Advertisement

ಬರದಲ್ಲೂ ಜಿಲ್ಲಾ  ಸಿಇಒ ದುಂದು ವೆಚ್ಚ!

05:03 PM Nov 24, 2018 | Team Udayavani |

ಬಾಗಲಕೋಟೆ: ಸಂಕಷ್ಟದಲ್ಲಿ ಇರುವ ರೈತರ ಸಾಲ ಮನ್ನಾ ಮಾಡಿರುವ ಸಮ್ಮಿಶ್ರ ಸರ್ಕಾರ ಸಚಿವರು ಹಾಗೂ ಅಧಿಕಾರಿಗಳ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದೆ. ಆದರೆ, ಬಾಗಲಕೋಟೆ ಜಿಲ್ಲಾ ಪಂಚಾಯತ್‌ ಸಿಇಒ ಗಂಗೂಬಾಯಿ ಮಾನಕರ, ಬರದಲ್ಲೂ ದುಂದುವೆಚ್ಚದ ಆಡಳಿತ ನಡೆಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

Advertisement

ಮಾನಕರ ಅವರು ಅಧಿಕಾರ ವಹಿಸಿಕೊಂಡ ಬಳಿಕ ದುಂದುವೆಚ್ಚ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಜಿಪಂ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರೇ ಮಾಡುತ್ತಿದ್ದಾರೆ. 79 ಸಾವಿರ ಮೊತ್ತದ ಬೆಲೆ ಬಾಳುವ ಹ್ಯಾಂಡಿಕ್ಯಾಮ್‌ ಕ್ಯಾಮರಾ ಹಾಗೂ 87,500 ಆ್ಯಪಲ್‌ ಮೊಬೈಲ್‌ ಖರೀದಿ ಮಾಡಿದ್ದಾರೆ. ಹುಬ್ಬಳ್ಳಿಯ ಸಾನ್ವಿ ಎಂಟರ್‌ ಪ್ರೈಜಿಸ್‌ನಲ್ಲಿ ಖರೀದಿ ಮಾಡಿ, ಸೆ.12ರಂದು ಜಿಪಂನ ಯೋಜನೆಯೇತರ ಅನುದಾನದಡಿ ಇರುವ ಹಣ ಪಾವತಿಸಿದ್ದಾರೆ. ಇದು ಈಗ ವಿವಾದ ಪಡೆದಿದೆ.

ಹಿಂದಿನ ಸಿಇಒ ಇದ್ದಾಗ ಮೊಬೈಲ್‌ ಇತ್ತು. ಅದು ಏನಾಯಿತು. ಅಲ್ಲದೇ ಕಳೆದ ವರ್ಷವೇ ಸುಮಾರು 20 ಲಕ್ಷ ಖರ್ಚು ಮಾಡಿ, ಸಿಇಒ ಅವರ ಅಧಿಕೃತ ಸರ್ಕಾರಿ ನಿವಾಸ ಆಧುನೀಕರಣಗೊಳಿಸಲಾಗಿತ್ತು. ಈಗ ಪುನಃ ಹೊಸ ಸಿಇಒ ಅವರು 2.50 ಲಕ್ಷ ಖರ್ಚು ಮಾಡಿ, ಸುಣ್ಣ-ಬಣ್ಣ ಹಚ್ಚಿದ್ದಾರೆ ಎಂಬುದು ಸದಸ್ಯರ ಆರೋಪ. ಪ್ರತಿವರ್ಷವೂ ಸಿಇಒ ಮನೆಗಳಿಗೆ ಸುಣ್ಣ-ಬಣ್ಣ ಹಚ್ಚಲು, ಪೀಠೊಪಕರಣ ಖರೀದಿಗೆ ಹಣ ಖರ್ಚು ಮಾಡಲಾಗುತ್ತಿದೆ ಎಂಬುದು ಸಾಮಾನ್ಯ ಆರೋಪವಾಗಿದೆ.

