ಉತ್ತರ ಪ್ರದೇಶ: ಕವಯಿತ್ರಿ ಮಧುಮಿತಾ ಶುಕ್ಲಾ ಹತ್ಯೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಮತ್ತು ಅವರ ಪತ್ನಿ ಮಧುಮಣಿ ತ್ರಿಪಾಠಿ ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ರಾಜ್ಯ ಕಾರಾಗೃಹಗಳ ಆಡಳಿತ ಇಲಾಖೆಯಿಂದ ಸಚಿವರು ಮತ್ತು ಅವರ ಪತ್ನಿ ಬಿಡುಗಡೆ ಕುರಿತು ಆದೇಶ ಹೊರಡಿಸಲಾಗಿದೆ. ಜೈಲಿನಲ್ಲಿ ಉತ್ತಮ ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಯುಪಿ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಏನಿದು ಪ್ರಕರಣ: ಮೇ 9, 2003 ರಂದು, ಖ್ಯಾತ ಕವಯಿತ್ರಿ ಮಧುಮಿತಾ ಶುಕ್ಲಾ ಅವರನ್ನು ಲಕ್ನೋದ ನಿಶಾತ್‌ಗಂಜ್‌ನ ಪೇಪರ್ ಮಿಲ್ ಕಾಲೋನಿಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ಮತ್ತು ಅವರ ಪತ್ನಿ ಮಧುಮಣಿ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅಲ್ಲದೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿತ್ತು.
ಇವರಿಬ್ಬರೂ 17 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದು, ಈ ಅವಧಿಯಲ್ಲಿ ಅವರ ನಡವಳಿಕೆ ಚೆನ್ನಾಗಿತ್ತು ಎಂದು ಸರ್ಕಾರ ತನ್ನ ಆದೇಶದಲ್ಲಿ ಬರೆದುಕೊಂಡಿದೆ. ಆದೇಶದಲ್ಲಿ, ಅಕಾಲಿಕ ಬಿಡುಗಡೆಗೆ ಸಂಬಂಧಿಸಿದಂತೆ ಮೇ 2022 ರ ಸುಪ್ರೀಂ ಕೋರ್ಟ್‌ನ ಆದೇಶವನ್ನೂ ಉಲ್ಲೇಖಿಸಲಾಗಿದೆ. ರಾಜ್ಯಪಾಲರ ಆದೇಶದ ಮೇರೆಗೆ ಕಾರಾಗೃಹ ಆಡಳಿತ ಇಲಾಖೆ ಬಿಡುಗಡೆ ಆದೇಶ ಹೊರಡಿಸಿದೆ.
ಸದ್ಯ ಇಬ್ಬರೂ ಗೋರಖ್‌ಪುರ ಜೈಲಿನಲ್ಲಿದ್ದು, ಬಿಡುಗಡೆ ಪ್ರಕ್ರಿಯೆ ಕಾರ್ಯಗಳು ನಡೆಯುತ್ತಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Vikram lander ಫೋಟೊ ಸೆರೆ ಹಿಡಿದ ಚಂದ್ರಯಾನ-2: ಪೋಸ್ಟ್ ಮಾಡಿ ಡಿಲೀಟ್ ಮಾಡಿದ ಇಸ್ರೋ