ಮೈಸೂರು: ಮೇಲ್ಜಾತಿಯವರಿಗೆ ಶೇ.10ರಷ್ಟು ಮೀಸಲಾತಿ ಕೊಡಲು ತೋರುವ ಅತುರವನ್ನು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲು ಕೊಡಲು ತೋರುವುದಿಲ್ಲ ಎಂದು ಚಿಂತಕ ಸಿ.ಎಸ್.ದ್ವಾರಕನಾಥ್ ಹೇಳಿದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ಲಿಂಗ ಸಮಾನತೆ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲಿಂಗ ಸಮಾನತೆ ಮತ್ತು ಸಂವಿಧಾನ ವಿಷಯ ಕುರಿತು ಆಶಯ ನುಡಿಗಳನ್ನಾಡಿದ ಅವರು, ಸಂವಿಧಾನವನ್ನು ಸರಿಯಾಗಿ ಅನುಷ್ಠಾನಕ್ಕೆ ತಂದು ಮಹಿಳೆಯರಿಗೆ ದೊರಕಬೇಕಾದ ಹಕ್ಕುಗಳನ್ನು ತಲುಪಿಸಿದ್ದರೆ ಇಂದು ಸಮಾನತೆ ಸಿಗುತ್ತಿತ್ತು ಎಂದರು.
ಲಿಂಗ ಸಮಾನತೆಯಲ್ಲಿ ಜಗತ್ತಿನ 131 ರಾಷ್ಟ್ರಗಳಲ್ಲಿ ಭಾರತ 101ನೇ ಸ್ಥಾನದಲ್ಲಿದೆ. ಜಗತ್ತಿನ ಎಲ್ಲಾ ಧರ್ಮಶಾಸ್ತ್ರಗಳು ಮಹಿಳೆಯರಿಗೆ ಮೋಸ ಮಾಡಿವೆ. ಮಹಿಳಾ ಸಮಾನತೆ ಬಗ್ಗೆ ಮೊದಲು ಮಾತಾಡಿದವರು ಬುದ್ಧ, ನಂತರ ಬಸವಾದಿ ಶರಣರು. ಕಾನೂನಿನ ಮೂಲಕ ಮಹಿಳಾ ಸಮಾನತೆಗಾಗಿ ದುಡಿದವರು ಡಾ.ಬಿ.ಆರ್.ಅಂಬೇಡ್ಕರ್. ಹೀಗಾಗಿ ಅಂಬೇಡ್ಕರ್ ಮೊದಲ ಮಹಿಳಾವಾದಿ ಎಂದು ಹೇಳಿದರು.
ಲಿಂಗ(ಅ) ಸಮಾನತೆ: ನನ್ನ ಅನುಭವಗಳು ವಿಷಯ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಎ.ರೇವತಿ, ಲಿಂಗ ಅಸಮಾನತೆಯನ್ನು ಪ್ರಶ್ನೆ ಮಾಡುವವರಿಗೆ ಈ ಸಮಾಜ ಗೌರವ ಕೊಡುವುದಿಲ್ಲ, ಕೊಲೆಯೂ ಮಾಡುತ್ತದೆ ಎಂದರು.
ಹುಡುಗನಾಗಿದ್ದ ನನ್ನಲ್ಲಿ ಹೆಣ್ಣಿನ ಭಾವನೆಗಳು ಮೂಡಿದ್ದೇ ತಪ್ಪಾ? ಹೆಣ್ಣು ಮಕ್ಕಳಿಗೆ ಸರಿಯಾದ ಶೌಚಾಲಯವಿಲ್ಲದ ಸಮಾಜದಲ್ಲಿ ಬದುಕುತ್ತಿರುವ ನಾವು ಸಮಾನತೆಯನ್ನು ಬಯಸುವುದು ಹೇಗೆ ಎಂದು ಪ್ರಶ್ನಿಸಿದರು.