ಎರಡೂ ವಾಹನ 3 ಸಾವಿರ ಕಿಮೀ: ಜಿಲ್ಲಾ ಪಂಚಾಯತ್‌ ಸಿಇಒ ಅವರಿಗಾಗಿ ಎರಡು ಸರ್ಕಾರಿ ಕಾರುಗಳಿವೆ. ಆ ಎರಡೂ ವಾಹನಗಳಿಗೆ ತಿಂಗಳಿಗೆ ತಲಾ 3 ಸಾವಿರ ಕಿಮೀ ಸಂಚಾರ ಮಾಡಿವೆ. ಒಂದು ತಿಂಗಳಲ್ಲಿ ಕನಿಷ್ಠ 5ರಿಂದ 8 ಬಾರಿ ಈ ವಾಹನಗಳು ಬೆಳಗಾವಿಗೆ ಹೋಗಿ ಬರುತ್ತವೆ. ಉನ್ನತ ಮಟ್ಟದ ಸಭೆ, ಸಮಾರಂಭಗಳಿದ್ದಾಗ ಬೇರೆ ಜಿಲ್ಲೆಗಳಿಗೆ ತೆರಳಲು ಅವಕಾಶವಿದೆ. ಆದರೆ, ಎರಡು ವಾಹನಗಳು ಒಟ್ಟು 6 ಸಾವಿರ ಕಿಮೀಯಷ್ಟು ದೂರ ಚಲಿಸಿದ್ದು, ಅವುಗಳಿಗೆ ಸರ್ಕಾರದ ಹಣದಲ್ಲಿ ಇಂಧನ ಬಳಕೆ ಮಾಡಿದ್ದಾರೆ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ.

ಗ್ರಾಮ ವಾಸ್ತವ್ಯಕ್ಕೆ ಎಷ್ಟು ಖರ್ಚು?: ಜಮಖಂಡಿ ತಾಲೂಕಿನ ಮೈಗೂರ ಗ್ರಾಪಂನಲ್ಲಿ ಸಿಇಒ ಮಾನಕರ ಅವರು ಅ.26ರಂದು ಗ್ರಾಮ ವಾಸ್ತವ್ಯ ಮಾಡಿ, ಶೌಚಾಲಯ ಜಾಗೃತಿ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಸಹಿತ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸದಸ್ಯರ ಆರೋಪದ ಪ್ರಕಾರ ಗ್ರಾಪಂ ವಾಸ್ತವ್ಯ ಕಾರ್ಯಕ್ರಮಕ್ಕೆ 1.50 ಲಕ್ಷ ಖರ್ಚು ಮಾಡಲಾಗಿದೆ ಎಂದಾಗಿದೆ. ಆದರೆ, ಗ್ರಾಪಂ ಅಧಿಕಾರಿಗಳು ಹೇಳುವ ಪ್ರಕಾರ 8620 ರೂ. ಗ್ರಾಮ ವಾಸ್ತವ್ಯಕ್ಕೆ ಖರ್ಚಾಗಿದೆ. 

Advertisement

ಅಮಾನತು-8ನೇ ದಿನದಲ್ಲಿ ಪುನಃ ಆದೇಶ: ಸಿಇಒ ಅಧಿಕಾರ ವಹಿಸಿಕೊಂಡ ಬಳಿಕ ಈ ವರೆಗೆ ವಿವಿಧ ಇಲಾಖೆಗಳ 8 ಜನ ಸಿಬ್ಬಂದಿ (ಶಿಕ್ಷಕರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ)ಯನ್ನು ಕರ್ತವ್ಯಲೋಪದಡಿ ಅಮಾನತುಗೊಳಿಸಿದ್ದಾರೆ. ಆದರೆ, ಅಮಾನತುಗೊಳಿಸಿದ 8ನೇ ದಿನಗಳಲ್ಲಿ ಬೇರೆಡೆ ಪುನಃ ನೇಮಕ ಮಾಡಲಾಗಿದೆ. ಹೀಗಾಗಿ ಪುನಃ ನೇಮಕ ಮಾಡಲು ಅವಕಾಶವಿದೆಯೇ ಎಂಬುದು ಸದಸ್ಯರ ಪ್ರಶ್ನೆ.

