ಮೈಸೂರು: ಚೌಕ ಚಿತ್ರದ ಅಲ್ಲಾಡ್ಸ್.. ಅಲ್ಲಾಡ್ಸ್ ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡ್ಯಾನ್ಸ್ ಮಾಡಿದ್ದಾರೆ ಎಂದು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ರಾತ್ರೋರಾತ್ರಿ ಹವಾ ಸೃಷ್ಟಿಸಿದ ಚನ್ನಮಾಯಿ ಗೌಡ (ಜೂನಿಯರ್ ಸಿದ್ದರಾಮಯ್ಯ), ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಿದ್ಧತೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರಷ್ಟು ಎತ್ತರ ಇಲ್ಲದಿದ್ದರೂ ಸಿದ್ದರಾಮಯ್ಯ ಅವರಂತೆ ಮುಖ ಭಾವ ಹೊಂದಿರುವ ಚನ್ನಮಾಯಿ
ಗೌಡ, ಮುಖದ ಮೇಲೆ ಕುರುಚಲು ಗಡ್ಡ, ಎಡಗೈನಲ್ಲಿ ಚಿನ್ನದ ಬಣ್ಣದ ವಾಚು, ಕನ್ನಡಕ, ವೇಷಭೂಷಣ, ಹಾವ-ಭಾವದಲ್ಲಿ ಸಿದ್ದರಾಮಯ್ಯ ಅವರನ್ನು ಅನುಕರಿಸುತ್ತಾರೆ.
ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿ ಮಾಕನಹಳ್ಳಿಯ ಚನ್ನಮಾಯಿ ಗೌಡರದು ಕೃಷಿಕ ಕುಟುಂಬ. ನಾಲ್ಕನೇ ತರಗತಿವರೆಗೆ ಓದಿರುವ ಇವರು, ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಹಣ್ಣು-ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. ಜತೆಗೆ ನಾಟಿ ಹಸುಗಳನ್ನು ಸಾಕಿ ದೇಸಿ ತಳಿಯ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಇಟ್ಟಿಗೆ ಕಾರ್ಖಾನೆಯೂ ಇದೆ. ಮಗಳನ್ನು ಮದುವೆ ಮಾಡಿಕೊಟ್ಟಿದ್ದು, ಪಿಯುಸಿವರೆಗೆ ಓದಿರುವ ಮಗ ಕೃಷಿ, ಇಟ್ಟಿಗೆ ಕಾರ್ಖಾನೆ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ.
ಬಾಲ್ಯದಿಂದಲೇ ಬಣ್ಣದ ಗೀಳು: ಚನ್ನ ಮಾಯಿಗೌಡರಿಗೆ ಬಾಲ್ಯದಿಂದಲೇ ಬಣ್ಣದ ಗೀಳು. ಊರಲ್ಲಿ ನಡೆಯುವ ಪೌರಾಣಿಕ ನಾಟಕಗಳಿಗೆ ಬಣ್ಣ ಹಚ್ಚಿ ಕುಣಿದಿದ್ದಾರೆ. ಜತೆಗೆ ಮೂರು ಸಿನಿಮಾಗಳಿಗೂ ಇವರು ಬಣ್ಣ ಹಚ್ಚಿದ್ದಾರೆ. ತಿಕ್ಲು-ಪುಕ್ಲು ಚಿತ್ರದಲ್ಲಿ ಮಾಡ್ರನ್ ಗೌಡ, ವೀರಾಪುರದ ವೀರಮಾಸ್ತಿ ಚಿತ್ರದಲ್ಲಿ ಊರ ಯಜಮಾನ, ಕರಾಳರಾತ್ರಿ
ಚಿತ್ರದಲ್ಲಿ ಎಂ.ಎಲ್.ಎ. ಪಾತ್ರ ಮಾಡಿದ್ದೇನೆ ಎನ್ನುತ್ತಾರೆ ಚನ್ನಮಾಯಿಗೌಡರು.
ಸಿಎಂ ವಿರುದ್ಧ ಸ್ಪರ್ಧಿಸುತ್ತೇನೆ: ಕೃಷಿಯ ಜತೆಗೆ ಸ್ಥಳೀಯವಾಗಿ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದೇನೆ. 2013ರ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ವರುಣಾ ಕ್ಷೇತ್ರದ ಟಿಕೆಟ್ ಕೇಳಿದೆ, ಕೊಡಲಿಲ್ಲ. ಪಕ್ಷೇತರನಾಗಿಯೇ ಕ್ಯಾರೆಟ್ ಚಿಹ್ನೆಯಡಿ ಚುನಾವಣೆ ಎದುರಿಸಿದೆ. ನಂತರ ಬಿಜೆಪಿ ಪಕ್ಷದಲ್ಲಿ ಓಡಾಡಿದೆ. ಅವರ್ಯಾಕೋ ಸರಿಯಾಗಿ ಗುರುತಿಸಲಿಲ್ಲ. ಹೀಗಾಗಿ ಅಲ್ಲಿಂದ ಹೊರಬಂದು ನನ್ನದೇ ಜನ ಸಾಮಾನ್ಯರ ಪಕ್ಷ ಎಂದುಕೊಂಡು ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರನಾಗಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತೇನೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತೇನೆ ಎಂದರೆ, ಅವರನ್ನು ಸೋಲಿಸಬೇಕು ಎಂಬ ದೃಷ್ಟಿಯಿಂದಲ್ಲ. ಅವರ ಮೇಲಿನ ಪ್ರೀತಿಯಿಂದ. ಹೆಸರು ಮಾಡಲು ಅವರ ವಿರುದ್ಧ ಸ್ಪರ್ಧಿಸುತ್ತೇನೆ.
ಸಿದ್ದರಾಮಯ್ಯ ಅವರನ್ನು ಈವರೆಗೆ ನೇರವಾಗಿ ಮಾತನಾಡಿಸಿಲ್ಲ. ನಾನೇನು ಅವರಂತೆ ಡ್ರೆಸ್ ಮಾಡುತ್ತಿಲ್ಲ. ಹಿಂದಿನಿಂದಲೂ ಬೆಲೆಬಾಳುವ ಬಟ್ಟೆಗಳನ್ನೇ ಧರಿಸುತ್ತಿದ್ದೆ, ಈಗ ಆರು ವರ್ಷದಿಂದ ಜುಬ್ಟಾ ಹಾಕುತ್ತಿದ್ದೇನೆ ಎನ್ನುತ್ತಾರೆ.
ಗಿರೀಶ್ ಹುಣಸೂರು