ಮಡಿಕೇರಿ: ದುಷ್ಕರ್ಮಿಯೊಬ್ಬ ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆರು ಜನರು ಸುಟ್ಟು ಹಾಕಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿ ನಡೆದಿದೆ.
ಎರವರ ಭೋಜ ಎಂಬಾತನೇ ಬೆಂಕಿ ಹಚ್ಚಿದ ಆರೋಪಿಯಾಗಿದ್ದು, ದುಷ್ಕೃತ್ಯ ನಡೆಸಿ ತಲೆ ಮರೆಸಿಕೊಂಡಿದ್ದಾನೆ. ಪಣಿ ಎರವರ ಸೀತೆ (45 ವ), ಬೇಬಿ (40 ವ) ಹಾಗೂ ಪ್ರಾರ್ಥನಾ (6 ವ) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಹಗಲಲ್ಲೇ ಚಿಲ್ಲರೆ ನೆಪದಲ್ಲಿ ಹಣ ದೋಚಿ ಪರಾರಿ: ಹೆಚ್ಚುತ್ತಿರುವ ಪ್ರಕರಣಗಳಿಂದ ಜನತೆ ಕಂಗಾಲು
ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ಕೊಳೇರ ವಸಂತ (ಚಿಟ್ಟಿಯ್ಯಪ್ಪ) ಎಂಬುವವರ ಲೈನ್ ಮನೆಯಲ್ಲಿ ಎರವರ ಮಂಜು ವಾಸವಿದ್ದರು. ಇವರ ಮನೆಗೆ ಕುಟುಂಬದ 5-6 ಮಂದಿ ಸದಸ್ಯರು ಬಂದು ತಂಗಿದ್ದರು. ಬೆಳಗ್ಗಿನ ಜಾವ ಸುಮಾರು 2 ಗಂಟೆ ವೇಳೆಯಲ್ಲಿ ಮಂಜು ಅವರ ತಂದೆ ಭೋಜ ಪಾನಮತ್ತನಾಗಿ ಮನೆಯ ಹೊರ ಬಂದು ಎಲ್ಲಾ ಬಾಗಿಲು, ಕಿಟಕಿಗಳನ್ನು ಮುಚ್ಚಿದ್ದಾನೆ. ಮನೆಯ ಮೇಲೇರಿ ಹೆಂಚು ತೆಗೆದು ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಏನೂ ಮಾಡಲಾಗದೆ ಬೆಂಕಿ ಕೆನ್ನಾಲಗೆಗೆ ಸಿಲುಕಿದ ಆರು ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಇದನ್ನೂ ಓದಿ: ಅಳ್ನಾವರಕ್ಕೆ ಕಾಳಿ: ಭುಗಿಲೆದ್ದಿದೆ ಚಳವಳಿ
ಐವರನ್ನು ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರಲ್ಲಿ 6 ಮತ್ತು 7 ವರ್ಷದ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಭೋಜನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಬೆಳ್ಳಂಬೆಳಗ್ಗೆ ನಡೆದ ಈ ಘಟನೆಯಿಂದ ಮುಗುಟಗೇರಿ ಗ್ರಾಮ ಬೆಚ್ಚಿ ಬಿದ್ದಿದೆ