Advertisement

ನೋಟುಗಳಲ್ಲಿ ಗಾಂಧಿ ಜತೆಗೆ ಠಾಗೋರ್‌, ಕಲಾಂ ಚಿತ್ರಗಳೂ ಮುದ್ರಣ?

09:41 AM Jun 06, 2022 | Team Udayavani |

ದೇಶದ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಚಿತ್ರಗಳನ್ನು ಕಾಣುತ್ತಿದ್ದೇವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಬ್ಯಾಂಕ್‌ನ ಹೊಸ ಪ್ರಸ್ತಾವನೆಯ ಪ್ರಕಾರ ಹೊಸತಾಗಿ ಮುದ್ರಣಗೊಳ್ಳಲಿರುವ ನೋಟುಗಳಲ್ಲಿ 11ನೇ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ, ಕವಿ ರವೀಂದ್ರನಾಥ ಠಾಗೋರ್‌ ಅವರ ಚಿತ್ರಗಳನ್ನು ಮಹಾತ್ಮಾ ಗಾಂಧಿಯವರ ಜತೆಗೆ ಸೇರ್ಪಡೆ ಮಾಡಲು ಚಿಂತನೆ ನಡೆಸಿದೆ

Advertisement

ಆರ್‌ಬಿಐನ ಹೊಸ ಪ್ರಸ್ತಾವನೆಯಲ್ಲಿ ಏನಿದೆ?
ಸೆಕ್ಯುರಿಟಿ ಪ್ರಿಂಟಿಂಗ್‌ ಆ್ಯಂಡ್‌ ಮಿಂಟಿಂಗ್‌ ಕಾರ್ಪೊರೇಷನ್‌ ಆಫ್ ಇಂಡಿಯಾ (ಎಸ್‌ಪಿಎಂಸಿಐಎಲ್‌) ಆರ್‌ಬಿಐ ಮಹಾತ್ಮಾ ಗಾಂಧಿ, ಠಾಗೋರ್‌, ಮತ್ತು ಕಲಾಂ ಅವರ ವಾಟರ್‌ಮಾರ್ಕ್‌ ಇರುವ ಚಿತ್ರಗಳ ಎರಡು ಮಾದರಿಗಳನ್ನು ಸಿದ್ಧಪಡಿಸಿದೆ. ಅವುಗಳನ್ನು ಐಐಟಿ ದೆಹಲಿಯ ಗೌರವ ಪ್ರಾಧ್ಯಾಪಕ ದಿಲೀಪ್‌ ಟಿ ಸಹಾನಿ ಅವರಿಗೆ ಸಲ್ಲಿಸಲಾಗಿದೆ. ಇಲೆಕ್ಟ್ರೋ ಮ್ಯಾಗ್ನೆಟಿಕ್‌ ಇನ್‌ಸ್ಟ್ರೆಮೆಂಟೇಷನ್‌ ಕ್ಷೇತ್ರದಲ್ಲಿ ಪರಿಣತಿ ಪಡೆದಿರುವ ಅವರು, ಮಾದರಿಗಳನ್ನು ಪರಿಶೀಲಿಸಿದ್ದಾರೆ ಮತ್ತು ಸರ್ಕಾರಕ್ಕೆ ಶಿಫಾರಸು ಮಾಡಲಿದ್ದಾರೆ.

ನೋಟುಗಳಲ್ಲಿ ಚಿತ್ರಗಳ ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರ ಯಾರದ್ದು?
ಹೊಸತಾಗಿ ಮುದ್ರಣವಾಗುವ ನೋಟುಗಳಲ್ಲಿ ಮೂವರ ಚಿತ್ರಗಳನ್ನು ಹಾಕುವ ಬಗ್ಗೆ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಸದ್ಯ ಸಲ್ಲಿಕೆಯಾಗಿರುವ ವಾಟರ್‌ಮಾರ್ಕ್‌ ಮಾದರಿಯ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಕರೆನ್ಸಿ ನೋಟುಗಳಲ್ಲಿ ಹಲವು ಮಂದಿಯ ಚಿತ್ರಗಳಿರುವ ವಾಟರ್‌ ಮಾರ್ಕ್‌ ಸೇರಿಸುವುದರ ಸಾಧಕ-ಬಾಧಕಗಳ ಬಗ್ಗೆ ಇನ್ನೂ ಚರ್ಚೆಯ ಹಂತದಲ್ಲಿ ಇದೆ.

ಐಡಿಯಾ ಹೊಳೆದದ್ದು ಯಾರಿಗೆ?
ಆರ್‌ಬಿಐ ಹೊಂದಿರುವ 9 ಆಂತರಿಕ ಸಮಿತಿಗಳ ಪೈಕಿ ಒಂದು ಈ ಸಲಹೆ ನೀಡಿದೆ. ಹೊಸ ರೀತಿಯ ಭದ್ರತಾ ಗುಣಲಕ್ಷಣಗಳನ್ನು ಹೊಂದಿರುವ ನೋಟುಗಳ ಮುದ್ರಣಕ್ಕೆ 2017ರಲ್ಲಿ ಚಿಂತನೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಅವರ ಜತೆಗೆ ಠಾಗೋರ್‌, ಕಲಾಂ ಅವರ ಚಿತ್ರಗಳನ್ನು ಸೇರ್ಪಡೆ ಮಾಡುವ ಬಗ್ಗೆ ಸಲಹೆ ಮಾಡಿತ್ತು. 2020ರಲ್ಲಿ ಈ ಬಗ್ಗೆ ವರದಿ ಸಲ್ಲಿಸಿತ್ತು.

