Advertisement

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

12:28 AM Nov 27, 2021 | Team Udayavani |

ಬ್ರುಸೆಲ್ಸ್‌/ಹೊಸದಿಲ್ಲಿ: ದಕ್ಷಿಣ ಆಫ್ರಿಕಾ, ಸಿಂಗಾಪುರ ಗಳಲ್ಲಿ ಪತ್ತೆಯಾಗಿರುವ ಕೋವಿಡ್‌ ಹೊಸ ರೂಪಾಂತರಿ ಬಿ.1.1.529 (ಬೋಟ್ಸ್‌ವಾನಾ ರೂಪಾಂತರಿ) ಮತ್ತೆ ಐರೋಪ್ಯ ಒಕ್ಕೂಟದ ಬೆಲ್ಜಿಯಂ, ಇಸ್ರೇಲ್‌ನಲ್ಲಿ ಪತ್ತೆಯಾಗಿದೆ.

Advertisement

ಹೀಗಾಗಿ ಕೆಲವು ದೇಶಗಳಲ್ಲಿ ಕಟ್ಟೆಚ್ಚರದ ಸ್ಥಿತಿ ಘೋಷಣೆ ಮಾಡಲಾಗಿದೆ. ಜತೆಗೆ ಆಫ್ರಿಕಾ ಖಂಡದ ರಾಷ್ಟ್ರಗಳಿಂದ ವಿಮಾನಯಾನಕ್ಕೆ ನಿಷೇಧ, ಗಡಿಗಳಲ್ಲಿ ಮತ್ತೆ ಬಿಗಿ ತಪಾಸಣೆ ಕ್ರಮವನ್ನು ಶುರು ಮಾಡಿವೆ.

ಫ್ರಾನ್ಸ್‌ 48 ಗಂಟೆಗಳ ಕಾಲ ಆಫ್ರಿಕಾ ಖಂಡದಿಂದ ವಿಮಾಯಾನ ನಿಷೇಧಿಸಿ ಆದೇಶ ಹೊರಡಿಸಿದೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳು, ಸಿಂಗಾಪುರ, ಯುನೈಟೆಡ್‌ ಕಿಂಗ್‌ಡಮ್‌, ಜಪಾನ್‌ ಸರಕಾರಗಳು ಆಫ್ರಿಕಾ ಖಂಡದ ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ, ಬೋಟ್ಸ್‌ವಾನಾ, ಲೆಸೆತೋ ಮತ್ತು ಎಸ್ವೆತಿನಿಗಳಿಂದ ವಿಮಾನ ಹಾರಾಟ ನಿಷೇಧಿಸಿವೆ.

ಇಸ್ರೇಲ್‌ನಲ್ಲಿ ಬೋಟ್ಸ್‌ವಾನಾ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆಗಳು ಇವೆ ಎಂದು ಪ್ರಧಾನಿ ನೆಫಾಲಿ ಬೆನ್ನೆಟ್‌ ಹೇಳಿದ್ದಾರೆ.

ನಾಲ್ಕನೇ ಅಲೆ: ಜರ್ಮನಿಯಲ್ಲಿ ಹೊಸ ಮೈತ್ರಿಕೂಟ ಮುಂದಿನ ತಿಂಗಳು ಅಧಿಕಾರಕ್ಕೆ ಬರುತ್ತಿರುವಂತೆಯೇ ಸೋಂಕಿನ 4ನೇ ಅಲೆ ಕಾಣಿಸಿಕೊಳ್ಳಲಾರಂಭಿಸಿದೆ. ಶುಕ್ರವಾರ ಒಂದೇ ದಿನ ಪಶ್ಚಿಮ ಯುರೋಪ್‌ನಲ್ಲಿ 76 ಸಾವಿರ ಕೇಸುಗಳು ದೃಢಪಟ್ಟಿವೆ.

Advertisement

ಈಗಲೇ ಹೇಳಲಾಗದು: ಹೊಸ ರೂಪಾಂತರಿ ಎಷ್ಟು ಅಪಾಯಕಾರಿ ಎಂಬ ಬಗ್ಗೆ ತತ್‌ಕ್ಷಣಕ್ಕೆ ಏನನ್ನೂ ಹೇಳ ಲಾಗದು. ಅದಕ್ಕೆ ಇನ್ನೂ ಕೆಲವು ವಾರಗಳು ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸಕ್ರಿಯ ಸೋಂಕು ಏರಿಕೆ: ದೇಶದಲ್ಲಿ ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 10,549 ಹೊಸ ಕೇಸ್‌ಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 488 ಮಂದಿ ಅಸುನೀಗಿದ್ದಾರೆ.

