎಎಂಆರ್‌ ಸಂಸ್ಥೆಯಿಂದ ನಿರ್ಮಿಸಲಾದ ಅಣೆಕಟ್ಟಿನಿಂದ ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೆರ್ಲ – ಬೀಯಪಾದೆಯಲ್ಲಿ ಹಲವು ಸಮಸ್ಯೆಗಳು ಉಂಟಾಗಿದ್ದು, ರಸ್ತೆ ಮೊದಲಾದ ಮೂಲ ಸೌಲಭ್ಯ ಸಹಿತ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಿದೆ.

Advertisement

ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೂಪಾಡಿಕಟ್ಟೆಯಿಂದ ಸರಪಾಡಿಯನ್ನು ಸಂಪರ್ಕಿಸುವ ರಸ್ತೆ ನೇತ್ರಾವತಿ ನದಿ ಬದಿ ಹಾದು ಹೋಗಿದೆ. ಆದರೆ ಅಣೆಕಟ್ಟಿ ನಿಂದಾಗಿ ನದಿ ನೀರು ಏರಿಕೆ ಯಾಗುತ್ತಿದ್ದು, ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ನದಿ ನೀರು ಏರಿಕೆ ಯಾದಲ್ಲಿ ರಸ್ತೆಗೆ ಸಮರ್ಪಕವಾಗಿ ತಡೆ ಗೋಡೆ ನಿರ್ಮಿಸದಿರುವುದರಿಂದ ಗ್ರಾಮಸ್ಥರಿಗೆ ಸಂಚಾರಕ್ಕೆ ತೊಡಕಾಗಿದೆ.

ಬಗಲಲ್ಲಿ ಅಪಾಯ
ಎಎಂಆರ್‌ ಪವರ್‌ ಪ್ರಾಜೆಕ್ಟ್ ಸಂಸ್ಥೆಯಿಂದ ರಸ್ತೆ ಬದಿಗೆ ರಸ್ತೆಯೆತ್ತ ರಕ್ಕೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದ್ದು, ಅದರ ಮೇಲೆ ತಡೆ ಬೇಲಿ ನಿರ್ಮಿಸದೇ ಇರುವುದರಿಂದ ಗ್ರಾಮಸ್ಥರ ಪಾಲಿಗೆ ಬಗಲಲ್ಲಿ ಅಪಾಯ ಕಟ್ಟಿಕೊಂಡಂತಾಗಿದೆ. ಎತ್ತರವಿಲ್ಲದ ತಡೆ ಗೋಡೆಯಿಂದಾಗಿ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗುತ್ತಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಸಾರ್ವಜನಿಕರಿಂದ ಪ್ರತಿಭಟನೆ
ಪೆರ್ಲ ಬೀಯಪಾದೆಯಲ್ಲಿ ರಸ್ತೆ ಬದಿ ಯವರೆಗೆ ನೀರು ತುಂಬುವುದರಿಂದ ಸಂಚಾರ ಅಪಾಯಕಾರಿ ಎಂದು ಸಾರ್ವಜನಿಕರು ಆಗಾಗ ಪ್ರತಿಭಟನೆ ನಡೆಸುತ್ತಿದ್ದರು. ಬೀಯಪಾದೆಯಿಂದ ಹಾದು ಹೋಗುವ ಈ ರಸ್ತೆ ಸರಪಾಡಿ ಮೂಲಕ ಉಪ್ಪಿನಂಗಡಿ ಯನ್ನು ಸಂಪರ್ಕಿಸುತ್ತದೆ. ಇಲ್ಲಿ ಅಂಗನವಾಡಿ ಕೇಂದ್ರ, ಸರಕಾರಿ ಹಿ.ಪ್ರಾ. ಶಾಲೆ, ಮಸೀದಿ ಇದ್ದು, ಇಲ್ಲಿಗೆ ಬರುವ ಮಕ್ಕಳು ಎತ್ತರವಿಲ್ಲದ ತಡೆಗೋಡೆಯ ಮೇಲೆ ನಡೆದುಕೊಂಡು ಹೋಗುವುದರಿಂದ ಅಪಾಯ ಸಾಧ್ಯತೆ ಯಿದೆ. ನಿತ್ಯ ಹಲವಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಚಾಲಕ ಸ್ವಲ್ಪ ಎಡವಿದರೂ ವಾಹನ ಸಹಿತ ಪ್ರಯಾಣಿಕರು ನದಿ ಪಾಲಾಗುವ ಭೀತಿಯಿದೆ.