ವಾಟರ್‌ ಮಾರ್ಕ್‌ ಮಾದರಿ ವಿನ್ಯಾಸವಾದದ್ದು ಎಲ್ಲಿ?
ಮೈಸೂರಿನಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟು ಮುದ್ರಣ ಪ್ರೈ.ಲಿ ಮತ್ತು ಮಧ್ಯಪ್ರದೇಶದ ಹೋಶಂಗಾಬಾದ್‌ನ ಸೆಕ್ಯುರಿಟಿ ಪೇಪರ್‌ ಮಿಲ್‌ನಲ್ಲಿ 2022ರಲ್ಲಿ ಅದರ ವಿನ್ಯಾಸ ಸಿದ್ಧಪಡಿಸಲು ಸೂಚಿಸಲಾಗಿತ್ತು. ಅಲ್ಲಿ ಸಿದ್ಧಗೊಂಡ ವಾಟರ್‌ಮಾರ್ಕ್‌ ಮಾದರಿಗಳನ್ನು ಸಹಾನಿ ಪರಿಶೀಲಿಸಿ, ತಿದ್ದುಪಡಿಗೆ ಸೂಚಿಸಿದ್ದರು.

Advertisement

1996ಕ್ಕಿಂತ ಹಿಂದಿನ ವರ್ಷಗಳಲ್ಲಿ ಏನಿತ್ತು?
1996ಕ್ಕಿಂತ ಹಿಂದೆ ಇದ್ದ ನೋಟುಗಳಲ್ಲಿ ಮತ್ತು ನಾಣ್ಯಗಳಲ್ಲಿ ಅಶೋಕ ಸ್ತಂಭದ ಚಿತ್ರ ಇತ್ತು. ಆ ವರ್ಷ ಆರ್‌ಬಿಐ ಎಲ್ಲಾ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರಗಳನ್ನು ಮುದ್ರಿಸಲು ನಿರ್ಧರಿಸಿತು.

ಇತರ ಮುಖಂಡರ ಚಿತ್ರಗಳು ನೋಟುಗಳಲ್ಲಿ ಏಕೆ ಇಲ್ಲ?
ಮಹಾತ್ಮಾ ಗಾಂಧೀಜಿ ಜತೆಗೆ ಇತರ ಪ್ರಮುಖರ ಚಿತ್ರಗಳನ್ನೂ ನೋಟುಗಳಲ್ಲಿ ಮುದ್ರಿಸಬೇಕು ಎಂಬ ಬಗ್ಗೆ ಬೇಡಿಕೆ 1990ರ ದಶಕದಲ್ಲಿಯೇ ಕೇಳಿ ಬಂದಿತ್ತು. 2014ರಲ್ಲಿ ಲೋಕಸಭೆಯಲ್ಲಿ ಈ ಬಗ್ಗೆ ನಡೆದಿದ್ದ ಚರ್ಚೆಗೆ ಉತ್ತರ ನೀಡಿದ್ದ ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ “2010ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಆರ್‌ಬಿಐನ ಸಮಿತಿ ಇತರ ಪ್ರಮುಖರ ಚಿತ್ರಗಳನ್ನು ನೋಟಿನಲ್ಲಿ ಮುದ್ರಿಸುವ ಬಗ್ಗೆ ಅಧ್ಯಯನ ನಡೆಸಿತ್ತು. ಎಲ್ಲಾ ರೀತಿಯ ಸಲಹೆ, ಸಮಾಲೋಚನೆ ನಡೆಸಿದ ಬಳಿಕ ಮಹಾತ್ಮಾ ಗಾಂಧಿಯವರೇ ದೇಶದ ಒಟ್ಟಾರೆ ಅಭಿಪ್ರಾಯ, ನೈತಿಕತೆಯನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಅವರಿಗಿಂತ ಬೇರೆ ವ್ಯಕ್ತಿಗಳ ಚಿತ್ರಗಳನ್ನು ನೋಟುಗಳಲ್ಲಿ ಮುದ್ರಿಸುವುದು ಬೇಡ’ ಎಂದು ತಿಳಿಸಿದ್ದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ದೆಯಲ್ಲಿ ಏನಿದೆ?
1934ರ ಆರ್‌ಬಿಐ ಕಾಯ್ದೆಯ ಸೆಕ್ಷನ್‌ 25ರಲ್ಲಿ ಕರೆನ್ಸಿ ನೋಟಿನ ವಿನ್ಯಾಸದ ಬಗ್ಗೆ ಉಲ್ಲೇಖ ಇದೆ. ಆದರೆ, ಯಾರ ಚಿತ್ರಗಳನ್ನು ಮುದ್ರಿಸಬೇಕು ಎಂಬುದರ ಬಗ್ಗೆ ಪ್ರಸ್ತಾಪಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next