ಲೆನಿನ್ ನಂತರ ಸೋವಿಯೆಟ್ ರಷ್ಯಾದ ಚುಕ್ಕಾಣಿ ಹಿಡಿದವನು ಜೋಸೆಫ್ ಸ್ಟಾಲಿನ್. ಈತನ ಕಾಲದಲ್ಲಿ ರಷ್ಯಾ ಸಂಪೂರ್ಣ ಸರ್ವಾಧಿಕಾರದ ಕಬಂಧಬಾಹುಗಳೊಳಗೆ ಸೆರೆಯಾಯಿತು. ಸ್ಟಾಲಿನ್‌ನ ರಾಜಕೀಯ ನಡೆಗಳನ್ನು ವಿರೋಧಿಸುವವರೆಲ್ಲರೂ ದೇಶದ್ರೋಹಿಗಳ ಪಟ್ಟಿಯಲ್ಲಿ ಸೇರ್ಪಡೆಯಾದರು. ಸ್ಟಾಲಿನ್ ತನ್ನ ನಂಬಿಕೆಗೆ ಅರ್ಹರಾದವರನ್ನಷ್ಟೇ ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ ನೇಮಿಸುತ್ತಿದ್ದ. ಯಾವುದೇ ವ್ಯಕ್ತಿ ತನ್ನ ವಿಶ್ವಾಸಕ್ಕೆ ಅರ್ಹನಲ್ಲವೆಂಬ ಸಣ್ಣ ಸುಳುಹು ಸಿಕ್ಕರೂ ಸಾಕು ಅವರನ್ನು ಪರಿಹರಿಸಿಬಿಡುತ್ತಿದ್ದ.
ಸ್ಟಾಲಿನ್‌ನ ಕಾಲದಲ್ಲಿ ಸೈಬೀರಿಯಾದ ಗುಲಾಗ್ ಎಂಬ ತೆರೆದ ಸೆರೆಮನೆಗಳು ಕುಪ್ರಸಿದಟಛಿವಾದವು. ಅಲ್ಲಿಗೆ ಕಳಿಸಲ್ಪಟ್ಟವರು ಯಾರೊಬ್ಬರೂ ವಾಪಸ್ ಬರಲಿಲ್ಲ. ಹಾಗೆ ಆತ ಸುಮಾರು 5 ಕೋಟಿ ರಷ್ಯನ್ನರನ್ನು ಪರಿಹರಿಸಿದ ಎಂಬ ಐತಿಹ್ಯವಿದೆ. ಸ್ಟಾಲಿನ್ ತೀರಿಕೊಂಡಾಗ ಆತನ ಕ್ಯಾಬಿನೆಟ್ ಸಚಿವರ ಮಧ್ಯೆ ಬಿರುಸಿನ ಚಟುವಟಿಕೆಗಳಾದವು. ಖಾಲಿ ಬಿದ್ದ ಹುದ್ದೆಯನ್ನು ಅಲಂಕರಿಸುವವರು ಯಾರು ಎಂಬ ವಿಷಯದಲ್ಲಿ ಒಂದು ಶೀತಲ ಸಮರವೇ ನಡೆದುಹೋಯಿತು ಎನ್ನಬಹುದು. ಲ್ಯಾವೆಂಟಿ ಬೆರಿಯ, ಝುಕೋವ್, ಮೊಲೊತೊವ್, ಮೆಲೆಂಕೊವ್ ಮುಂತಾದವರ ಮಧ್ಯೆ ಅಧಿಕಾರದ ಹಗ್ಗಜಗ್ಗಾಟ ನಡೆಯಿತು.
