ಭೋಪಾಲ್: ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿರುವ ದೇಶದ ಅತಿ ದೊಡ್ಡ ಹೈಟೆಕ್ “ಹನಿಟ್ರ್ಯಾಪ್’ ದಂಧೆಯ ಕರಾಳತೆ, ಆ ರಾಜ್ಯದ ಮಾಜಿ ರಾಜ್ಯಪಾಲರುಗಳು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸರಕಾರಿ ಅಧಿಕಾರಿಗಳ ಕೊರಳಿಗೆ ಸುತ್ತಿಕೊಳ್ಳಲಾರಂಭಿಸಿದೆ. ಪ್ರಕರಣದ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಇಂಥ ಅನೇಕ ಗಣ್ಯ ವ್ಯಕ್ತಿಗಳನ್ನು ವಿಚಾರಣೆಗೊಳ ಪಡಿಸಲಾಗುತ್ತಿದೆ.
ತನಿಖೆ ಕೈಗೆತ್ತಿಕೊಂಡಿದ್ದ ಮಧ್ಯಪ್ರದೇಶ ಪೊಲೀಸರು, ಶ್ವೇತಾ ಜೈನ್ (39), ಬರ್ಖಾ ಸೋನಿ (35), ಆರ್ತಿ ದಯಾಲ್ (34) ಹಾಗೂ ಮತ್ತೂಬ್ಬ ಕಾಲೇಜು ವಿದ್ಯಾರ್ಥಿನಿಯನ್ನು (18) ಬಂಧಿಸಿದ್ದರು. ಇಡೀ ದಂಧೆಯ ಸೂತ್ರಧಾರಿಗಳು ಇವರೇ ಆಗಿದ್ದು, ಇವರು ತಮ್ಮ ಈ ದಂಧೆಯಲ್ಲಿ ಕೆಲವು ಲೈಂಗಿಕ ಕಾರ್ಯಕರ್ತೆಯರನ್ನು ಹಾಗೂ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಕೊಳ್ಳುತ್ತಿದ್ದರು ಎನ್ನಲಾಗಿದೆ.
ಶ್ರೀಮಂತರೇ ಇವರ ಟಾರ್ಗೆಟ್: ಬಂಧಿತ ಐವರು ಮಹಿಳೆಯರು ಹಾಗೂ ಇನ್ನಿತರರಿಂದ ವಶಪಡಿಸಿಕೊಳ್ಳಲಾದ ಲ್ಯಾಪ್‌ಟಾಪ್‌ಗ್ಳು, ಮೊಬೈಲ್‌ಗಳಲ್ಲಿ, ಮಧ್ಯಪ್ರದೇಶ ರಾಜ್ಯದ ರಾಜ ಕಾರಣಿಗಳ (ಕಾಂಗ್ರೆಸ್ ಮತ್ತು ಬಿಜೆಪಿ), ಉದ್ಯಮಿಗಳ, ಶ್ರೀಮಂತರ ಹಾಗೂ ವಿವಿಧ ಸರಕಾರಿ ಅಧಿಕಾರಿಗಳ ಸುಮಾರು 1,000ಕ್ಕೂ ಹೆಚ್ಚು ನಗ್ನ ಅಥವಾ ಅಶ್ಲೀಲ ವೀಡಿಯೋ ಕ್ಲಿಪ್‌ಗ್ಳು ಸಿಕ್ಕಿವೆ ಎಂದು ತನಿಖಾ ತಂಡದಲ್ಲಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಕೀಯ ನಂಟು: ಬಂಧಿತರಲ್ಲೊಬ್ಬರಾದ ಬರ್ಖಾ ಸೋನಿ ಎಂಬವರು ಮಧ್ಯಪ್ರದೇಶ ಕಾಂಗ್ರೆಸ್‌ನ ಐಟಿ ವಿಭಾಗದ ಅಧಿಕಾರಿಯೊಬ್ಬರ ಪತ್ನಿ ಎನ್ನಲಾಗಿದೆ. ಪ್ರಮುಖ ಆರೋಪಿ ಶ್ವೇತಾ ಜೈನ್, ಬಿಜೆಪಿ ನಾಯಕ ಬ್ರಿಜೇಂದ್ರ ಪ್ರತಾಪ್ ಸಿಂಗ್ ಅವರ ಮನೆಯಲ್ಲಿ ಬಾಡಿಗೆ ಇದ್ದಾರೆ. ಆಕೆಗೆ, ಅನೇಕ ರಾಜಕೀಯ ನಂಟುಗಳಿದ್ದು, ಮಹಾರಾಷ್ಟ್ರದ ಮರಾಠಾವಾಡ ಪ್ರಾಂತ್ಯದ ಪ್ರಮುಖ ರಾಜಕಾರಣಿಯೊಬ್ಬರ ಜತೆ ಸಂಪರ್ಕವೂ ಇದೆ ಎನ್ನಲಾಗಿದೆ.