Advertisement

Koratagere ಸರಿಯಾದ ರಸ್ತೆ ಇಲ್ಲದೇ ನೀರಿನಲ್ಲೇ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಸಂಚಾರ

07:20 PM Aug 27, 2024 | Team Udayavani |

ಕೊರಟಗೆರೆ: ಈ ಗ್ರಾಮದಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದರೆ ಸರಿಯಾದ ರಸ್ತೆ ಇಲ್ಲದೇ ನೀರಿನಲ್ಲೇ ಪ್ರತಿನಿತ್ಯ ಸಂಚಾರ. ಸಾಕಷ್ಟು ವರ್ಷಗಳಿಂದ ರಸ್ತೆ ಒತ್ತುವರಿಯನ್ನ ತೆರವುಗೊಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳ ಮೌನಕ್ಕೆ ವಹಿಸಿರುವುದು ಹಲವು ಅನುಮಾನ ಕಾರಣವಾಗಿದೆ.

Advertisement

ತಾಲೂಕಿನ ತೀತಾ ಗ್ರಾಪಂಗೆ ಸೇರಿದ ತುಂಬಗಾನಹಳ್ಳಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳು ಹೊಂದಿದ್ದು, 500ಕ್ಕೂ ಹೆಚ್ಚು ಜನ ವಾಸ ಮಾಡುತ್ತಿರುವ ಗ್ರಾಮಕ್ಕೆ ರಸ್ತೆ ಸಂರ್ಪಕನೇ ಇಲ್ಲದಂತಾಗಿದೆ. ಪ್ರತಿ ದಿನ ಸುಮಾರು 50ಕ್ಕೂ ಹೆಚ್ಚು ಚಿಕ್ಕಪುಟ್ಟ ವಿದ್ಯಾರ್ಥಿಗಳು ಇದೆ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು, ಮಳೆ ಬಂದರೆ ಸಾಕು ಈ ರಸ್ತೆ ಬಂದ್ ಆಗುತ್ತದೆ. ಸಾಕಷ್ಟು ವರ್ಷಗಳಿಂದ ಜಲ್ಲಿ ಕಲ್ಲು ಕಾಣದ ರಸ್ತೆಗೆ ಜಿಪಂ ಇಲಾಖೆಯ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ದಾರೆ.

ರಸ್ತೆ ಒತ್ತುವರಿ ತೆರೆವು ಯಾವಾಗ
ತುಂಬಗಾನಹಳ್ಳಿ ಗ್ರಾಮದಿಂದ ತೀತಾ ಗ್ರಾಮಕ್ಕೆ ಸುಮಾರು ಅರ್ಧ ಕಿಲೋ ದೂರ ಇದ್ದು, ಸರ್ವೆ ನಂ 33\6 ಜಮೀನು ಮಾಲಿಕರಿಂದ ಕರಾಬು ಜಾಗವನ್ನ ಒತ್ತುವರಿ ಮಾಡಿದ್ದು, ಈ ರಸ್ತೆ 20 ಅಡಿ ಅಗಲ ಹೊಂದಿದೆ. ಆದರೆ ಈ ರಸ್ತೆ ಪೂರ್ತಿ ಒತ್ತುವರಿಯಾಗಿದ್ದು, ಇದನ್ನ ತೆರವುಗೊಳಿಸಲು ಅನೇಕ ಬಾರಿ ಗೃಹ ಸಚಿವರಿಗೆ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅನೇಕ ಬಾರಿ ಜಿಪಂ ಅಧಿಕಾರಿಗಳ ಕಚೇರಿಗೆ ಹೋದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಆರೋಪ ಮಾಡಿದರು.

