Advertisement

ಕಂಠಪೂರ್ತಿ ಕುಡಿದಿದ್ದ ಡಿಸಿಎಂ ಮಗನ ರಂಪಾಟ; ವಿಮಾನ ಯಾನಕ್ಕೆ ಕೊಕ್ಕೆ!

03:58 PM May 09, 2017 | Team Udayavani |

ಅಹ್ಮದಾಬಾದ್‌ : ಕಂಠಪೂರ್ತಿ ಮದ್ಯ ಸೇವಿಸಿದ ಕಾರಣ ನಿಲ್ಲಲು ಕೂಡ ಆಗದೆ ವೀಲ್‌ ಚೇರ್‌ನಲ್ಲಿ, ಪತ್ನಿ ಮತ್ತು ಮಗಳ ಜತೆಗೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ನಸುಕಿನ ವೇಳೆ ಕತಾರ್‌ ವಿಮಾನವನ್ನೇರಲು ಬಂದಿದ್ದ ಗುಜರಾತ್‌ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರ 35ರ ಹರೆಯದ ಪುತ್ರ ಉದ್ಯಮಿ ಜೈಮಾನ್‌ ಪಟೇಲ್‌  ವಿಮಾನ ಏರದಂತೆ ಅಧಿಕಾರಿಗಳು ತಡೆದರು. ಪರಿಣಾಮವಾಗಿ ಉಪ ಮುಖ್ಯಮಂತ್ರಿ ಪುತ್ರ ಅಧಿಕಾರಿಗಳೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ ಘಟನೆ ವರದಿಯಾಗಿದೆ. ಅಂದ ಹಾಗೆ ಗುಜರಾತ್‌ನಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಯಲ್ಲಿದೆ. 

Advertisement

ಜೈಮಾನ್‌ ಪಟೇಲ್‌, ಪತ್ನಿ ಮತ್ತು ಪುತ್ರಿ ರಜಾ ಪ್ರವಾಸದಲ್ಲಿ  ಗ್ರೀಸ್‌ಗೆ ಹೋಗಲು ಕತಾರ್‌ ವಿಮಾನವನ್ನು ಏರುವುದಕ್ಕಾಗಿ ಸೋಮವಾರ ನಸುಕಿನ 4 ಗಂಟೆಯ ಹೊತ್ತಿಗೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿದ್ದರು. 

ಕಂಠಪೂರ್ತಿ ಕುಡಿದಿದ್ದ ಜೈಮಾನ್‌ ಪಟೇಲ್‌ಗೆ ನಿಲ್ಲಲು ಕೂಡ ಆಗದೇ ಆತ ವೀಲ್‌ ಚೇರ್‌ನಲ್ಲಿ ಕುಳಿತು ವಿಮಾನ ಏರಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ಜೈಮಾನ್‌ ಪಟೇಲ್‌ ಮತ್ತು ಅವರ ಕುಟುಂಬದವರಿಗೆ ವಿಮಾನ ಹತ್ತಲು ಬಿಡಲಿಲ್ಲ.

ತನ್ನ ಮಗನ ಈ ನಿರ್ಲಜ್ಜ ಪ್ರಕರಣದ ಕುರಿತಾಗಿ ಗಾಂಧಿನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌, “ನನ್ನ ಮಗ, ಆತನ ಹೆಂಡತಿ ಹಾಗೂ ಮಗಳು ಗ್ರೀಸ್‌ ಪ್ರವಾಸಕ್ಕೆ ಹೊರಟಿದ್ದರು. ನನ್ನ ಮಗನಿಗೆ ಆರೋಗ್ಯ ಸರಿ ಇರಲಿಲ್ಲ; ಹಾಗಾಗಿ ಆತ ವೀಲ್‌ ಚೇರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ನಮ್ಮ ಕುಟುಂಬದ ಘನತೆ – ಗೌರವಕ್ಕೆ ಮಸಿ ಬಳಿಯುವ ಹುನ್ನಾರದಲ್ಲಿ ಯಾರೋ ಆಗದ ಕೆಲವರು ನಮ್ಮ ಕುಟುಂಬದ ಬಗ್ಗೆ ಈ ರೀತಿಯ ಅಪಪ್ರಚಾರ ಮಾಡಿದ್ದಾರೆ; ಸುಳ್ಳನ್ನು ಹರಡುತ್ತಿದ್ದಾರೆ; ಕುಚೋದ್ಯದ ಮಾಹಿತಿಯನ್ನು ಪಸರಿಸುತ್ತಿದ್ದಾರೆ’ ಎಂದು ಗುಡುಗಿದರು. 

Advertisement

Udayavani is now on Telegram. Click here to join our channel and stay updated with the latest news.

Next