ನವದೆಹಲಿ: ಪಶ್ಚಿಮ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದಲ್ಲಿನ ಜನರು ಹೆಚ್ಚು ಮದ್ಯ ಕುಡಿಯುತ್ತಾರೆ ಎಂಬುದು ಜನಪ್ರಿಯ ಗ್ರಹಿಕೆಯಾಗಿತ್ತು. ಆದರೆ ಈಗ ಬಿಡುಗಡೆಗೊಂಡಿರುವ ನೂತನ ಸಮೀಕ್ಷೆ ಅದಕ್ಕೆ ತದ್ವಿರುದ್ದವಾದ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ 2019-20ರ ಪ್ರಕಾರ, ಮಹಾರಾಷ್ಟ್ರ ಮತ್ತು ಗೋವಾಕ್ಕಿಂತ ಮದ್ಯ ನಿಷೇಧವಾಗಿರುವ ಬಿಹಾರದ ಪುರುಷರೇ ಹೆಚ್ಚು ಮದ್ಯ ಸೇವಿಸುವುದಾಗಿ ತಿಳಿಸಿದೆ.
2015-16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 15ರಿಂದ 49 ವರ್ಷದ ಜನರನ್ನು ಗುರಿಯಾಗಿರಿಸಿ ಮಾಹಿತಿ ಕಲೆ ಹಾಕಲಾಗಿತ್ತು. ಆದರೆ 2019-20ರಲ್ಲಿ 15 ವರ್ಷ ಮೇಲ್ಪಟ್ಟವರನ್ನು ಸಂಪರ್ಕಿಸಿ ಸಮೀಕ್ಷೆ ಸಿದ್ಧಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಕ್ಕಿಂನಲ್ಲಿ ಅತೀ ಹೆಚ್ಚು ಮಹಿಳೆಯರು (ಶೇ.16.2ರಷ್ಟು) ಹಾಗೂ ಅಸ್ಸಾಂನಲ್ಲಿ ಶೇ.7.3ರಷ್ಟು ಮದ್ಯ ಸೇವಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯ ಪ್ರಕಾರ ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗುತ್ತಿದ್ದು, ಸಂಪೂರ್ಣ ಮದ್ಯ ನಿಷೇಧಗೊಂಡಿರುವ ಬಿಹಾರದ ಗಂಡಸರು ಅತೀ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ದಾಸರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲುಗೊಳಿಸಿದೆ.
ಇದನ್ನೂ ಓದಿ:ಮಮತಾ ವಿರುದ್ಧ ಬಂಡಾಯ ಸಾರಿದ್ದ ಸುವೇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ, ಶೀಘ್ರವೇ ಬಿಜೆಪಿಗೆ
ಗುಜರಾತ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಪುರುಷರು ಅತೀ ಕಡಿಮೆ ಪ್ರಮಾಣದ ಮದ್ಯ ಸೇವಿಸುತ್ತಿದ್ದು, ಈಶಾನ್ಯ ರಾಜ್ಯಗಳಲ್ಲಿ ಅತೀ ಹೆಚ್ಚು ತಂಬಾಕು ಸೇವಿಸುತ್ತಾರೆ ಎಮದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವಿವರಿಸಿದೆ.
ಅತೀ ಹೆಚ್ಚು ಮದ್ಯ ಸೇವಿಸುವ ರಾಜ್ಯಗಳಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದ್ದು, ನಂತರ ಸಿಕ್ಕಿಂ, ಮಣಿಪುರ ಮತ್ತು ಗೋವಾ ಸ್ಥಾನ ಪಡೆದಿದೆ. ಮಿಜೋರಾಂ, ಮಣಿಪುರ್, ಮೇಘಾಲಯ ಮತ್ತು ತ್ರಿಪುರಾದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟವರು ಅತೀ ಹೆಚ್ಚು ಮದ್ಯ ಸೇವಿಸುತ್ತಾರೆ ಎಂದು ವರದಿ ತಿಳಿಸಿದೆ.