ಡಾಂಬರ್ ಕಾಣದ ತುಂಬಗಾನಹಳ್ಳಿ ಗ್ರಾಮ
ತುಂಬಗಾನಹಳ್ಳಿ ಗ್ರಾಮಕ್ಕೆ ಸಂಪರ್ಕಸಿರುವ ರಸ್ತೆಗಳು ಡಾಂಬರ್ ಕಂಡಿಲ್ಲ. ಈ ಹಿಂದೆ ಇದ್ದ ರಸ್ತೆಯಲ್ಲಿ ಕೆಎಸ್‍ಆರ್‍ಪಿ 12ನೇ ಪೊಲೀಸ್ ಬೆಟಾಲಿಯನ್ ನಿರ್ಮಾಣವಾಗದ್ದು, ಆ ರಸ್ತೆಯೂ ಕೂಡ ಸಂಪೂರ್ಣ ಹಾಳಾಗಿದೆ. ಅತಿ ಹೆಚ್ಚು ಸಂಚಾರ ಮಾಡುವ ರಸ್ತೆಯಲ್ಲಿ ಸಂಪೂರ್ಣ ನೀರು ತುಂಬಿರುವುದಿಂದ ತೀತಾ ಗ್ರಾಮಕ್ಕೆ ಅರ್ಧ ಕಿಲೋ. ಸಂಚಾರ ಮಾಡಬೇಕಾದವರು 8 ಕಿಲೋ ದೂರ ಸಂಚಾರ ಮಾಡಿ ತೀತಾ ಗ್ರಾಮಕ್ಕೆ ತಮ್ಮ ವಹಿವಾಟು ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತುಂಬಗಾನಹಳ್ಳಿ ಗ್ರಾಮದಿಂದ ಪ್ರತಿನಿತ್ಯ ಆಸ್ಪತ್ರೆ, ಶಾಲೆಗೆ, ಬ್ಯಾಂಕ್, ಗ್ರಾಪಂ ಕಚೇರಿಗೆ, ಬಸ್ ಹತ್ತಲು, ಪೋಸ್ಟ್ ಆಫೀಸ್, ದಿನಸಿ ಪದಾರ್ಥ, ತರಲು ತೀತಾ ಗ್ರಾಮದಲ್ಲಿ ಹೋಗಬೇಕಿದೆ. ಪ್ರತಿನಿತ್ಯ ತೀತಾ ಗ್ರಾಮಕ್ಕೆ ಹೋಗಬೇಕಾದ ಗ್ರಾಮಸ್ಥರು ಇದೇ ರಸ್ತೆಯಲ್ಲಿ ಸಂಚಾರ ಮಾಡಬೇಕಿದೆ. ಅನೇಕ ಬಾರಿ ಅಪಘಾತ ಸಂಭವಿಸಿದರೆ ಒಂದು ಆಂಬುಲೈನ್ಸ್ ಬರೋದಿಲ್ಲ.

Advertisement

ನಾನು ಹೊಲಕ್ಕೆ ಹಾಗೂ ತೀತಾ ಗ್ರಾಮದ ಪೋಸ್ಟ್ ಆಫೀಸ್ ಹೋಗಿ ವೃದ್ದಾಪ್ಯ ವೇತನ ಪಡೆಯಲು ಇದೆ ರಸ್ತೆಯಲ್ಲಿ ಹೋಗಬೇಕಿದೆ. ಮೊನ್ನೆ ಹೋಗಿ ಬರಬೇಕಾದರೆ ರಸ್ತೆ ಮಧ್ಯೆ ಬಿದ್ದು ಆಸ್ಪತ್ರೆ ದಾಖಲಾಗಿದ್ದೆ. ಕಳೆದ 5 ವರ್ಷದಿಂದ ಈ ರಸ್ತೆ ಒತ್ತುವರಿ ಮಾಡಿರುವುದರಿಂದ ಈ ರಸ್ತೆಯಲ್ಲಿ ನೀರು ನಿಂತು ಓಡಾಡಲು ಸಾಧ್ಯವಾಗುತ್ತಿಲ್ಲ.
-ಪಾರ್ವತಮ್ಮ ತುಂಬಗಾನಹಳ್ಳಿ ಗ್ರಾಮದ ವೃದ್ದೆ.

ಸುಮಾರು 5 ವರ್ಷದಿಂದ ಈ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದು, ಅನೇಕ ಬಾರಿ ಗೃಹ ಸಚಿವರಿಗೆ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ವೃದ್ದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದೆ ರಸ್ತೆಯನ್ನ ಅವಲಂಭಿಸಿದ್ದಾರೆ. ತಹಸೀಲ್ದಾರ್ ಅವರು ರಸ್ತೆ ಒತ್ತುವರಿ ತೆರವುಗೊಳಿಸಿ ತುಂಬಗಾನಹಳ್ಳಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕಿದೆ.
-ನರಸಿಂಹರಾಜು ತೀತಾ ಗ್ರಾಪಂ ಸದಸ್ಯ.

ತುಂಬಗಾನಹಳ್ಳಿ ಗ್ರಾಮದಲ್ಲಿ ರಸ್ತೆ ಒತ್ತುವರಿ ಬಗ್ಗೆ ಈಗಾಗಲೇ ಸಾರ್ವಜನಿಕರ ದೂರು ನೀಡಿದ್ದು, ನಮ್ಮ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ಆಗಿರುವ ಬಗ್ಗೆ ಗುರುತಿಸಲಾಗಿದ್ದು, ಅದಷ್ಟು ಬೇಗ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
-ಕೆ.ಮಂಜುನಾಥ್. ತಹಸೀಲ್ದಾರ್ ಕೊರಟಗೆರೆ.

Advertisement

Udayavani is now on Telegram. Click here to join our channel and stay updated with the latest news.

Next