Advertisement
ಭಾರತದಲ್ಲಿ ನಾವು ಕೋವಿಡ್ 19 ವಿರುದ್ಧದ ಹೋರಾಟವನ್ನು ಜನಾಂದೋಲನವಾಗಿ ರೂಪಿಸಲು ಪ್ರಯತ್ನಿಸಿದ್ದೇವೆ.
Related Articles
Advertisement
ವಿಶ್ವಸಂಸ್ಥೆಯ ಬಲಿಷ್ಠ ಭದ್ರತಾ ಮಂಡಳಿಯಲ್ಲಿ ಭಾರತವು ತಾತ್ಕಾಲಿಕ ಸದಸ್ಯತ್ವವನ್ನು ಪಡೆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕೋವಿಡ್ 19 ವಿರುದ್ಧದ ಜಂಟಿ ಹೋರಾಟದಲ್ಲಿ ನಾವು ಸುಮಾರು 150 ದೇಶಗಳಿಗೆ ವೈದ್ಯಕೀಯ ಹಾಗೂ ಇತರೆ ನೆರವು ನೀಡಿದ್ದೇವೆ. ನಾವು ಭಾರತದಲ್ಲಿ ಈ ಸೋಂಕಿನ ವಿರುದ್ಧದ ಹೋರಾಟವನ್ನು ಜನಾಂದೋಲನವಾಗಿ ರೂಪಿಸಿದ್ದೇವೆ. ಅಲ್ಲದೆ, ಜಗತ್ತಿನಲ್ಲೇ ಅತ್ಯುತ್ತಮ ಗುಣಮುಖ ಪ್ರಮಾಣವನ್ನೂ ನಾವು ಹೊಂದಿದ್ದೇವೆ ಎಂದಿದ್ದಾರೆ ಮೋದಿ.
ಭಾರತದ ಕ್ಷಿಪ್ರ ಸ್ಪಂದನೆ: ಇಂದು ವಿಶ್ವಸಂಸ್ಥೆಯು 193 ಸದಸ್ಯ ರಾಷ್ಟ್ರಗಳನ್ನು ಒಂದೇ ಸೂರಿನಡಿ ತಂದಿದೆ. ಇದರ ಸದಸ್ಯತ್ವದೊಂದಿಗೆ ಸಂಸ್ಥೆಯ ಮೇಲಿನ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ. ಭೂಕಂಪವಾಗಲೀ, ಚಂಡಮಾರುತವಾಗಲೀ, ಎಬೊಲಾವಾಗಲೀ, ಯಾವುದೇ ಪ್ರಾಕೃತಿಕ ಅಥವಾ ಮಾನವ ನಿರ್ಮಿತ ಸಂಕಷ್ಟ ಎದು ರಾದಾಗಲೂ ಭಾರತವು ಅತ್ಯಂತ ಕ್ಷಿಪ್ರವಾಗಿ ಸ್ಪಂದಿಸಿದೆ. ಆರಂಭದಿಂದಲೂ ಭಾರತವು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಗಳು ಹಾಗೂ ಇಕೋಸೋಕ್‌ಗೆ ಸಕ್ರಿಯ ಬೆಂಬಲ ನೀಡುತ್ತಾ ಬಂದಿದೆ.
ಇಕೋಸೋಕ್‌ನ ಮೊದಲ ಅಧ್ಯಕ್ಷರು ಕೂಡ ಭಾರತದವರೇ ಆಗಿದ್ದರು. ಅಲ್ಲದೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಅಜೆಂಡಾ ರೂಪಿಸುವಲ್ಲೂ ಭಾರತ ತನ್ನದೇ ಆದ ಕೊಡುಗೆ ನೀಡಿದೆ. 2030ರ ಅಜೆಂಡಾ ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸುವತ್ತ ನಾವು ಶ್ರಮಿಸುತ್ತಿದ್ದೇವೆ. ಜತೆಗೆ ಅಭಿವೃದ್ಧಿ ಹೊಂದು ತ್ತಿರುವ ಇತರೆ ದೇಶಗಳೂ ಸುಸ್ಥಿರ ಅಭಿವೃದ್ಧಿಯ ಉದ್ದೇಶ ಸಾಧಿಸಲು ನಾವು ನೆರವು ನೀಡುತ್ತಿದ್ದೇವೆ ಎಂದೂ ಮೋದಿ ಹೇಳಿದ್ದಾರೆ.
