Advertisement

ಸಿಎಂ ತವರ ಶಾಲೆಗಳೂ ಉತ್ತಮವಾಗಿಲ್ಲ

01:14 PM Jun 26, 2019 | Suhan S |

ರಾಮನಗರ: ಸ್ವತಃ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿನಿಧಿಸುವ ರಾಮನಗರ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸಾಕಷ್ಟು ಸುಧಾರಿಸಿದೆಯಾದರು, ಉತ್ತಮವಾಗೇನು ಇಲ್ಲ ಎಂಬುದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ ಅಂಶಗಳೇ ಸ್ಪಷ್ಟಪಡಿಸುತ್ತಿವೆ.

Advertisement

ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದುರಸ್ತಿ, ಹೆಚ್ಚುವರಿ ಕೊಠಡಿ ನಿರ್ಮಾಣ ಇತ್ಯಾದಿ ಕಾಮಗಾರಿಗೆ ಜಿಲ್ಲಾಡಳಿತ 65 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದೆ. ಜಿಲ್ಲೆಯಲ್ಲಿ 1361 ಸರ್ಕಾರಿ ಶಾಲೆಗಳಿವೆ. ಈ ಪೈಕಿ 807 ಕಿರಿಯ ಪ್ರಾಥಮಿಕ ಶಾಲೆಗಳು, 447 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 107 ಪ್ರೌಢಶಾಲೆಗಳಿವೆ. ಚನ್ನಪಟ್ಟಣ ತಾಲೂಕಿನಲ್ಲಿ 127 ಕಿರಿಯ ಪ್ರಾಥಮಿಕ ಶಾಲೆಗಳು, 98 ಹಿರಿಯ ಪ್ರಾಥಮಿಕ ಶಾಲೆಗಳು, 25 ಪ್ರೌಢಶಾಲೆಗಳು ಒಟ್ಟು 250 ಸರ್ಕಾರಿ ಶಾಲೆಗಳಿವೆ.

ಕನಕಪುರ ತಾಲೂಕಿನಲ್ಲಿ 279 ಕಿರಿಯ ಪ್ರಾಥಮಿಕ ಶಾಲೆಗಳು, 136 ಹಿರಿಯ ಪ್ರಾಥಮಿಕ ಶಾಲೆಗಳು, 35 ಪ್ರೌಢಶಾಲೆಗಳು ಒಟ್ಟು 450 ಸರ್ಕಾರಿ ಶಾಲೆಗಳಿವೆ. ಮಾಗಡಿ ತಾಲೂಕಿನಲ್ಲಿ 240 ಕಿರಿಯ ಪ್ರಾಥಮಿಕ ಶಾಲೆಗಳು, 112 ಹಿರಿಯ ಪ್ರಾಥಮಿಕ ಶಾಲೆಗಳು, 21 ಪ್ರೌಢಶಾಲೆಗಳು ಒಟ್ಟು 373 ಸರ್ಕಾರಿ ಶಾಲೆಗಳಿವೆ. ರಾಮನಗರ ತಾಲೂಕಿನಲ್ಲಿ 161 ಕಿರಿಯ ಪ್ರಾಥಮಿಕ ಶಾಲೆಗಳು, 101 ಹಿರಿಯ ಪ್ರಾಥಮಿಕ ಶಾಲೆಗಳು, 26 ಪ್ರೌಢಶಾಲೆಗಳು ಒಟ್ಟು 288 ಸರ್ಕಾರಿ ಶಾಲೆಗಳಿವೆ.

