Advertisement

ಮುದ್ದೇನಹಳ್ಳಿ ಸತ್ಯಸಾಯಿಯಲ್ಲಿ ಕ್ರೀಡೆ, ಕಲೋತ್ಸವ

08:44 PM Jan 13, 2020 | Lakshmi GovindaRaj |

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಗ್ರಾಮದ ಸಮಾಗಮ್‌ ಕ್ರೀಡಾಂಗಣದಲ್ಲಿ ಜ.15 ರಿಂದ 19ರ ವರೆಗೂ 5 ದಿನಗಳ ವಾರ್ಷಿಕ ಕ್ರೀಡಾಕೂಟ, ಕಲೋತ್ಸವ ನಡೆಯಲಿದ್ದು ರಾಜ್ಯದ ವಿವಿಧ ಜಿಲ್ಲೆಗಳ ಶ್ರೀ ಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆಗಳ ಒಟ್ಟು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆಂದು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಕುಲಪತಿ ಬಿ.ಎನ್‌.ನರಸಿಂಹಮೂರ್ತಿ ತಿಳಿಸಿದರು.

Advertisement

ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ವಾರ್ಷಿಕ ಕ್ರೀಡಾಕೂಟದ ಸಿದ್ಧತೆ ಹಾಗೂ ವಿದ್ಯಾರ್ಥಿಗಳ ಪೂರ್ವ ತಯಾರಿ ತಾಲೀಮು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜ.15 ರಂದು ವಾರ್ಷಿಕ ಕ್ರೀಡಾ ಹಾಗೂ ಕಲೋತ್ಸವಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಚಾಲನೆ ನೀಡಲಿದ್ದಾರೆಂದರು.

ಶಿಕ್ಷಣ ಪ್ರಣಾಳಿಕೆ ಇತಿಹಾಸದಲ್ಲಿಯೇ ವಿಶಿಷ್ಟ ಛಾಪು ಮೂಡಿಸಿರುವ ಸತ್ಯಸಾಯಿ ಸಮೂಹ ಸಂಸ್ಥೆ, ಭಗವಾನ್‌ ಬಾಬಾ ಅವರ ಸಂದೇಶದಂತೆ ಮಾನವ ಜನ್ಮ ಪಡೆದ ಪ್ರತಿಯೊಬ್ಬರಲ್ಲಿ ಅದ್ಭುತ ಶಕ್ತಿ ಇರುತ್ತದೆ. ಅದಕ್ಕೆ ಶಿಕ್ಷಣವೆಂಬ ದಿವ್ಯ ಪ್ರಕಾಶ ಬೀರಿದಾಗ ಮಕ್ಕಳಲಿರುವ ಪ್ರತಿಭೆ ಆನಾವರಣಗೊಳ್ಳುತ್ತದೆ. ಬಾಬಾ ಪ್ರಕಾರ ಶಿಕ್ಷಣ ಜೀವನೋಪಾಯಕ್ಕಾಗಿ ಮಾತ್ರವಲ್ಲದೇ ಜೀವನದ ಪರ ಗುರಿ ಸಾಧಿಸುವುದಕ್ಕಾಗಿ ಶಿಕ್ಷಣ ಅಗತ್ಯವಾಗಿದೆ ಎಂದು ತಿಳಿಸಿದರು.

ಬೌದ್ಧಿಕ ಶಿಕ್ಷಣದ ಜತೆ ಮಕ್ಕಳು ಸಾಂಸ್ಕೃತಿಕವಾಗಿ ಮತ್ತು ದೈಹಿಕವಾಗಿ ಸಮಗ್ರ ವಿಕಾಸ ಹೊಂದಿದರೆ ಮಾತ್ರ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಈ ದಿಸೆಯಲ್ಲಿ ಸತ್ಯಸಾಯಿ ಲೋಕಸೇವಾ ಸಾಮೂಹ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರೀಡಾ ಮತ್ತು ಕಲಾ ಉತ್ಸವ ಆಯೋಜಿಸಲಾಗಿದೆ ಎಂದರು.

