Advertisement
ಕಳೆದ ಒಂದು ತಿಂಗಳಿನಿಂದ ಕಾಣಿಸಿಕೊಂಡಿರುವ ಜ್ವರದ ಬಾಧೆ ಕಡಬ ಸಮೀಪದ ಮರ್ದಾಳ ಪರಿಸರದಲ್ಲಿ ವ್ಯಾಪಕವಾಗಿದೆ. ಹೆಚ್ಚಿನವರು ಸ್ಥಳೀಯ ಚಿಕಿತ್ಸಾಲಯಗಳಲ್ಲಿ ಹಾಗೂ ಕಡಬದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಜ್ವರ ಉಲ್ಬಣಿಸಿದ ಕೆಲವರನ್ನು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಡಬಕ್ಕೆ ಹತ್ತಿರದಲ್ಲಿರುವ ಸುಳ್ಯ ತಾಲೂಕಿನ ಎಡಮಂಗಲ ಪ್ರದೇಶದಿಂದ ಕೂಡ ಜ್ವರಪೀಡಿತರು ಕಡಬಕ್ಕೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ.
ಮರ್ದಾಳದ ಕಂಪ ನಿವಾಸಿ ಜನಾರ್ದನ ಅವರ ಪತ್ನಿ ಪುಷ್ಪಲತಾ (37) ಅವರು ಜ್ವರದಿಂದ ತೀವ್ರ ಅಸ್ವಸ್ಥರಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ 4 ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಆಕೆ ಡೆಂಗ್ಯೂ ಜ್ವರ ಪೀಡಿತರಾಗಿದ್ದರು ಎನ್ನಲಾಗಿದೆ. ಆದರೆ ಅದನ್ನು ಆರೋಗ್ಯ ಇಲಾಖೆ ದೃಢಪಡಿಸಿಲ್ಲ. ಪುಷ್ಪಾವತಿ ಅವರ ಮನೆಯ ಎಲ್ಲಾ ಸದಸ್ಯರಿಗೂ ಜ್ವರ ಬಾಧಿಸಿದೆ. ಅವರ ಮನೆ ಇರುವ ಕಂಪ ಪರಿಸರದಲ್ಲಿ ಜ್ವರ ವ್ಯಾಪಕವಾಗಿ ಹರಡಿದೆ. ಖಾಸಗಿ ಪ್ರಯೋಗಾಲಯದ ವರದಿ ಪ್ರಕಾರ ಕಡಬ ಪರಿಸರದಲ್ಲಿ ಕಳೆದ 20 ದಿನಗಳ ಅವಧಿಯಲ್ಲಿ ಸುಮಾರು 45 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಆದರೆ ಆರೋಗ್ಯ ಇಲಾಖೆಯ ಜಿಲ್ಲಾ ಪ್ರಯೋಗಾಲಯದಲ್ಲಿ ಕಡಬ ಸರಕಾರಿ ಆಸ್ಪತ್ರೆಯಿಂದ ಕಳುಹಿಸಿಕೊಡಲಾದ ರಕ್ತದ ಮಾದರಿಗಳ ಪೈಕಿ 1 ಡೆಂಗ್ಯೂ ಪ್ರಕ ರಣವನ್ನು ದೃಢಪಡಿಸಲಾಗಿದೆ. ಅಧಿಕಾರಿಗಳ ಭೇಟಿ
ಶಂಕಿತ ಡೆಂಗ್ಯೂ ಜ್ವರ ಪೀಡಿತ ಮರ್ದಾಳ ಪ್ರದೇಶಕ್ಕೆ ಆರೋಗ್ಯ ಇಲಾಖಾ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಇಲಾಖಾ ಸಿಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮರ್ದಾಳ (ಬಂಟ್ರ) ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನಡೆಸಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾ.ಪಂ. ನೆರವಿನಿಂದ ಫಾಗಿಂಗ್ ನಡೆಸಲಾಗುತ್ತಿದೆ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಅವರು ತಿಳಿಸಿದ್ದಾರೆ.