Advertisement
ಕಳೆದ ಶನಿವಾರ ಪೇಜಾವರ ಮಠದ ಆವರಣದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರು. ಆದರೆ ಗೋ ಹಂತಕರನ್ನು ಶ್ರೀಕೃಷ್ಣ ಮಠಕ್ಕೆ ಕರೆಯಿಸಿ ಇಫ್ತಾರ್ ಕೂಟ ಆಯೋಜಿಸಿರುವ ಕ್ರಮ ಸರಿಯಲ್ಲ ಎಂಬುದು ಮುತಾಲಿಕ್ ಆರೋಪ.ಇಫ್ತಾರ್ ಕೂಟ ನಡೆಸುವ ಮೂಲಕ ಪೇಜಾವರಶ್ರೀಗಳು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಮುಸ್ಲಿಮರ ಮಸೀದಿಯೊಳಗಡೆ ಗಣೇಶೋತ್ಸವ, ಯುಗಾದಿ ಉತ್ಸವ ಆಚರಿಸಿದ್ದು ಇದೆಯೇ? ನೂರಾರು ವರ್ಷಗಳಿಂದ ನಾವೇ ಸೌಹಾರ್ದತೆ ತೋರುತ್ತಾ ಬಂದಿದ್ದೇವೆ ವಿನಃ, ಮುಸ್ಲಿಮರು ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆಯೇ ಎಂಬುದು ಮುತಾಲಿಕ್ ಪ್ರಶ್ನೆ.
ಇಫ್ತಾರ್ ಕೂಟ ನಡೆಸಿದ್ದನ್ನು ವಿರೋಧಿಸಿರುವ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪೇಜಾವರಶ್ರೀಗಳು, ನಾನು ಮೊದಲಿನಿಂದಲೂ ಕೋಮು ಸಾಮರಸ್ಯ ಬೆಳೆಸುವ ಹಾದಿಯಲ್ಲಿದ್ದೇನೆ. ಹಾಗಾಗಿ ನಾನು ಹಿಂದೂ ಧರ್ಮಕ್ಕೆ ಯಾವುದೇ ಹಾನಿ ಮಾಡಿಲ್ಲ. ನನ್ನದು ಸ್ವತಂತ್ರ ವ್ಯಕ್ತಿತ್ವ. ಹಿಂದೂ ಧರ್ಮದ ಬಗ್ಗೆ ಅವರಿಗಿಂತ ಚೆನ್ನಾಗಿ ನನಗೆ ಗೊತ್ತು. ಮುಸ್ಲಿಮರ ಜೊತೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಲಾಗಿದೆ. ಇದೊಂದು ಸಹಜ ಕಾರ್ಯಕ್ರಮ ದೊಡ್ಡ ವಿಷಯವೇನಲ್ಲ. ಇಫ್ತಾರ್ ಕೂಟದಿಂದ ಹಿಂದೂಗಳು ಉದಾರಿಗಳೆಂಬ ಸಂದೇಶ ರವಾನಿಸಿದಂತಾಗಿದೆ ಎಂದು ವಿಶ್ವೇಶತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ. ಜುಲೈ 2ರಂದು ರಾಜ್ಯಾದ್ಯಂತ ಪ್ರತಿಭಟನೆ:
ಶ್ರೀಕೃಷ್ಣ ಮಠದ ಆವರಣದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಪೇಜಾವರಶ್ರೀಗಳು ತಪ್ಪು ಸಂದೇಶ ರವಾನಿಸಿದ್ದಾರೆ. ಹಾಗಾಗಿ ಜುಲೈ 2ರಂದು ರಾಜ್ಯಾದ್ಯಂತ ಶ್ರೀರಾಮಸೇನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮುತಾಲಿಕ್ ತಿಳಿಸಿದ್ದಾರೆ.