ಸತ್ಯಸಾಯಿ ಗ್ರಾಮದ ಸಮಾಗಮ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟವನ್ನು ಜ.15 ರಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ್‌ ಕೌಶಿಕ್‌, ಸಂಸದ ಬಿ.ಎನ್‌.ಬಚ್ಚೇಗೌಡ, ಶಾಸಕರಾದ ಡಾ.ಕೆ.ಸುಧಾಕರ್‌, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತಿತರ ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಶ್ರೀಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ.ನಾರಾಯಣರಾವ್‌, ಮಾಧ್ಯಮ ಸಮಿತಿ ಸಂಚಾಲಕರಾದ ಪಿ.ವಿ.ಗೋವಿಂದ ರೆಡ್ಡಿ, ಮಾಧ್ಯಮ ಸಮಿತಿ ಸಮನ್ವಯಕಾರರಾದ ಕಾನ.ಸುಂದರ ಭಟ್‌, ಅಡ್ಕಸ್ಥಳ ಕಬೀರ್‌ ಮತ್ತಿತರರು ಇದ್ದರು.

ರಾಜ್ಯದ 17 ಜಿಲ್ಲೆಗಳ ಮಕ್ಕಳು ಭಾಗಿ: ಕರ್ನಾಟಕ ರಾಜ್ಯದ 17 ಜಿಲ್ಲೆಗಳ ಮತ್ತು ತೆಲಂಗಾಣ ರಾಜ್ಯದ ಹೈದ್ರಾಬಾದಿನ ಕೊಂಡಪಾಕದಲ್ಲಿ ಅಧ್ಯಯನ ಮಾಡುತ್ತಿರುವ 4000 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಉತ್ಸವದಲ್ಲಿ ಭಾಗಿಗಳಾಗುತ್ತಿದ್ದಾರೆ.

ವಿಶೇಷವಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಕಲಿಕೆಯೊಂದಿಗೆ ರೂಢಿಸಿಕೊಂಡ ವಿಶಿಷ್ಟ ಪ್ರತಿಭೆಗಳನ್ನು ಪಥ ಸಂಚಲನ, ಯೋಗ ಭಂಗಿಗಳು, ಜಾನಪದ ಕಲೆ, ವಿವಿಧ ನೃತ್ಯಗಳು, ಕರಾಟೆ ಪ್ರದರ್ಶನ, ಕಲರಿಪಟ್‌ ಯುದ್ಧಕಲೆ ಪ್ರಾತಿನಿಧಿಕ ಪ್ರದರ್ಶನ, ಜಾರುಗಾಲಿ ಚಮತ್ಕಾರ, ವಾಯುಕ್ರೀಡೆ, ಚಮತ್ಕಾರಿಕ ವಿನ್ಯಾಸ ರಚನೆ, ಕುದುರೆ ಸವಾರಿ,

ಏಕಚಕ್ರ ಸೈಕಲ್‌ ಸವಾರಿ, ಮೋಟಾರ್‌ ಸೈಕಲ್‌ ಸಾಹಸ ಸವಾರಿ, ಬಗೆಬಗೆಯ ಅಂಗ ಸಾಧನೆ, ಕ್ರಿಕೆಟ್‌ ಆಟದ ಚಮತ್ಕಾರಿಕ ತಂತ್ರ, ಭೂ ಕೇಂದ್ರಿತ ಬಹುರೂಪಿ ಕಸರತ್ತುಗಳು ಮೊದಲಾದ ಪ್ರದರ್ಶನಗಳ ಮೂಲಕ ಅನಾವರಣಗೊಳಿಸಲಿದ್ದಾರೆಂದು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಕುಲಪತಿ ಬಿ.ಎನ್‌.ನರಸಿಂಹಮೂರ್ತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next