ಅಲ್ಲದೆ ಕೇವಲ ಒಂದು ಭಾಗಕ್ಕೆ ಮಾತ್ರ ಎಎಂಆರ್‌ ಪವರ್‌ ಪ್ರಾಜೆಕ್ಟ್ ಸಂಸ್ಥೆ ತಡೆ ಗೋಡೆ ನಿರ್ಮಿಸಿದೆ. ಇನ್ನೊಂದು ಭಾಗದಲ್ಲಿ ಕಲ್ಲು ಮಣ್ಣನ್ನು ತುಂಬಲಾಗಿದೆ. ಮಳೆಗಾಲ ದಲ್ಲಿ ನೀರಿನ ಅಲೆಗಳು ಬಡಿಯುವುದರಿಂದ ಮಣ್ಣಿನ ಸವೆತ ಉಂಟಾಗುತ್ತಿದೆ.

Advertisement

ಹಲವಾರು ಬಾರಿ ಮನವಿ
ಪೆರ್ಲ-ಬೀಯಪಾದೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾ.ಪಂ. ವತಿಯಿಂದ ಜನಪ್ರತಿನಿಧಿಗಳಿಗೆ, ಎಎಂಆರ್‌ ಪವರ್‌ ಪ್ರಾಜೆಕ್ಟ್ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿವೆ.
 - ಲೀಲಾವತಿ, ಗ್ರಾ.ಪಂ. ಅಧ್ಯಕ್ಷರು, ಸರಪಾಡಿ

ಭರವಸೆ ಮಾತ್ರ ನೀಡಲಾಗುತ್ತಿದೆ
ಕಳೆದ 8 ವರ್ಷಗಳಿಂದ ಪೆರ್ಲ-ಬೀಯಪಾದೆ ರಸ್ತೆ ಅಭಿವೃದ್ಧಿ ಬಗ್ಗೆ ಎಎಂಆರ್‌ ಅಣೆಕಟ್ಟು ಸಂಸ್ಥೆಯ ಅಧಿಕಾರಿಗಳಲ್ಲಿ ವಿನಂತಿಸಲಾಗಿದೆ. ಭರವಸೆ ಮಾತ್ರ ನೀಡಲಾಗುತ್ತಿದೆ. ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಧನಂಜಯ ಎನ್‌. ಶೆಟ್ಟಿ,
  ಗ್ರಾ.ಪಂ. ಸದಸ್ಯರು, ಸರಪಾಡಿ

ನಾಳೆ ಶಾಸಕರಿಂದ ಪರಿಶೀಲನೆ 
ಬಂಟ್ವಾಳ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಅವರಲ್ಲಿ ಈ ಸಮಸ್ಯೆ ಬಗ್ಗೆ ಮನವಿ ಮಾಡಲಾಗಿದ್ದು, ಜ. 6ರಂದು ಬೆಳಗ್ಗೆ 10ಕ್ಕೆ ಪೆರ್ಲ-ಬೀಯಪಾದೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿರುವರು.

ಸಾರ್ವಜನಿಕರ ಆಗ್ರಹ 
ಬೀಯಪಾದೆಗೆ ಸರ್ವಋತು ರಸ್ತೆ ನಿರ್ಮಾಣ, ತಡೆಗೋಡೆಯನ್ನು ಎತ್ತರಕ್ಕೇರಿಸಬೇಕು/ಅಪಾಯ ಸಂಭವಿಸದಂತೆ ಸುರಕ್ಷ ಬೇಲಿ ಹಾಕಬೇಕು. ಇನ್ನೊಂದು ಭಾಗಕ್ಕೂ ತಡೆಗೋಡೆಯನ್ನು ನಿರ್ಮಿಸಿಕೊಡಬೇಕು ಎನ್ನುವುದು ಜನತೆಯ ಆಗ್ರಹವಾಗಿದೆ.

ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next