ಇದನ್ನೂ ಓದಿ:ನಮ್ಮ ಸಂವಿಧಾನ ಶ್ರೇಷ್ಠವಾದುದು: ಸಭಾಪತಿ, ಸ್ಪೀಕರ್‌ ಪ್ರತಿಪಾದನೆ

ಈ ಪೈಕಿ ಕೇರಳದಲ್ಲಿಯೇ 384 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕು ಸಂಖ್ಯೆ 1,10,133ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.33 ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಡಿ.15ರಂದು ಅಂತಾರಾಷ್ಟ್ರೀಯ ವಿಮಾನಯಾನ ಆರಂಭ
ಜಗತ್ತಿನ ಕೆಲವು ಭಾಗಗಳಲ್ಲಿ ಬೋಟ್ಸ್‌ವಾನಾ ರೂಪಾಂ­ತರಿ ಸೋಂಕು ಪತ್ತೆಯಾಗಿರುವಂತೆಯೇ ಡಿ.15ರಂದು ಅಂತಾರಾಷ್ಟ್ರೀಯ ವಿಮಾನಯಾನ ಶುರು ಮಾಡಲು ಕೇಂದ್ರ ಸರಕಾರ ಮುಂದಾಗಿದೆ.

ಸದ್ಯ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೂಡ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಲು ನಿರ್ಧರಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಸಚಿವಾಲಯದಿಂದ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿದ 14 ದೇಶಗಳನ್ನು ಹೊರತುಪಡಿಸಿ ವಿಮಾನಯಾನ ಶುರುವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಯು.ಕೆ, ಸಿಂಗಾಪುರ, ಚೀನ, ಬ್ರೆಜಿಲ್‌, ಬಾಂಗ್ಲಾದೇಶ, ಮಾರಿಷಸ್‌, ಜಿಂಬಾಬ್ವೆ, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಇಸ್ರೇಲ್‌ ಮತ್ತು ಹಾಂಕಾಂಗ್‌ಗಳಿಗೆ ವಿಮಾನಯಾನ ಇರುವುದಿಲ್ಲ.

ಭಾರತದಲ್ಲಿ ಮೂರನೇ ಅಲೆ ಇಲ್ಲ: ಗುಲೇರಿಯಾ
“ಭಾರತದಲ್ಲಿ ಈ ಹಿಂದೆ ಬಂದುಹೋಗಿರುವ ಕೊರೊನಾ ಅಲೆಗಳಿಗಿಂತ ಹೆಚ್ಚು ಮಾರಕವಾಗಿರುವ ಕೊರೊನಾ ಮೂರನೇ ಅಲೆಯು ದೇಶಕ್ಕೆ ಅಪ್ಪಳಿಸುವ ಭೀತಿ ಸದ್ಯಕ್ಕಿಲ್ಲ’ ಎಂದು ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ್‌) ನಿರ್ದೇಶಕ ಡಾ| ರಣದೀಪ್‌ ಗುಲೇರಿಯಾ ಅಭಯ ನೀಡಿದ್ದಾರೆ.

ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಮತ್ತು 2‌ನೇ ಕೊರೊನಾ ಅಲೆ ಅಪ್ಪಳಿಸಿದ ರೀತಿಯಲ್ಲಿ ಮೂರನೇ ಅಲೆ ಬರುವುದಿಲ್ಲ. ನಮ್ಮಲ್ಲಿ ಅನೇಕರು ಲಸಿಕೆ ಪಡೆದುಕೊಂಡಿದ್ದಾರೆ. ಅವರೆಲ್ಲರೂ ಸುರಕ್ಷಿತವಾ ಗಿರಲಿದ್ದಾರೆ. ಸದ್ಯಕ್ಕೆ ಲಸಿಕೆಯ 3ನೇ ಡೋಸ್‌ ಲಸಿಕೆಯ ಅಗತ್ಯತೆಯೂ ಇಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next