ಶಿಕ್ಷಣದ ಮೇಲೆ ಕೋವಿಡ್ ಕರಾಳ ಪರಿಣಾಮ ಬೀರಿದೆ. ಮಕ್ಕಳು ಶಾಲೆಯ ಚಹರೆಯನ್ನೇ ಮರೆತು ಬಿಡುವಷ್ಟು ಕಾಡಿದ ಕೋವಿಡ್ ,ಶಿಕ್ಷಣದಿಂದ ಮಕ್ಕಳನ್ನು ದೂರವಿಡುವಂತೆ ಮಾಡಿತ್ತು.
ಸರ್ಕಾರ ಇದಕ್ಕೆ ಆನ್ಲೈನ್ ಶಿಕ್ಷಣ ಪರಿಹಾರವಾಗಬಹುದೆನ್ನುವ ನಿಟ್ಟಿನಲ್ಲಿ ಆನ್ಲೈನ್ ತರಗತಿಯನ್ನು ನಡೆಸಲು ಅನುಮತಿ ನೀಡಿತು. ಒಂದಷ್ಟು ದಿನ ಆನ್ಲೈನ್ ತರಗತಿಗಳು ನಡೆಯಿತು. ಆದರೆ ಒಂದಿಷ್ಟು ಕಡೆಗಳಲ್ಲಿ ಮಾತ್ರ. ಎಲ್ಲರಿಗೂ ಆನ್ಲೈನ್ ಶಿಕ್ಷಣವನ್ನು ಸರಾಗವಾಗಿ ಪಡೆಯಲು ಸಾಧ್ಯವಾಗಿಲ್ಲ.
ಹಳ್ಳಿಗಾಡಿನ ಮಕ್ಕಳು, ಬಡವರು, ನೆಟ್ವರ್ಕ್ ಇಲ್ಲದ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣದಿಂದ ವಿದ್ಯೆಯನ್ನು ಮುಂದುವರೆಸಲು ಆಗಿಲ್ಲ. ಆ ಕಾರಣಕ್ಕಾಗಿ ಅವರ ಶಿಕ್ಷಣ ಒಂದಿಷ್ಟು ಬದಿಗೆ ಸರಿಯಿತು.
ಕೆಲ ಶಿಕ್ಷಕರೇ ಹಾಗೆ ವಿದ್ಯಾರ್ಥಿಗಳು ಎಷ್ಟೇ ದಡ್ಡರಿದ್ದರು, ತಮ್ಮ ಸರ್ವ ಪ್ರಯತ್ನವನ್ನು ಆತನ ಮೇಲೆ ಹಾಕಿ, ಆತನಲ್ಲಿ/ಅವಳಲ್ಲಿ ವಿದ್ಯೆಯ ಮೊಳಕೆಯನ್ನು ಹಾಕಿ ಚಿಗುರಿಸುವ ಕಾಯಕವನ್ನು ಕೊನೆಯವರೆಗೂ ಮಾಡುತ್ತಲೇ ಇರುತ್ತಾರೆ.
ಪಶ್ಚಿಮ ಬಂಗಾಳದ, ಪಶ್ಚಿಮಾ ವರ್ಧಾಮಾನ್ ಜಿಲ್ಲೆಯ ಜೋಬಾ ಅಟ್ಪರಾಯೆಂಬ ಆದಿವಾಸಿ ಗ್ರಾಮದ ಏಕೈಕ ಶಾಲೆಯ ಶಿಕ್ಷಕ 34 ವರ್ಷದ ದೀಪ್ ನಾರಾಯಣ್ ನಾಯಕ್.
ಗ್ರಾಮದಲ್ಲಿ 2020 ರ ಮಾರ್ಚ್ ನಲ್ಲಿ ಮುಚ್ಚಿದ ಶಾಲೆಯ ಬಾಗಿಲು ಇನ್ನು ತೆರೆಯದೆ ಹಾಗೆಯೇ ಇದೆ. ಆನ್ಲೈನ್ ಶಿಕ್ಷಣವನ್ನು ಪಡೆದು ಒಂದಷ್ಟು ಮಕ್ಕಳು ತಮ್ಮ ಕಲಿಕೆಯನ್ನು ಮುಂದುವರೆಸಿದ್ದಾರೆ. ಆದರೆ ಯಾವ ಶಿಕ್ಷಣವನ್ನು ಪಡೆಯದೆ ಹಾಗೆಯೇ ಉಳಿದ ಮಕ್ಕಳು ಸುಮಾರು ಇದ್ದಾರೆ. ಅವರು ಬಡ ವರ್ಗದ, ಕೂಲಿ ಕಾರ್ಮಿಕರ ಮಕ್ಕಳು. ಶಾಲೆಯ ಶಿಕ್ಷಣವೇ ನಾಳಿನ ಭರವಸೆ ಅಂದುಕೊಂಡಿರುವ ಮಕ್ಕಳಿಗೆ ಶಾಲೆ ಬಂದ್ ಆಗಿರೋದು, ನುಂಗಲಾರದ ನೋವು ಆಗಿ ದಿನನಿತ್ಯ ಕಾಡುತ್ತದೆ.
