ಅಲಪ್ಪುಝ: ಕೋವಿಡ್ 19 ವೈರಸ್ ವಿಶ್ವವ್ಯಾಪಿಯಾಗಿ ಹಬ್ಬಿರುವ ಈ ಸಂದರ್ಭದಲ್ಲಿ ಈ ಮಹಾಮಾರಿ ಸಾಂಕ್ರಾಮಿಕವಾಗುವುದನ್ನು ತಡೆಗಟ್ಟಲು ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ಕಟ್ಟುನಿಟ್ಟಿನ ಲಾಕ್ ಡೌನ್ ಮೊರೆ ಹೋಗಿವೆ.
ಈ ಸಂದರ್ಭದಲ್ಲಿ ಕ್ವಾರೆಂಟೈನ್, ಸುರಕ್ಷಾ ಸಾಧನಗಳನ್ನು ಧರಿಸಿಕೊಳ್ಳುವುದು ಹಾಗೂ ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಈ ವೈರಸ್ ಸಾಂಕ್ರಾಮಿಕವಾಗಿ ಹಬ್ಬುವುದನ್ನು ತಡೆಗಟ್ಟಬಹುದಾಗಿರುತ್ತದೆ.
ಹೇಳಿಕೇಳಿ ಭಾರತದಲ್ಲಿ ಜನಸಂಖ್ಯಾ ಪ್ರಮಾಣವೂ ಹೆಚ್ಚು ಹಾಗೂ ಜಸಾಂದ್ರತೆಯೂ ಹೆಚ್ಚು. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ.
ಇದಕ್ಕೊಂದು ಸರಳ ಪರಿಹಾರವನ್ನು ನಮ್ಮ ನೆರೆ ರಾಜ್ಯ ಕೇರಳ ಇದೀಗ ಕಂಡುಕೊಂಡಿದೆ. ಅದೇನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಕೊಡೆಗಳ (ಛತ್ರಿ) ಬಳಕೆ! ಹೌದು, ಜನರು ಸಾರ್ವಜನಿಕ ಸ್ಥಳಗಳಲ್ಲಿ ಕೊಡೆಗಳನ್ನು ಬಿಡಿಸಿಕೊಂಡು ನಿಲ್ಲುವುದರಿಂದ ಸೂಕ್ತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳು ಸಾಧ್ಯ ಎಂಬುದನ್ನು ಕೇರಳದ ಅಲಪ್ಪುಝ ಜಿಲ್ಲೆಯ ಥನೀರ್ ಮುಕ್ಕೊಂ ಪಂಚಾಯತ್ ವ್ಯಾಪ್ತಿಯಲ್ಲಿ ಸಾಧಿಸಿ ತೋರಿಸಲಾಗಿದೆ.
Related Articles
ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಅಲಪ್ಪುಝಾದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿತ್ತು. ಈ ಸಂದರ್ಭದಲ್ಲೇ ಕೇರಳ ಹಣಕಾಸು ಸಚಿವರಾಗಿರುವ ಥೋಮಸ್ ಐಸಾಕ್ ಅವರು ಸಾಮಾಜಿಕ ಅಂತರ ಕಾಪಾಡಲು ಈ ‘ಛತ್ರಿ’ ಐಡಿಯಾ ನೀಡಿದರು.
ಇಬ್ಬರು ವ್ಯಕ್ತಿಗಳು ಎರಡು ಛತ್ರಿಗಳನ್ನು ಬಿಡಿಸಿಕೊಂಡು ನಿಂತರೆ ಅವರ ನಡುವೆ ಕನಿಷ್ಟ ಒಂದು ಮೀಟರ್ ನಷ್ಟು ಅಂತರ ಸೃಷ್ಟಿಯಾಗುತ್ತದೆ. ಇದು ಜನರು ತಾವಾಗಿಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರೇರೇಪಿಸುವಂತ ವಿಷಯವಾಗಿದೆ ಎಂದು ಇಲ್ಲಿನ ಪಂಚಾಯತ್ ಅಧಿಕಾರಿ ರೀಮಾ ಅವರು ವಿವರಿಸುತ್ತಾರೆ.
ಹೀಗಾಗಿ, ಜನರು ತಮ್ಮ ಮನೆಯಿಂದ ಹೊರಬರುವ ಸಂದರ್ಭದಲ್ಲಿ ಕಡ್ಡಾಯವಾಗಿ ಛತ್ರಿಗಳನ್ನು ಹಿಡಿದುಕೊಂಡೇ ಬರಬೇಕೆಂದು ಇಲ್ಲಿನ ಗ್ರಾಮ ಪಂಚಾಯತ್ ಆದೇಶವನ್ನೇ ಹೊರಡಿಸುತ್ತದೆ. ಪರಸ್ಪರ ಒಂದಕ್ಕೊಂದು ತಾಗದ ಛತ್ರಿಗಳು ಕನಿಷ್ಟ ಒಂದು ಮೀಟರ್ ನಷ್ಟು ಅಂತರವನ್ನು ವ್ಯಕ್ತಿಗಳ ನಡುವೆ ಉಂಟುಮಾಡುವುದರಿಂದ ಕೋವಿಡ್ ವೈರಸ್ ಹರಡುವಿಕೆಗೆ ಅಷ್ಟರಮಟ್ಟಿಗೆ ತಡೆಯಾದಂತಾಗುತ್ತದೆ ಎಂಬುದು ಸಚಿವ ಥೋಮಸ್ ಐಸಾಕ್ ಅವರ ಅಭಿಪ್ರಾಯವಾಗಿದೆ.