ನಮ್ಮ ಕ್ಷೇತ್ರದ ಯಾವುದೇ ಸಮಸ್ಯೆ ಹೇಳಿದರೆ 5 ಸಾವಿರ ಮೇಲ್ಪಟ್ಟು ಅನುದಾನದಲ್ಲಿ ಏನೇ ಖರೀದಿ ಮಾಡಬೇಕಿದ್ದರೂ ಜಿಪಂ ಸಾಮಾನ್ಯ ಸಭೆಯ ಅನುಮತಿ ಬೇಕು ಎಂಬುದು ನಿಯಮ ಹೇಳಲಾಗುತ್ತದೆ. ಆದರೆ, 80ರಿಂದ 90 ಸಾವಿರ ಮೊತ್ತದ ಮೊಬೈಲ್‌, ಕ್ಯಾಮರಾ-ಲ್ಯಾಪ್‌ಟಾÂಪ್‌ ಖರೀದಿಗೆ ಸಾಮಾನ್ಯ ಸಭೆಯ ಅನುಮತಿ ಏಕೆ ಪಡೆಯಲ್ಲ. ಈಗ ಜಿಲ್ಲೆಯಲ್ಲಿ ತೀವ್ರ ಬರವಿದೆ. ಆದರೂ ಇಂತಹ ದುಂದುವೆಚ್ಚ ಅಗತ್ಯವೇ?
 ಹೂವಪ್ಪ ರಾಠೊಡ, ಜಿಪಂ ಬಿಜೆಪಿ ಸದಸ್ಯ

ಸರ್ಕಾರಿ ಕಾರ್ಯಕ್ರಮ ನಿಭಾಯಿಸುವಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್‌ ಉಪಕರಣ ಬಳಸಲಾಗುತ್ತಿದೆ. ತಾವು ಬಳಸುವ ಮೊಬೈಲ್‌ 87 ಸಾವಿರ ಮೊತ್ತದ್ದಾಗಿದ್ದು, ಇದು ಕಚೇರಿ ಆಸ್ತಿಯಾಗಿದೆ ಹೊರತು, ನನ್ನ ಸ್ವಂತಕ್ಕೆ ಅಲ್ಲ. ನಿಯಮಾವಳಿ ಪ್ರಕಾರ ಖರೀದಿ ಮಾಡಲಾಗಿದೆ. ಮುಂಬರುವ ಸಿಇಒಗೆ ಹಸ್ತಾಂತರಿಸಲಾಗುತ್ತದೆ.
 ಗಂಗೂಬಾಯಿ ಮಾನಕರ,
ಜಿಪಂ ಸಿಇಒ

ಅಷ್ಟೊಂದು ಬೆಳೆ ಬಾಳುವ ಮೊಬೈಲ್‌ ಅಗತ್ಯ ಇರಲಿಲ್ಲ. ಮೊಬೈಲ್‌ ಖರೀದಿಗೆ ನಿಯಮಾವಳಿ ಪ್ರಕಾರ ಅವಕಾಶವಿದ್ದರೂ ದುಬಾರಿ ವೆಚ್ಚದ ಮೊಬೈಲ್‌ ಏಕೆ ಖರೀದಿ ಮಾಡಬೇಕಿತ್ತು. ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ ಎಂದು ಹೇಳುತ್ತಿದೆ. ಆದರೆ, ನಮ್ಮ ಸಿಇಒ ಅವರು ದುಂದುವೆಚ್ಚ ಮಾಡುತ್ತಿರುವುದು ಎಷ್ಟು ಸರಿ?
ಮುತ್ತಪ್ಪ ಕೋಮಾರ,
ಜಿಪಂ ಉಪಾಧ್ಯಕ್ಷ

ಶ್ರೀಶೈಲ ಕೆ. ಬಿರಾದಾರ 

Advertisement

Udayavani is now on Telegram. Click here to join our channel and stay updated with the latest news.

Next