ಈ ಕಷ್ಟವನ್ನು ಅರಿತ ಶಿಕ್ಷಕ ದೀಪ್ ನಾರಾಯಣ್ ಎಲ್ಲರಿಗೂ ಮೆಚ್ಚುಗೆಯಾಗುವ ಹೊಸ ಬಗೆಯ ಸಾಹಸದ, ಸಾಧನೆಯೊಂದರತ್ತ ಹೆಜ್ಜೆ ಇಡುತ್ತಾರೆ. ಆಚೆ ಈಚೆ ಮನೆ ಮಧ್ಯದಲ್ಲಿ ರಸ್ತೆ, ಸುಂದರವಾದ ಮನೆಗಳ ಗೋಡೆಗಳು. ಇವುಷ್ಟೇ ಸಾಕಿತ್ತು. ದೀಪ್ ಹೊಸ ಯೋಜನೆಗೆ.
ಆದಿವಾಸಿ ಗ್ರಾಮದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದೆನ್ನುವ ಉದ್ದೇಶದೊಂದಿಗೆ, ದೀಪ್ ಎಲ್ಲಾ ಮಕ್ಕಳನ್ನು ಅವರವರ ಮನೆಯ ಜಗಲಿಯಲ್ಲಿ ಕೂರಿಸಿ, ಮಣ್ಣಿನ ರಸ್ತೆ ಮಧ್ಯದಲ್ಲಿ ನಿಂತು ಜೋರಾಗಿ ಶಾಲೆಯ ಪಾಠವನ್ನು ವಿವರಿಸಿ ಹೇಳುತ್ತಾರೆ. ಇಷ್ಟು ಮಾತ್ರವಲ್ಲದೇ ಶಾಲೆಯಲ್ಲಿನ ಕಪ್ಪು ಬೋರ್ಡಿನ ಅಕ್ಷರಗಳನ್ನು, ಮನೆಯ ಗೋಡೆಗಳಿಗೆ ಕಪ್ಪು ಬಣ್ಣ ಹಚ್ಚಿ, ಗೋಡೆಗಳನ್ನೇ ಬೋರ್ಡ್ ಆಗಿಸಿ, ಅವುಗಳ ಅಕ್ಷರಗಳನ್ನು ಬರೆದು ಮಕ್ಕಳೊಂದಿಗೆ ಆತ್ಮೀಯ ಶಿಕ್ಷಕನಾಗಿ ಬೆರೆಯುತ್ತಾರೆ.
ಪ್ರತಿನಿತ್ಯ ಬೆಳಿಗ್ಗೆ ಎಲ್ಲರಿಗೂ ಮಾಸ್ಕ್ ಕೊಟ್ಟು, ಸ್ಯಾನಿಟೈಸರ್ ಹಾಕಿಸಿ ರಸ್ತೆಯ ಮಧ್ಯ ನಿಂತು ಪಾಠ ಶುರು ಮಾಡುತ್ತಾರೆ.
ಆನ್ಲೈನ್ ಶಿಕ್ಷಣವಿಲ್ಲದಿದ್ರು, ತನ್ನ ಲ್ಯಾಪ್ ಟಾಪ್, ಮೊಬೈಲ್ ನಿಂದ ಪಾಠವನ್ನು ಹೇಗೆ ಹೇಳಿ ಕೊಡುತ್ತಾರೆ ಎನ್ನುವುದನ್ನು ಹೇಳುತ್ತಾರೆ. ಕೋವಿಡ್ ಸಮಯದಲ್ಲಿ ಹೇಗೆ ಇರಬೇಕು, ಆರೋಗ್ಯವನ್ನು ಹೇಗೆ ನೋಡಿಕೊಳ್ಳಬೇಕೆಂದು ಹೇಳುತ್ತಾರೆ.
ಇವರನ್ನು ‘ರಸ್ತಾ ಮಾಸ್ಟರ್’ ( ರಸ್ತೆಯ ಶಿಕ್ಷಕ) ಎಂದು ಕರೆಯುತ್ತಾರೆ. ಇವರು ಸಮಾರು 40 ಕ್ಕೂ ಹೆಚ್ಚಿನ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾರೆ. ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಲು ಗ್ರಾಮದ ಜನರಲ್ಲಿ ಅರಿವನ್ನು ಮೂಡಿಸುತ್ತಿದ್ದಾರೆ.
-ಸುಹಾನ್ ಶೇಕ್