ವಿಕಾಸದತ್ತ ಭಾರತ: ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎನ್ನುವುದೇ ನಮ್ಮ ಧ್ಯೇಯ. ಅಂದರೆ, ಎಲ್ಲರನ್ನೂ ಒಂದುಗೂಡಿಸಿಕೊಂಡು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಸಾಧಿಸುವುದರ ಕಡೆಗೆ ನಮ್ಮ ಗಮನ ನೆಟ್ಟಿದ್ದೇವೆ. ಕಳೆದ ವರ್ಷ ನಾವು 6 ಲಕ್ಷದಷ್ಟು ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮದಿನವನ್ನು ಆಚರಿಸಿದ್ದೇವೆ. ಆರ್ಥಿಕ ಒಳಗೊಳ್ಳುವಿಕೆಗಾಗಿ ತಂತ್ರಜ್ಞಾನದ ಬಲವನ್ನು ಬಳಸಿಕೊಂಡಿದ್ದೇವೆ.
ವಿಶಿಷ್ಟ ಗುರುತಿನ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ಎಲ್ಲರಿಗೂ ಮೊಬೈಲ್ ಸಂಪರ್ಕ ಎಂಬ ತ್ರಿಕೂಟಗಳನ್ನು ಆಧರಿಸಿ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧಿಸುತ್ತಿದ್ದೇವೆ. ಎಲ್ಲರಿಗೂ ಮನೆ ಎಂಬ ಯೋಜನೆಯನ್ನು ಹಾಕಿಕೊಂಡು, 2022ರೊಳಗಾಗಿ ಪ್ರತಿಯೊಬ್ಬ ಭಾರತೀಯನಿಗೂ ಸುರಕ್ಷಿತ ಮತ್ತು ಭದ್ರ ಸೂರು ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷ ಪೂರ್ಣಗೊಳ್ಳುವ ವೇಳೆಗೆ ಇದು ಸಾಕಾರಗೊಳ್ಳಲಿದೆ. 2025ರೊಳಗೆ ಕ್ಷಯ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಹಾದಿಯಲ್ಲಿಯೂ ನಾವಿದ್ದೇವೆ ಎಂದು ವಿವರಿಸಿದ್ದಾರೆ ಮೋದಿ.
ಕಳೆದ ಕೆಲವು ವರ್ಷಗಳಲ್ಲಿ ನಾವು ವಾರ್ಷಿಕ 38 ದಶಲಕ್ಷ ಟನ್ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿದ್ದೇವೆ. ಅಲ್ಲದೆ ಭಾರತವು ಬೃಹತ್ ಸ್ವಚ್ಛತಾ ಆಂದೋಲನ ಕೈಗೊಂಡಿದ್ದು, ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವ ನಿಟ್ಟಿನಲ್ಲೂ ಕ್ರಮ ಕೈಗೊಂಡಿದ್ದೇವೆ ಎಂದೂ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸುಧಾರಣೆಯ ಸಂದೇಶವಿಶ್ವಸಂಸ್ಥೆಯು ಹುಟ್ಟಿಕೊಂಡಿದ್ದೇ ಎರಡನೇ ವಿಶ್ವಯುದ್ಧದ ಆವೇಶದ ಫಲವಾಗಿ. ಈಗ ಕೋವಿಡ್ 19 ಸೋಂಕು ಎಂಬ ಆವೇಶವು ವಿಶ್ವಸಂಸ್ಥೆಯ ಮರುಹುಟ್ಟು ಹಾಗೂ ಸುಧಾರಣೆಗೆ ನಾಂದಿ ಹಾಡಲಿದೆ ಎಂದು ಮೋದಿ ಹೇಳಿದ್ದಾರೆ. ಜತೆಗೆ, ಜಾಗತಿಕ ಸಾಮರಸ್ಯ, ಸಾಮಾಜಿಕ-ಆರ್ಥಿಕ ಸಮಾನತೆ, ನಿಸರ್ಗದ ಸಮತೋಲನದ ಸಂರಕ್ಷಣೆಯಂಥ ಬದ್ಧತೆಯ ಮೂಲಕ ಭಾರತವು, ವಿಶ್ವಸಂಸ್ಥೆಯ ಅಜೆಂಡಾಗೆ ಸಂಪೂರ್ಣ ಬೆಂಬಲ ನೀಡಲಿದೆ. ನಾವೆಲ್ಲರೂ ಜಾಗತಿಕ ಬಹುಪಕ್ಷೀಯತೆಯ ಪರಿಕಲ್ಪನೆಯನ್ನು ಸುಧಾರಿಸುವುದಾಗಿ ಶಪಥ ಮಾಡಬೇಕಿದೆ. ಸುಧಾರಿತ ವಿಶ್ವಸಂಸ್ಥೆಯೊಂದಿಗೆ ಸುಧಾರಿತ ಬಹುಪಕ್ಷೀಯತೆ ಸೇರಿಕೊಂಡರಷ್ಟೇ ಮಾನವತೆಯ ಬಯಕೆಗಳು ಈಡೇರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.