ಲಕ್ನೋ: ಸುಮಾರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಯುವತಿ(ಲೆಸ್ಬಿಯನ್)ಯರು ತಮ್ಮ ಗಂಡನಿಗೆ ವಿಚ್ಛೇದನ ನೀಡಿ ಶನಿವಾರ ಇಬ್ಬರೂ ಯುವತಿಯರು ದೇವಾಲಯದಲ್ಲಿ ವಿವಾಹವಾಗಿರುವ ಘಟನೆ ಉತ್ತರಪ್ರದೇಶದ ಬುಂದೆಲ್ ಖಾಂಡ್ ನಲ್ಲಿ ನಡೆದಿದೆ.
ಉತ್ತರಪ್ರದೇಶ ಹಮೀರ್ ಪುರ್ ನ 24 ಮತ್ತು 26ರ ಹರೆಯದ ಇಬ್ಬರು ಯುವತಿಯರು ದೇವಾಲಯದಲ್ಲಿ ಹಾರ ಬದಲಾಯಿಸಿಕೊಂಡರು. ಆದರೆ ಇಬ್ಬರ ಮದುವೆಗೆ ಮಾನ್ಯತೆ ನೀಡಲು ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ.
ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದ ವೇಳೆ ಪ್ರೇಮಾಂಕುರವಾಗಿತ್ತಂತೆ! ಇಬ್ಬರ ನಡುವಿನ ಸಂಬಂಧ ಮನೆಯವರಿಗೆ ತಿಳಿದ ಮೇಲೆ ಕಾಲೇಜಿಗೆ ಹೋಗುವುದಕ್ಕೆ ನಿರ್ಬಂಧ ವಿಧಿಸಿದ್ದರು. ಇದರಿಂದಾಗಿ ವಿದ್ಯಾಭ್ಯಾಸವೂ ಮೊಟಕುಗೊಂಡಿತ್ತು.
ಕಾಲೇಜು ಬಿಟ್ಟ ನಂತರ ಮನೆಯವರು ತಮ್ಮ ಮಗಳಿಗೆ ವರನನ್ನು ನೋಡಿ ಮದುವೆ ಮಾಡಿಸಿದ್ದರು. ಆದರೆ ಪ್ರೀತಿಯ ಸೆಳೆತಕ್ಕೆ ಸಿಲುಕಿದ ಇಬ್ಬರೂ ಇದೀಗ ತಮ್ಮ ಗಂಡಂದಿರಿಗೆ ಡೈವೋರ್ಸ್ ಕೊಟ್ಟು, ಯುವತಿಯ(ಲೆಸ್ಬಿಯನ್)ರಿಬ್ಬರು ಮದುವೆಯಾಗಿದ್ದಾರೆ!
ಕಾನೂನು ತೊಡಕು!
ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ ಸೆಪ್ಟೆಂಬರ್ 6ರಂದು ಸಲಿಂಗಕಾಮ ಅಪರಾಧ ಎಂದು ಪರಿಗಣಿಸಲ್ಪಟ್ಟ ಐಪಿಸಿ ಸೆಕ್ಷನ್ 377ನ್ನು ರದ್ದುಗೊಳಿಸಿತ್ತು. ಆದರೆ ಸಮಾನ ಲಿಂಗಿಗಳು ಅಥವಾ ಹೆಣ್ಣು, ಹೆಣ್ಣುಗಳ ಮದುವೆಗೆ ಭಾರತೀಯ ಕಾನೂನಿನಲ್ಲಿ ಅವಕಾಶ ಇಲ್ಲ.
ಈ ಬಗ್ಗೆ ಇಬ್ಬರು ಯುವತಿಯರ ವಕೀಲರು ಪ್ರತಿಕ್ರಿಯೆ ನೀಡಿದ್ದು, ಸಮಾನ ಲಿಂಗಿಗಳ ಮದುವೆಗೆ ಸರ್ಕಾರದ ಆದೇಶ ಇಲ್ಲದೆ ಇರುವ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ್ ಆರ್ ಕೆ ಪಾಲ್, ಇಬ್ಬರ ವಿವಾಹ ನೋಂದಣಿ ಮಾಡಲು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಮಗೆ ಇನ್ನೂ ವಿಶ್ವಾಸವಿದೆ..ಸುಪ್ರೀಂಕೋರ್ಟ್ ಸೆಕ್ಷನ್ 377 ಅನ್ನು ಹೇಗೆ ರದ್ದುಗೊಳಿಸಿತ್ತೋ..ಅದೇ ರೀತಿ ನಾವು ಕೂಡಾ ಒಟ್ಟಿಗೆ ಇರುತ್ತೇವೆ. ನಮಗೆ ಯಾರಿಂದಲೂ ತೊಂದರೆ ಕೊಡಲು ಆಗಲ್ಲ ಎಂದು ಯುವತಿಯರು ತಿಳಿಸಿದ್ದಾರೆ.