ಕೊನೆಗೆ ಒಬ್ಬರನ್ನೊಬ್ಬರ ಮೇಲೆ ಹರಿಹಾಯಲು ಬಿಟ್ಟು ಸಕಲ ತಂತ್ರಗಳನ್ನೂ ಪ್ರಯೋಗಿಸಿ ನಿಕಿಟ ಕ್ರುಶ್ಚೇವ್ ಸೋವಿಯೆಟ್ ಒಕ್ಕೂಟದ ಅಧಿಕಾರದಂಡ ಹಿಡಿದರು. ಒಕ್ಕೂಟದ ಅಧ್ಯಕ್ಷನಾದ ಮೇಲೆ ಕ್ರುಶ್ಚೇವ್, ಸ್ಟಾಲಿನ್ ಅದುವರೆಗೆ ಅನುಸರಿಸಿದ ಸರ್ವಾಧಿಕಾರಿ ಧೋರಣೆಯ ಆಡಳಿತವನ್ನು ಕೈಬಿಟ್ಟು ಸುಧಾರಣಾವಾದಿ ಹಾದಿಯನ್ನು ಹಿಡಿದರು. ವರ್ಷಗಳು ಉರುಳಿದಂತೆ ಅವರು ಸ್ಟಾಲಿನ್ ಆಡಳಿತವನ್ನು ತುಂಬ ಮುಕ್ತವಾಗಿಯೇ ಟೀಕಿಸತೊಡಗಿದರು. ಸ್ಟಾಲಿನ್‌ನ ಎಷ್ಟೋ ನಡೆಗಳು ತಪ್ಪಾಗಿದ್ದವು. ಅದರಿಂದ ರಷ್ಯಾದ ಅಭಿವೃದಿಟಛಿ ಕುಂಠಿತವಾಯಿತು ಎಂಬುದನ್ನು ನೇರಾನೇರ ಹೇಳಿಬಿಡುತ್ತಿದ್ದರು ಕ್ರುಶ್ಚೇವ್.
ಒಮ್ಮೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುತ್ತಿದ್ದಾಗ ಕ್ರುಶ್ಚೇವ್‌ರ ಮಾತಿನ ಓಘ ಎಂದಿನಂತೆ ಸ್ಟಾಲಿನ್‌ನ ಟೀಕೆಯತ್ತ ಹರಿಯಿತು. ಸ್ಟಾಲಿನ್‌ನ ಹಲವು ಕ್ರಮಗಳನ್ನು ಕ್ರುಶ್ಚೇವ್ ಖಂಡಿಸುತ್ತಿದ್ದಾಗ ಸಭೆಯ ಮಧ್ಯದಿಂದ ಒಂದು ಧ್ವನಿ “ಅಲ್ರೀ, ನೀವು ಈಗ, ಸ್ಟಾಲಿನ್ ಸತ್ತ ನಂತರ ಇದೆಲ್ಲ ಹೇಳುತ್ತಿದ್ದೀರಿ. ಆದರೆ ಆತ ಬದುಕಿದ್ದಾಗ ಅವನ ಸಚಿವ ಸಂಪುಟದಲ್ಲಿ ನೀವೂ ಇದ್ದಿರಲ್ಲಾ? ಈಗ ಮಾಡುತ್ತಿರುವ ಟೀಕೆಗಳನ್ನು ಆಗಲೇ ಮಾಡಿದ್ದರೆ ಏನಾಗುತ್ತಿತ್ತು?’ ಎಂದು ಗಟ್ಟಿಯಾಗಿ ಹೇಳಿತು.
ಸಭೆ ಸ್ತಂಭೀಭೂತ ವಾಯಿತು. ಕ್ರುಶ್ಚೇವ್ ಮಾತು ನಿಲ್ಲಿಸಿದರು. ಸೂಜಿ ಬಿದ್ದರೂ ಕೇಳುವಷ್ಟು ಮೌನ ಆವರಿಸಿತು ಎಲ್ಲೆಲ್ಲೂ. “ಯಾರದು? ಯಾರು ಹೇಳಿದ್ದು ಅದನ್ನು? ಧೈರ್ಯ ಇದ್ದರೆ ಎದ್ದುನಿಲ್ಲು!’, ಕ್ರುಶ್ಚೇವ್ ಗದರುವಂತೆ ದನಿ ಎತ್ತರಿಸಿ ಕೂಗಿದರು. ಸಭೆ ಹೆಪ್ಪುಗಟ್ಟಿ ಕೂತಿತ್ತು. ಯಾರೊಬ್ಬರೂ ಉಸಿರೆತ್ತಲಿಲ್ಲ. ಒಂದು ನಿಮಿಷ ಗಾಢ ಮೌನ ಆವರಿಸಿದಾಗ ಕ್ರುಶ್ಚೇವ್ ಹೇಳಿದರು, “ಸ್ಟಾಲಿನ್ ನೀತಿಗಳನ್ನು ನಾನು ಆಗ ಯಾಕೆ ವಿರೋಧಿಸಲಿಲ್ಲ ಗೊತ್ತಾಯಿತಲ್ಲ?’.
* ರೋಹಿತ್ ಚಕ್ರತೀರ್ಥ