ಶಿವಪುರಿ : ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಅಂಗನವಾಡಿ ಕೇಂದ್ರವೊಂದರಲ್ಲಿ ಚಿಣ್ಣರಿಗೆ ಬಿಸಿಯೂಟ ತಯಾರು ಮಾಡುತ್ತಿರುವುದು ಎಲ್ಲಿ ಗೊತ್ತೇ? ಶೌಚಾಲಯ ಕೋಣೆಯಲ್ಲಿ! ಇಲ್ಲಿ ತಯಾರಿಸಲಾಗುವ ಬಿಸಿಯೂಟವನ್ನೇ ಈ ಅಂಗನವಾಡಿಯಲ್ಲಿಉವ ಮಕ್ಕಳು ಪ್ರತೀದಿನ ಊಟ ಮಾಡುತ್ತಿದ್ದಾರೆ ಎಂಬುವುದನ್ನು ನಂಬಲೂ ಕಷ್ಟವಾಗುತ್ತದೆ ಅಲ್ಲವೇ?
ಆದರೆ ನೀವಿದನ್ನು ನಂಬಲೇಬೇಕು. ಈ ಅಂಗನವಾಡಿ ಕೇಂದ್ರದಲ್ಲಿರುವ ಶೌಚಾಲಯ ಕೊಠಡಿಯನ್ನು ಬಿಸಿಯೂಟ ತಯಾರಿಸುವ ಅಡುಗೆ ಕೋಣೆಯನ್ನಾಗಿ ಮಾರ್ಪಾಡಿಸಿಕೊಳ್ಳಲಾಗಿದೆ.
ಇಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಕಟ್ಟಿಗೆ ಒಲೆಯನ್ನೂ ಸಹ ಒದಗಿಸಲಾಗಿದೆ ಮತ್ತು ಕೆಲವೊಂದು ಅಡುಗೆ ಪರಿಕರಗಳನ್ನೂ ಸಹ ಟಾಯ್ಲೆಟ್ ಸೀಟ್ ಮೇಲೆ ಇರಿಸಿರುವುದೂ ಕಂಡುಬಂದಿದೆ. ಎ.ಎನ್.ಐ. ಸುದ್ದಿಸಂಸ್ಥೆ ಈ ವಿಚಾರನ್ನು ಬಹಿರಂಗಗೊಳಿಸಿದೆ.
ಇದಕ್ಕಿಂತಲೂ ಆಘಾತಕಾರಿ ವಿಚಾರವೆಂದರೆ ಈ ವಿಷಯದ ಕುರಿತಾಗಿ ಮಧ್ಯಪ್ರದೇಶದ ಸಚಿವೆಯೊಬ್ಬರು ಉಡಾಫೆಯಾಗಿ ಪ್ರತಿಕ್ರಿಯೆ ನೀಡಿರುವುದು. ಈ ವಿಚಾರದ ಕುರಿತಾಗಿ ಪ್ರತಿಕ್ರಿಯಿಸುತ್ತಾ ಸಚಿವೆ ಇಮಾರ್ತಿ ದೇವಿ ಹೆಳಿದ್ದೇನು ಗೊತ್ತೇ? ‘ಏನೂ ತೊಂದರೆ ಇಲ್ಲ!’, ಶೌಚಾಲಯ ಸೀಟ್ ಮತ್ತು ಅಡುಗೆ ತಯಾರಿಸುವ ಸ್ಥಳದ ನಡುವೆ ಒಂದು ತಡೆ ಇದ್ದಲ್ಲಿ ಈ ರೀತಿಯಾಗಿ ಶೌಚಾಲಯ ಕೋಣೆಯಲ್ಲಿ ಬಿಸಿಯೂಟ ತಯಾರಿಸುವುದು ತಪ್ಪಲ್ಲ ಎಂದು ಸಚಿವೆ ದೇವಿ ಉಡಾಫೆಯ ಉತ್ತರ ನೀಡಿದ್ದಾರೆ.
ನಮ್ಮ ಮನೆಗಳಲ್ಲೂ ಮನೆಯೊಳಗೇ ಬಾತ್ ರೂಂ ಮತ್ತು ಶೌಚಾಲಯಗಳಿರುವುದಿಲ್ಲವೇ? ಹಾಗೆಂದು ಮನೆಗೆ ಬಂದ ನೆಂಟರು ನಿಮ್ಮ ಮನೆಯಲ್ಲಿ ಊಟ ಮಾಡುವುದಿಲ್ಲ ಎಂದು ಹೆಳಲಾಗುತ್ತದೆಯೇ? ಎಂಬ ವಿಚಿತ್ರ ವಾದವನ್ನು ಸಚಿವೆ ಪತ್ರಕರ್ತರ ಮುಂದಿಟ್ಟಿದ್ದಾರೆ.
ರಾಜ್ಯದ ಇನ್ನೆಷ್ಟು ಕಡೆಗಳಲ್ಲಿ ಈ ರೀತಿಯಾಗಿ ಶೌಚಾಲಯ ಕೋಣೆಯನ್ನು ಬಿಸಿಯೂಟ ತಯಾರಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಚಾರ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.