127 ಶಾಲೆಗಳಲ್ಲಿ ಶೌಚಾಲಯವಿಲ್ಲ: ಒಟ್ಟು ಸರ್ಕಾರಿ ಶಾಲೆಗಳ ಪೈಕಿ 600 ಶಾಲೆಗಳಲ್ಲಿ ವಿವಿಧ ದುರಸ್ತಿ ಕಾಮಗಾರಿಗಳು ಆಗಬೇಕಾಗಿದೆ. 127 ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆಯಾಗಬೇಕಾಗಿದೆ. 309 ಶಾಲೆಗಳಲ್ಲಿ ಕೊಠಡಿಗಳು ಮರು ನಿರ್ಮಾಣವಾಗಬೇಕಾಗಿದೆ. 64 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬೇಕಾಗಿದೆ. 95 ಹೆಚ್ಚುವರಿ ಕೊಠಡಿಗಳು ಬೇಕಾಗಿವೆ. 9 ಪ್ರೌಢಶಾಲೆಗಳಲ್ಲಿ ಕೊಠಡಿಗಳನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸಬೇಕಾಗಿದೆ. ಈ ಕಾಮಗಾರಿಗೆ ಅಂದಾಜು 65 ಕೋಟಿ ರೂ. ಬೇಕು ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾಕ್ಕೆ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿದೆ.

ಕಾಮಗಾರಿ ಆರಂಭವಾಗಲಿ: 2018-19ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಥಿಲಗೊಂಡಿರುವ ಕೊಠಡಿಗಳನ್ನು ನೆಲಸಮಗೊಳಿಸ ಮರು ನಿರ್ಮಾಣ ಕಾಮಗಾರಿಗೆ ಚನ್ನಪಟ್ಟಣ ಮತ್ತು ಕನಕಪುರ ತಾಲೂಕುಗಳ ತಲಾ ಒಂದು ಶಾಲೆಗೆ ಒಟ್ಟು 21 ಲಕ್ಷ ರೂ. ಬಿಡುಗಡೆಯಾಗಿದ್ದು, ಹಣ ಸಂಪೂರ್ಣ ಬಳಕೆಯಾಗಿದೆ. ಇದೇ ಸಾಲಿನಲ್ಲಿ 16 ಶಾಲಾ ಕೊಠಡಿಗಳ ದುರಸ್ತಿಗಾಗಿ 32 ಲಕ್ಷ ರೂ. ಅನುದಾನ ನಿಗದಿಯಾಗಿತ್ತಾದರು, 24 ಲಕ್ಷ ರೂ ಬಿಡುಗಡೆಯಾಗಿತ್ತು. ಈ ಪೈಕಿ 16.85 ಲಕ್ಷ ರೂ. ವೆಚ್ಚವಾಗಿದ್ದು, ಉಳಿದ ಕಾಮಗಾರಿ ಪ್ರಗತಿಯಲ್ಲಿದೆ. ಇದೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಥಿಲಗೊಂಡಿರುವ 8 ಬೋಧನಾ ಕೊಠಡಿಗಳನ್ನು ನೆಲಸಮ ಮಾಡಿ ಮರು ನಿರ್ಮಾಣಕ್ಕೆ 126 ಲಕ್ಷ ರೂ. ನಿಗದಿಯಾಗಿತ್ತು. ಈ ಪೈಕಿ 63 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. 10 ಲಕ್ಷ ರೂ. ವೆಚ್ಚವಾಗಿದ್ದು, ಕೆಲವೆಡೆ ಕಾಮಗಾರಿಗಳು ಆರಂಭವಾಗಬೇಕಾಗಿದೆ.

Advertisement

ಕೊಠಡಿಗಳ ನಿರ್ಮಾಣಕ್ಕೆ ಅನುದಾನದ ಕೊರತೆ: 2018-19ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಪ್ರಢಶಾಲೆಗಳಲ್ಲಿ 230 ಕೊಠಡಿಗಳ ನಿರ್ಮಾಣಕ್ಕೆ 1108 ಲಕ್ಷ ರೂ. ನಿಗದಿಯಾಗಿತ್ತು. ಆದರೆ, ಈ ಪೈಕಿ ಬಿಡುಗಡೆಯಾಗಿದ್ದು 285.85 ಲಕ್ಷ ರೂ. ಮಾತ್ರ. 75.85 ಲಕ್ಷ ರೂ. ವೆಚ್ಚವಾಗಿದೆ. ಕೆಲವು ಶಾಲೆಗಳಲಿ ಕಾಮಗಾರಿ ಇನ್ನಷ್ಟೇ ಆರಂಭಿಸಬೇಕಾಗಿದೆ.

ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲೆಯಲ್ಲಿ ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಮಹದಾಸೆ ಹೊಂದಿದ್ದಾರೆ. ಹಿಂದಿನ ಬಾರಿ ಅವರು ಸಿಎಂ ಆಗಿದ್ದ ವೇಳೆ ಜಿಲ್ಲೆಗೆ ಸಾಕಷ್ಟು ಹೊಸ ಸರ್ಕಾರಿ ಶಾಲೆಗಳು ಮಂಜೂರಾಗಿದ್ದವು. ಆದರೆ, ಇವುಗಳ ನಿರ್ವಹಣೆ, ದುರಸ್ತಿ ಇತ್ಯಾದಿಗಳ ವಿಷಯದಲ್ಲಿ ಅವರು ಇದೀಗ ಅದೇ ಹುರುಪು ತುಂಬಿಸಿಕೊಂಡು ಅನುದಾನವನ್ನು ಬಿಡಗಡೆ ಮಾಡಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.

ಜಿಲ್ಲೆಯ ಕನಕಪುರ ತಾಲೂಕು ಕಬ್ಟಾಳು ಬಳಿಯ ಕಂಸಾಗರ ಗ್ರಾಮದ ಸರ್ಕಾರಿ ಶಾಲೆ ತೀರಾ ಶಿಥಲವಾಗಿರುವ ಎರಡು ಕೊಠಡಿಗಳ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಿಸಿಕೊಡುವಂತೆ ನಾಗರಿಕರು 2-3 ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆ ಗ್ರಾಮದ ಜನರು ದೂರಿದ್ದಾರೆ.

10 ವರ್ಷಗಳ ಹಿಂದೆ ಈ ಶಾಲೆಗೆ ಹೆಚ್ಚುವರಿ ಕೊಠಡಿಗಳು ನಿರ್ಮಾಣವಾಗಿವೆ. ಆದರೆ, ಅವುಗಳ ಸ್ಥಿತಿಯೂ ಸರಿಯಾಗಿಲ್ಲ. ತೀರಾ ಹಳೆಯದಾಗಿರುವ ಕೊಠಡಿಗಳನ್ನು ಕೆಡವಿ ಹೊಸ ಕೊಠಡಿಗಳನ್ನು ನಿರ್ಮಿಸಿ ಕೊಡಿ ಎಂದು ಗೋಗೆರದರು ಕೇಳುವ ಕಿವಿಗಳೇ ಇಲ್ಲ ಎಂದು ನಾಗರಿಕರು ಹರಿಹಾಯ್ದಿದ್ದಾರೆ.

ಬಿರುಕು ಬಿಟ್ಟಿವೆ ಗೋಡೆಗಳು: ಗೋಡೆಗಳು ಬಿರುಕು ಬಿಟ್ಟಿವೆ. ಹೆಂಚಿನ ಹೊದಿಕೆ ಇರುವ ಮೇಲ್ಛಾವಣಿ ಸೋರುತ್ತಿದೆ. 1964ರಲ್ಲಿ ನಿರ್ಮಿಸಿದ್ದು ಎನ್ನಲಾದ ಈ ಕೊಠಡಿಗಳಲ್ಲಿ ಈಗಲೂ ಪಾಠ-ಪ್ರವಚನಗಳು ನಡೆಯುತ್ತಿದೆ. ಮಳೆ ಬಂದಾಗಲಂತೂ ಆತಂಕ ಹೆಚ್ಚಾಗುತ್ತದೆ ಎಂದು ಕೆಲವು ಪೋಷಕರು ತಿಳಿಸಿದ್ದಾರೆ.

ಗ್ರಾಮ ಪಂಚಾಯ್ತಿ, ತಾಲೂಕು ಆಡಳಿತ, ಜಿಲ್ಲಾಡಳಿತಗಳ ಗಮನ ಸೆಳೆದರು ಉಪಯೋಗವಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಶಿಥಿಲವಾಗಿರುವ ಕೊಠಡಿಗಳ ಮರು ನಿರ್ಮಾಣಕ್ಕೆ ಪುನಹ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಶಾಲೆಯ ಶಿಕ್ಷಕರು ತಿಳಿಸಿದ್ದಾರೆ.

 

● ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next