ಬೆಂಗಳೂರು : ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮತದಾರರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ತಮಗೆ ಕ್ರಿಯಾತ್ಮಕ ಸರಕಾರ ಬೇಕೇ ಅಥವಾ ಲೋಪಯುಕ್ತ ಸರಕಾರ ಬೇಕೇ ಎಂಬುದನ್ನು ತೀರ್ಮಾನಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೋದಿ ಅವರು ಮೈಸೂರು ರೈಲ್ವೇ ಸ್ಟೇಶನ್‌ನಲ್ಲಿ ಪ್ಯಾಲೇಸ್ ಕ್ವೀನ್ ಹಮ್‌ಸಫರ್ ಎಕ್ಸ್‌ಪ್ರೆಸ್ ಟ್ರೈನ್‌ಗೆ ಹಸಿರು ನಿಶಾನೆ ತೋರಿಸಿದರು. ಈ ರೈಲು ಮೈಸೂರಿನಿಂದ ರಾಜಸ್ಥಾನದ ಉದಯಪುರಕ್ಕೆ ಹೋಗುತ್ತದೆ. ಅಂತೆಯೇ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ ನೀಡುತ್ತದೆ ಎಂದು ಮೋದಿ ಹೇಳಿದರು.
ಕೇಂದ್ರದಲ್ಲಿನ ಬಿಜೆಪಿ ಸರಕಾರ ಯಾರೂ ಕಲ್ಪಿಸದಂತಹ ರೀತಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿಯ ಕೆಲಸ ಮಾಡುತ್ತಿದೆ ಎಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಮೈಸೂರು ಪೇಟ ತೊಟ್ಟು ಜನಾಕರ್ಷಣೆಯ ಕೇಂದ್ರವಾದರಲ್ಲದೆ ಕನ್ನಡದಲ್ಲೇ ಭಾಷಣ ಆರಂಭಿಸಿ ನೆರೆದ ಸಾಗರೋಪಾದಿಯ ಸಭಿಕರನ್ನು ನಿಬ್ಬೆರಗು ಗೊಳಿಸಿದರು. ಮೈಸೂರಿನಲ್ಲಿ ವಸ್ತುತಃ ಮೋದಿ ಮೇನಿಯಾವನ್ನೇ ಅವರು ಉಂಟು ಮಾಡಿದರು.
ಮೈಸೂರು ಅರಸರು, ಸರ್ ಎಂ ವಿಶ್ವೇಶರಯ್ಯ, ಕುವೆಂಪು, ಬಾಲಗಂಗಾಧರನಾಥ್ ಅವರನ್ನು ನೆನೆದ ಮೋದಿ ಮೈಸೂರ್ ಪಾಕ್, ಮೈಸೂರು ಮಲ್ಲಿಗೆ ಜಗತ್ ಪ್ರಸಿದ್ಧ ಎಂದು ಹೇಳಿದರಲ್ಲದೆ ತಮ್ಮ ಭಾಷಣದ ಆರಂಭದಲ್ಲಿ ತಾಯಿ ಚಾಮುಂಡೇಶ್ವರಿಗೆ ನನ್ನ ಪ್ರಮಾಣಗಳು ಎಂದು ಭಕ್ತಿ ಪೂರ್ವಕ ನುಡಿದರು.
2022ರಲ್ಲಿ ಭಾರತ 75 ವರ್ಷಗಳ ಸ್ವಾತಂತ್ರ್ಯವನ್ನು ಪ್ರವೇಶಿಸುತ್ತದೆ. ಆ ಹೊತ್ತಿಗೆ ನಾವೆಲ್ಲರೂ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಭವ್ಯ ಭಾರತದ ಕನಸನ್ನು ನನಸು ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಅವರು ಎರಡು ಮುಖ್ಯ ಯೋಜನೆಗಳನ್ನು ಉಲ್ಲೇಖೀಸಿದರು. ಮೊದಲನೇಯದ 6,400 ಕೋಟಿ ರೂ. ವೆಚ್ಚದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಮತ್ತು ಎರಡನೇಯದ್ದು 800 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಮೈಸೂರಿನಲ್ಲಿ ವಿಶ್ವ ಮಟ್ಟದ ಸ್ಯಾಟಲೈಟ್ ಸ್ಟೇಶನ್ ಸ್ಥಾಪನೆ.