Advertisement

ಆಕ್ಸಿಜನ್, ರೆಮಿಡಿಸಿವೀರ್ ಆಯ್ತು, ಈಗ ಕೇಂದ್ರದಿಂದ ಮತ್ತೊಂದು ಅನ್ಯಾಯ: ಈಶ್ವರ್ ಖಂಡ್ರೆ

03:39 PM Jun 01, 2021 | Team Udayavani |

ಬೆಂಗಳೂರು: ಪ್ರವಾಹ ಪರಿಹಾರ ನೀಡಿಕೆ, ಆಕ್ಸಿಜನ್, ರೆಮಿಡಿಸಿವೀರ್, ಆಂಪೋಟೆರಿಸಿನ್ ಬಿ,ಹಂಚಿಕೆ ಬಳಿಕ ಕೇಂದ್ರದಿಂದ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯವಾಗಿದೆ. ಈಗ ಎಸ್.ಡಿ.ಆರ್.ಎಫ್. ಕಂತು ಬಿಡುಗಡೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯದ ಬಿಜೆಪಿಯ 25 ಸಂಸದರಿಗೆ ಜನರ ಬಗ್ಗೆಕಿಂಚಿತ್ತೂ ಕಾಳಜಿ ಇಲ್ಲವೇ? ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ರಾಜ್ಯ ವಿಪತ್ತು ಸ್ಪಂದನಾ ನಿಧಿಯಡಿ ಕೇವಲ 316 ಕೋಟಿ ರೂ. ಮಾತ್ರ ನೀಡಿದೆ. ಆದರೆ ಮಹಾರಾಷ್ಟ್ರಕ್ಕೆ 1289 ಕೋಟಿ ರೂ., ಆಂಧ್ರಕ್ಕೆ 447 ಕೋಟಿ ರೂ. ತಮಿಳುನಾಡಿಗೆ 408 ಕೋಟಿ ರೂ. ಬಿಡುಗಡೆ ಮಾಡಿರುವ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಿದೆ ಎಂದು ಅವರು ಆರೋಪಿಸಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಡಲೂ ಬಿಜೆಪಿ ನೇತೃತ್ವದ ಸರ್ಕಾರದ ಬಳಿ ಹಣವಿಲ್ಲ, ಲಸಿಕೆ ತರಿಸಲೂ ಹಣವಿಲ್ಲದೆ ಜನರನ್ನು ಸೋಂಕಿನ ಕೂಪಕ್ಕೆ ನೀಡುತ್ತಿದೆ. ಕೇಂದ್ರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಈಗಲಾದರೂ 25 ಮಂದಿ ಬಿಜೆಪಿ ಸಂಸದರು ಧೈರ್ಯ ಮಾಡಿ ಒಂದು ಧ್ವನಿಯಲ್ಲಿ ರಾಜ್ಯವನ್ನು ರಕ್ಷಿಸಲಿ, ಇಲ್ಲ ರಾಜೀನಾಮೆ ಕೊಟ್ಟು ರಾಜ್ಯ ಉಳಿಸಲಿ ಎಂದು ಖಂಡ್ರೆ ಆಗ್ರಹಿಸಿದ್ದಾರೆ.

ಸಣ್ಣ ರಾಜ್ಯ ಉತ್ತರಾಖಂಡಕ್ಕೇ ಕೇಂದ್ರ 375 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರದ ದೃಷ್ಟಿಯಲ್ಲಿ ಕರ್ನಾಟಕ ಅದಕ್ಕಿಂತ ಕಡೆಯಾಯಿತೇ, 2021-22ನೇ ಸಾಲಿಗೆ ರಾಜ್ಯಕ್ಕೆ SDRF ನಡಿ 1264 ಕೋಟಿ ರೂ. ಲಭಿಸಲಿದೆ. ಇದು ಕೋವಿಡ್ ನಿರ್ವಹಣೆಗಷ್ಟೇ ಅಲ್ಲ, ರಾಜ್ಯ ಎದುರಿಸಬಹುದಾದ ಇತರ ವಿಪತ್ತಿಗೂ ಅನ್ವಯಿಸುತ್ತದೆ. ರಾಜ್ಯವನ್ನು ದೇವರೇ ಕಾಪಾಡಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಪ್ರವಾಹದಿಂದ 24ಸಾವಿರ ಕೋಟಿ ರೂ. ನಷ್ಟವಾದರೂ ಕೇಂದ್ರ ಕೊಟ್ಟಿದ್ದು 577 ಕೋಟಿ ರೂ. ಮಾತ್ರ. ಆಗಲೂ ಬಾಯಿ ಬಿಡದೆ ಮೌನ ಧರಿಸಿದ್ದ ಸಂಸದರು, ಈಗಲೂ ಕೇಂದ್ರದ ಮುಂದೆ ಕೈಕಟ್ಟಿ ಗುಲಾಮತನ ತೋರುತ್ತಿದ್ದಾರೆ. ರಾಜ್ಯದ ಹಿತ ಚಿಂತನೆ ಇಲ್ಲದ ಇವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next