ಸ್ಟೇಟ್‌ಬ್ಯಾಂಕ್: ಭಾರತದ ಭವಿಷ್ಯ ಶಾಲೆಗಳಲ್ಲಿ ಅಡಗಿದೆ. ಮಕ್ಕಳ ಮನಸ್ಸಿನಲ್ಲಿ ಸ್ವತ್ಛತೆಯ ಅರಿವು ಮೂಡಿಸಿದರೆ ದೇಶ ಸ್ವತ್ಛ ಮತ್ತು ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಜೀ ನುಡಿದರು.
ಮಂಗಳೂರು ನಗರ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಮತ್ತು ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ವತಿಯಿಂದ ರೊಸಾರಿಯೋ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಬುಧವಾರ ದಿಕ್ಸೂಚಿ ಭಾಷಣ ಮಾಡಿದರು.
ಪಠ್ಯದಲ್ಲಿರುವ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಶಿಕ್ಷಕರದ್ದಾಗಬಾರದು. ಸ್ವತ್ಛತೆ, ದೇಶಪ್ರೇಮದ ಪಾಠವನ್ನೂ ಹೇಳಿಕೊಡಬೇಕು. ಹಾಗಾದಾಗ ಉತ್ತಮ ಪ್ರಜ್ಞಾವಂತ ನಾಗರಿಕ ಈ ದೇಶಕ್ಕೆ ಸಿಗಲು ಸಾಧ್ಯವಿದೆ ಎಂದವರು ಅಭಿಪ್ರಾಯ ಪಟ್ಟರು. ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ಮೋನ್ಸಿಜೋರ್ ಮ್ಯಾಕ್ಸಿಂ ನೋರೊನ್ಹಾ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರವು ವ್ಯಕ್ತಿಯ ಸರ್ವ ರೀತಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಮೌಲ್ಯಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದರೊಂದಿಗೆ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವ ಗುರುತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ಸಮ್ಮಾನ
ಎಸೆಸೆಲ್ಸಿಯಲ್ಲಿ 625 ಅಂಕ ಪಡೆದ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಜ್ಞಾನ್ ಆವರನ್ನು ಸಮ್ಮಾನಿಸಲಾಯಿತು. ಉತ್ತಮ ಅಂಕ ಪಡೆದ ಸಂಘದ ಸದಸ್ಯ ಶಾಲೆಯ ವಿದ್ಯಾರ್ಥಿಗಳು ಮತ್ತು ಶೇ. 100 ಫಲಿತಾಂ ಶ ಶಾಲೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು. ನಿವೃತ್ತರಾದ ಮುಖ್ಯಸ್ಥರನ್ನು ಸಮ್ಮಾನಿಸಲಾಯಿತು.
ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ವಿಕೇಶ್, ಭಾರ್ಗವಿ ನಾಯಕ್, ಚಂದನಾ ಶೆಣೈ, ಜ್ಯೋತಿಕಾ ಎನ್. ಅವರಿಗೆ ಸ್ಟಾನಿ ಫ್ರಾನ್ಸಿಸ್ ಬಾರೆಟ್ಟೋ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಅಲೋಶಿಯಸ್ ಡಿ’ಸೋಜಾ ಅಧ್ಯಕ್ಷತೆ ಕಾರ್ಯಕ್ರಮದ ವಹಿಸಿದ್ದರು. ಡಿಡಿಪಿಐ ವೈ. ಶಿವರಾಮಯ್ಯ, ಉದ್ಯಮಿ ಸಂಗೀತಾ ಕಾಮತ್, ಮಿಲಾಗ್ರಿಸ್ ಪ್ರೌಢಶಾಲೆ ಪದವೀಧರ ಸಹಾಯಕ ಸ್ಟಾನಿ ಫ್ರಾನ್ಸಿಸ್ ಬಾರೆಟ್ಟೋ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ವಿನ್ಸೆಂಟ್ ಡಿ’ಕೋಸ್ತಾ ಸ್ವಾಗತಿಸಿದರು.